ಆಸೀಸ್ ವಿರುದ್ಧದ ಸರಣಿಗೆ ತಂಡ ಪ್ರಕಟ; ಗಂಭೀರ್ಗೆ ಕೊಕ್
ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಬ್ಯಾಟ್ಸ್ಮನ್ ಶಿಖರ್ ಧವನ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.
ಇದೇ ಸಂದರ್ಭದಲ್ಲಿ, ಫಾರ್ಮ್ ಇಲ್ಲದೇ ಸೊರಗಿರುವ ಗೌತಮ್ ಗಂಭೀರ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಅವರು ಟೀಂ ಇಂಡಿಯಾವನ್ನು ಅಧಿಕೃತವಾಗಿ ಪ್ರಕಟಿಸಿದರು. ಫೆ. 22ರಂದು ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಚೆನ್ನೈನಲ್ಲಿ ಆರಂಭಗೊಳ್ಳಲಿದೆ.
ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಮಂಡಳಿ, ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದ ಭಾರತ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಿದೆ. ಜಹೀರ್ ಖಾನ್ ಹಾಗೂ ಉಮೇಶ್ ಯಾದವ್ ಇಬ್ಬರೂ ಗಾಯಗೊಂಡಿರುವ ಹಿನ್ನೆಲೆಯಲ್ಲಿ, ವೇಗಿಗಳ ಅವಶ್ಯಕತೆಯನ್ನು ಪೂರೈಸಲು ಭುವನೇಶ್ವರ್ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಕಳೆದ ನವೆಂಬರ್ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಂತರ ತಂಡದಿಂದ ಹೊರಗುಳಿದಿದ್ದ 32 ವರ್ಷದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರಿಗೆ ಪುನಃ ಸ್ಥಾನ ಕಲ್ಪಿಸಲಾಗಿದೆ. ಇದುವರೆಗೂ 99 ಟೆಸ್ಟ್ ಪಂದ್ಯಗಳನ್ನಾಡಿರುವ ಹರ್ಬಜನ್ ಸಿಂಗ್ ಅವರ ಪಾಲಿಗೆ ಆಸೀಸ್ ವಿರುದ್ಧದ ಮೊದಲನೆಯ ಟೆಸ್ಟ್ 100ನೇ ಟೆಸ್ಟ್ ಪಂದ್ಯವಾಗಲಿದೆ.
ಇನ್ನು, ತಂಡದಲ್ಲಿ ಆಗಿರುವ ಮೂರನೇ ಬದಲಾವಣೆಯೆಂದರೆ, ಗೌತಮ್ ಗಂಭೀರ್ ಅವರನ್ನು ಕೈಬಿಟ್ಟಿರುವುದು. ಅವರ ಜಾಗಕ್ಕೆ ಶಿಖರ್ ಧವನ್ ಅವರಿಗೆ ಜಾಗ ಕಲ್ಪಿಲಾಗಿದೆ. ಇನ್ನುಳಿದಂತೆ, ಫಿಟ್ನೆಸ್ ಸಮಸ್ಯೆಯ ಕಾರಣ ನೀಡಿ ಯುವರಾಜ್ ಸಿಂಗ್ ಅವರನ್ನೂ ತಂಡದಿಂದ ಹೊರಗಿಡಲಾಗಿದೆ.
ಗಂಭೀರ್ ಅವರಿಗೆ ಭಾರತ 'ಎ' ತಂಡದ ಸಾರಥ್ಯ ನೀಡಲಾಗಿದ್ದು, ಆಸೀಸ್ ವಿರುದ್ಧ ಫೆ. 16ರಿಂದ 18ರವರೆಗೆ ನಡೆಯಲಿರುವ ಆಸೀಸ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಅವರು ಭಾರತ 'ಎ' ತಂಡವನ್ನು ಮುನ್ನೆಡಸಲಿದ್ದಾರೆ.
ಸೆಹ್ವಾಗ್ ಬಚಾವ್: ಇತ್ತೀಚೆಗೆ, ಫಾರ್ಮ್ ಕಳೆದುಕೊಂಡು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಸೆಹ್ವಾಗ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಅಲ್ಲದೇ, ಹೊಟ್ಟೆನೋವಿನ ಸಮಸ್ಯೆಯಿಂದಾಗಿ ಇರಾನಿ ಕಪ್ ಪಂದ್ಯವನ್ನೂ ಅವರು ತಪ್ಪಿಸಿಕೊಳ್ಳಬೇಕಾಗಿತ್ತು. ಹೀಗಾಗಿ, ಅವರಿಗೆ ತಮ್ಮ ಫಾರ್ಮ್ ಸಾಬೀತುಪಡಿಸಲು ಅವಕಾಶ ಸಿಕ್ಕಿರಲೇ ಇಲ್ಲ. ಆದರೆ, ಅವರಿಗೆ ತಂಡದಲ್ಲಿ ಉಳಿಸಿಕೊಳ್ಳುವ ಮೂಲಕ ಅವರಿಗೆ ಮತ್ತೊಂದು ಅವಕಾಶವನ್ನು ಆಯ್ಕೆ ಮಂಡಳಿ ನೀಡಿದೆ. ಇನ್ನುಳಿದಂತೆ, ಮುರಳಿ ವಿಜಯ್, ಅಜಿಂಕ್ಯ ರಹಾನೆ ಅವರನ್ನೂ ತಂಡದಲ್ಲಿ ಆರಂಭಿಕರನ್ನಾಗಿ ಉಳಿಸಿಕೊಳ್ಳಲಾಗಿದೆ.
ಇರ್ಫಾನ್ ಪಠಾಣ್ ಅವರ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜಾ ಅವರನ್ನು ಆಲ್ರೌಂಡರ್ ಸ್ಥಾನದಲ್ಲಿ ಪುನಃ ತಂದು ನಿಲ್ಲಿಸಲಾಗಿದೆ.
ಗಂಭೀರ್ ಅವರನ್ನು ಹೊರತುಪಡಿಸಿ, ತಂಡದ ಬ್ಯಾಟಿಂಗ್ ಲೈನ್-ಅಪ್ನಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಅವರಿದ್ದಾರೆ.
ನಿರಾಸೆಗೊಂಡವರು: ಈ ಬಾರಿ ತಂಡಕ್ಕೆ ಆಯ್ಕೆಗೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದ ಶ್ರೀಶಾಂತ್, ವಾಸೀಂ ಜಾಫರ್ ಅವರಿಗೆ ನಿರಾಸೆಯಾಗಿದೆ. ಪಾದದ ಶಸ್ತ್ರ ಚಿಕಿತ್ಸೆಯಿಂದ ಕ್ರಿಕೆಟ್ನಿಂದ ದೂರ ಸರಿದಿದ್ದ ಶ್ರೀಶಾಂತ್ ಇತ್ತೀಚೆಗೆ ಪುನಃ ಕ್ರಿಕೆಟ್ಗೆ ಮರಳಿದ್ದರು.
ಅತ್ತ, ವಾಸೀಂ ಜಾಫರ್ ಅವರೂ ಉತ್ತಮ ಪ್ರದರ್ಶನವನ್ನು ತೋರಿದ್ದರು. ಇರಾನಿ ಕಪ್ ಪಂದ್ಯದಲ್ಲಿ ಮುಂಬೈ ಪರ ಮೊದಲ ಇನಿಂಗ್ಸ್ನಲ್ಲಿ 80 ರನ್ ಗಳಿಸಿದ್ದ ಅವರು ದ್ವಿತೀಯ ಇನಿಂಗ್ಸ್ನಲ್ಲಿ 100 ರನ್ ಬಾರಿಸಿದ್ದರು. ಇವರ ಈ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ, ಟೀಂ ಇಂಡಿಯಾಗೆ ಆಯ್ಕೆಗೊಳ್ಳಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಈ ಇಬ್ಬರನ್ನೂ ಆಯ್ಕೆ ಸಮಿತಿ ಪರಿಗಣಿಸಿಲ್ಲ. ಇನ್ನು, ವೇಗಿಗಳ ವಿಭಾಗಕ್ಕೆ ಇಶಾಂತ್ ಶರ್ಮಾ ಪ್ರಮುಖರಾಗಿದ್ದು, ಅವರ ನೇತೃತ್ವದಲಲ್ಲಿ ಭುವನೇಶ್ವರ್ ಕುಮಾರ್, ಅಶೋಕ್ ದಿಂಡಾ ದಾಳಿಗಿಳಿಯಲಿದ್ದಾರೆ.
ಪ್ರಕಟಗೊಂಡಿರುವ ತಂಡ
ಮಹೇಂದ್ರ ಸಿಂಗ್ ಧೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ ಪೂಜಾರ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಆರ್. ಅಶ್ವಿನ್, ಪ್ರಗ್ಯಾನ್ ಓಜಾ, ಹರ್ಭಜನ್ ಸಿಂಗ್, ಇಶಾಂತ್ ಶರ್ಮಾ, ಭುವನೇಶ್ವರ ಕುಮಾರ್, ಅಶೋಕ್ ದಿಂಡಾ.