ಭಾರತದ ಸ್ಪಿನ್ ದಾಳಿಗೆ ಆಸೀಸ್ ಸೂಕ್ತ ಉತ್ತರ: ಫಿಲಿಪ್ ಹ್ಯೂಸ್
ಮೆಲ್ಬರ್ನ್: ಮಾಸಾಂತ್ಯಕ್ಕೆ ಆರಂಭಗೊಳ್ಳಲಿರುವ ಭಾರತ ವಿರುದ್ಧದ ಟೆಸ್ಟ್ ಸರಣಿಯನ್ನು ಎದುರಿಸಲು ಆಸ್ಟ್ರೇಲಿಯಾ ತಂಡ ಸಮರ್ಥವಾಗಿದ್ದು, ಭಾರತದ ಪ್ರಮುಖ ಅಸ್ತ್ರವಾದ ಸ್ಪಿನ್ ದಾಳಿಯನ್ನು ದಿಟ್ಟತನದಿಂದ ಹಿಮ್ಮೆಟ್ಟಿಸುವ ಛಾತಿ ಪಡೆದಿದೆ ಎಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಫಿಲಿಪ್ ಹ್ಯೂಸ್ ಹೇಳಿದ್ದಾರೆ. 'ಭಾರತದಂತಹ ಉಪಖಂಡದಲ್ಲಿನ ಪರಿಸ್ಥಿತಿಯಲ್ಲಿ ಆಡಲು ಬೇಕಾದ ಅಗತ್ಯತೆಗಳೊಂದಿಗೆ ಆಸೀಸ್ ತಂಡ ಅಭ್ಯಾಸದಲ್ಲಿ ನಿರತವಾಗಿದೆ. ಭಾರತದ ಸ್ಪಿನ್ ದಾಳಿ ನಮ್ಮ ಪಾಲಿಗೊಂದು ಸವಾಲಾಗಿದ್ದು, ಇದನ್ನು ಆಸೀಸ್ ತಂಡ ಸಮರ್ಥವಾಗಿ ಎದುರಿಸುತ್ತದೆ. ಆರಂಭಿಕ ಆಟಗಾರನಾಗಿ ನಾನೂ ಕಳೆದ 12 ತಿಂಗಳುಗಳಿಂದ ಸ್ಪಿನ್ ವಿರುದ್ಧ ಆಡುವುದನ್ನು ಕಲಿತಿದ್ದೇನೆ' ಎಂದು ಹ್ಯೂಸ್ ತಿಳಿಸಿದರು. ಸ್ಪಿನ್ ದಾಳಿಗೆ ಸ್ವೀಪ್ ಮಾಡುವ ಮೂಲಕ ಸೂಕ್ತ ಉತ್ತರ ನೀಡುತ್ತಿದ್ದ ಹಿಂದಿನ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಅವರ ತಂತ್ರವನ್ನು ಉಪಯೋಗಿಸಿದಲ್ಲಿ, ಭಾರತದ ಸ್ಪಿನ್ ದಾಳಿಯನ್ನು ಅನಾಯಾಸವಾಗಿ ಎದುರಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು. 'ಕಳೆದ ಹನ್ನೆರಡು ತಿಂಗಳುಗಳಿಂದ ನಾನು ಸ್ಪಿನ್ ವಿರುದ್ಧ ಆಡುವುದನ್ನು ಅಭ್ಯಾಸ ಮಾಡುತ್ತಿದ್ದಾಗ, ಮ್ಯಾಥ್ಯೂ ಹೇಡನ್ ಅವರ ಸ್ವೀಪ್ ಶಾಟ್ ನನ್ನ ಗಮನ ಸೆಳೆಯಿತು. ಅದನ್ನೇ ನಾನು ಅಳವಡಿಸಿಕೊಂಡಿದ್ದೆ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ನಮ್ಮ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ, ಅಲ್ಲಿನ ಪಿಚ್‌ನ ಪರಿಸ್ಥಿತಿಗೆ ತಕ್ಕಂತೆ ಎಷ್ಟರ ಮಟ್ಟಿಗೆ ಚೆಂಡು ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಅರಿತು ಅದರಂತೆ ಹೇಗೆ ಬ್ಯಾಟ್ ಮಾಡಬೇಕೆಂಬುದನ್ನು ಅಭ್ಯಸಿಸಿದೆ. ಅದರಂತೆ, ಭಾರತದ ವಿರುದ್ಧವೂ ಆಡಲಿದ್ದೇನೆ' ಎಂದಿದ್ದಾರೆ.