ಕಾನ್ಪುರ: ಅಸಭ್ಯ ವರ್ತನೆಯಿಂದ ಬಿಸಿಸಿಐನಿಂದ ಅಮಾನತ್ತುಗೊಂಡಿರುವ ಭಾರತದ ವೇಗಿ ಪ್ರವೀಣ್ ಕುಮಾರ್, ಬಿಸಿಸಿಐ ತಮ್ಮ ಮೇಲೆ ವಿಧಿಸಿರುವ ಶಿಕ್ಷೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ನಾನು ಈ ಅಮಾನತ್ತಿನ ಬಗ್ಗೆ ಮಾಧ್ಯಮಗಳ ಜತೆ ಮಾತನಾಡುವುದಿಲ್ಲ. ನಾನು ಈಗಾಗಲೇ ಬೇಸತ್ತಿದ್ದು, ನನಗೆ ಮತ್ತಷ್ಟು ತೊಂದರೆ ನೀಡಬೇಡಿ. ನನ್ನ ಮೌನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲಿದೆ ಎಂದು ಪ್ರವೀಣ್ ತಿಳಿಸಿದ್ದಾರೆ.
ಈ ಅಮಾನತ್ತಿನಿಂದ ಪ್ರವೀಣ್ ಕುಮಾರ್ ಮುಂಬರುವ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಉತ್ತರ ಪ್ರದೇಶ ತಂಡದ ಪರ ಭಾಗವಹಿಸುವಂತಿಲ್ಲ. ಹಾಗಾಗಿ ಉತ್ತರ ಪ್ರದೇಶ ತಂಡಕ್ಕೆ ಇದು ಸ್ವಲ್ಪ ಹಿನ್ನಡೆಯನ್ನುಂಟುಮಾಡಿದೆ.
ಪ್ರವೀಣ್ ಕುಮಾರ್ ಅನುಭವಿ ಅಂತಾರಾಷ್ಟ್ರೀಯ ಬೌಲರ್ ಆಗಿದ್ದು, ಆತನ ಉಪಸ್ಥಿತಿ ತಂಡಕ್ಕೆ ಸ್ವಲ್ಪ ಮಟ್ಟಿನ ಸಹಾಯವಾಗುತ್ತಿತ್ತು ಎಂದು ಯುಪಿಸಿಎ ಪ್ರಧಾನ ನಿರ್ವಾಹಕ ರೋಹಿತ್ ತಲ್ವಾರ್ ತಿಳಿಸಿದ್ದಾರೆ.