ಇಂದು ಆನಂದ್, ಆ್ಯಡಮ್ಸ್ ಸೆಣೆಸಾಟ
ಬಡೆನ್ ಬಡೆನ್: ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಗ್ರೆಂಕ್ ಕ್ಲಾಸಿಕ್ ಚೆಸ್ ಚಾಂಪಿಯನ್ಷಿಪ್ನ ಆರನೇ ಸುತ್ತಿನಲ್ಲಿ ಇಂಗ್ಲೆಂಡ್ನ ಮೈಕಲ್ ಆ್ಯಡಮ್ಸ್ ವಿರುದ್ಧ ಸೆಣೆಸಲಿದ್ದು, ಕಳೆದ ಪಂದ್ಯದಲ್ಲಿ ಪಡೆದ ಗೆಲುವಿನ ಫಲಿತಾಂಶವನ್ನೇ ಈ ಸುತ್ತಿನಲ್ಲೂ ಮುಂದುವರೆಸುವರೆ ಎಂಬ ಕುತೂಹಲ ಹೆಚ್ಚಿದೆ. ಇಂದು ನಡೆಯಲಿರುವ ಈ ಸುತ್ತಿನ ಪಂದ್ಯ ಈ ಇಬ್ಬರು ಆಟಗಾರರಿಗೂ ಮಹತ್ವದ ಪಂದ್ಯವಾಗಿದೆ. ಇದುವರೆಗೂ ಐದು ಸುತ್ತುಗಳಲ್ಲಿ 3 ಅಂಕಗಳನ್ನು ಪಡೆಯುವ ಮೂಲಕ ಆನಂದ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಆ್ಯಡಮ್ಸ್ ಐದು ಸುತ್ತುಗಳಿಂದ 2 ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಟಲಿಯ ಫ್ಯಾಬಿಯಾನೊ ಕರ್ವಾನ 3.5 ಅಂಕಗಳಿಂದ ಅಗ್ರ ಸ್ಥಾನದಲ್ಲಿದ್ದಾರೆ. ಮೊದಲ ಐದು ಪಂದ್ಯಗಳಲ್ಲಿ ಮೂರು ಕಪ್ಪು ಕಾಯಿಗಳ ಪಂದ್ಯಗಳನ್ನಾಡಿದ್ದು, ಮುಂದಿನ ಐದು ಪಂದ್ಯಗಳಲ್ಲಿ ಮೂರು ಬಿಳಿ ಕಾಯಿ ಪಂದ್ಯಗಳನ್ನಾಡಲಿದ್ದಾರೆ. ಹೀಗಾಗಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಕರ್ವಾನ ಅವರನ್ನು ಹಿಂದಿಕ್ಕಲು ಆನಂದ್ಗೆ ಉತ್ತಮ ಅವಕಾಶಗಳಿವೆ. ಕಳೆದ ಪಂದ್ಯದಲ್ಲಿ ಗೆಲುವಿನ ಲಯ ಕಂಡುಕೊಂಡಿರುವ ಆನಂದ್, ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸುವ ಅಗತ್ಯವಿದ್ದು, ಇಂದು ನಡೆಯಲಿರುವ ಆ್ಯಡಮ್ಸ್ ವಿರುದ್ಧದ ಪಂದ್ಯ ಆನಂದ್ ಪಾಲಿಗೆ ಹೆಚ್ಚು ಮಹತ್ವ ಪಡೆಯಲಿದೆ.
ಇಂದಿನ ಪಂದ್ಯಗಳು: ಆನಂದ್(3)-ಆ್ಯಡಮ್ಸ್(2), ಮಿಯರ್(1.5)-ಕರ್ವಾನ(3.5), ಫ್ರಿಡ್ಮನ್(2.5)-ನಾಡಿಸ್ಕ್(2.5).