4ನೇ ಸುತ್ತಿನಲ್ಲೂ ಆನಂದ್ ಪಂದ್ಯ ಡ್ರಾ
ಬಡೆನ್ ಬಡೆನ್: ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಗೆಲುವಿನ ಹಾದಿಗೆ ಮರಳಲು ಕಷ್ಟ ಪಡುತ್ತಿದ್ದು, ಇಲ್ಲಿ ನಡೆಯುತ್ತಿರುವ ಗ್ರೆಂಕ್ ಚೆಸ್ ಚಾಂಪಿಯನ್ಷಿಪ್ನ ನಾಲ್ಕನೇ ಸುತ್ತಿನಲ್ಲೂ ಡ್ರಾಗೆ ತೃಪ್ತಿಪಟ್ಟಿದ್ದಾರೆ.
ಪಂದ್ಯಾವಳಿಯ ಮೊದಲ ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದ ಆನಂದ್ ಸೋಮವಾರ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಡೇನಿಯಲ್ ಫ್ರಿಡ್ಮನ್ ವಿರುದ್ಧ ಡ್ರಾ ಸಾಧಿಸಿದ್ದಾರೆ.
ಈ ಮೂಲಕ ನಾಲ್ಕು ಪಂದ್ಯಗಳಿಂದ 2 ಅಂಕಗಳನ್ನು ಪಡೆದಿರುವ ಆನಂದ್ ಆರು ಆಟಗಾರರ ಡಬಲ್ ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ ಜಂಟಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇನ್ನು ಇಟಲಿಯ ಫ್ಯಾಬಿಯಾನೊ ಕರ್ವಾನ ಮತ್ತೇ ತಮ್ಮ ಉತ್ತಮ ಫಾರ್ಮ್ ಮುಂದುವರೆಸಿದ್ದು, ಇಂಗ್ಲೆಂಡ್ನ ಮೈಕಲ್ ಆ್ಯಡಮ್ಸ್ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ. ಈ ಮೂಲಕ 3 ಅಂಕಗಳನ್ನು ಪಡೆದುಕೊಂಡು ಅಗ್ರ ಸ್ಥಾನದಲ್ಲಿದ್ದಾರೆ.
4ನೇ ಸುತ್ತಿನ ಫಲಿತಾಂಶ: ಆನಂದ್(2)- ಫ್ರಿಡ್ಮನ್(2) ವಿರುದ್ಧ ಡ್ರಾ, ಮೈಕಲ್ ಆ್ಯಡಮ್ಸ್(1.5)- ಕರ್ವಾನ(3) ವಿರುದ್ಧ ಡ್ರಾ, ನಾಡಿಸ್ಕ್(2.5)- ಮಿಯರ್(1) ವಿರುದ್ಧ ಜಯಗಳಿಸಿದರು.