ಕೊನೆಗೂ ಗೆಲುವು ಕಂಡ ವೆಸ್ಟ್ ವಿಂಡೀಸ್
ಬ್ರಿಸ್ಬೇನ್: ಐದು ಏಕದಿನ ಪಂದ್ಯ ಹಾಗೂ ಒಂದು ಟಿ20 ಪಂದ್ಯದ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್ ತಂಡ ಕೊನೆಗೂ ಗೆಲುವು ಕಂಡಿದೆ.
ಏಕದಿನ ಸರಣಿಯಲ್ಲಿ ಬಾರಿ ಮುಖಭಂಗ ಅನುಭವಿಸಿದ್ದ ಕೆರಿಬಿಯನ್ನರು ಈ ಪಂದ್ಯದಲ್ಲಿ 27 ರನ್ಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳನ್ನು ಕಳೆದುಕೊಂಡು 191 ರನ್ಗಳಿಸಿದರು. ಇದಕ್ಕುತ್ತರವಾಗಿ ಆಸೀಸ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 164ರನ್ಗಳಿಸಿ ಸೋಲೊಪ್ಪಿಕೊಂಡಿತು.
ಕ್ರಿಸ್ ಗೇಯ್ಲ್ ಹಾಗೂ ಜಾನ್ಸನ್ ಚಾರ್ಲ್ಸ್ ವಿಂಡೀಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಕ್ರಿಸ್ ಗೇಯ್ಲ್ ಆರಂಭದಲ್ಲೇ ಭರ್ಜರಿ ಸಿಕ್ಸರ್ಗಳಿಸಿ ಕಾಂಗರೂಗಳಿಗೆ ದುಃಸ್ವಪ್ನವಾಗುವಂತೆ ಕಂಡರು. ಆದರೆ ನಂತರದ ಕೆಲ ಎಸೆತಗಳಲ್ಲಿ ಗೇಯ್ಲ್ ಹ್ಯಾಸೆಲ್ವುಡ್ ಎಸೆತದಲ್ಲಿ ಕೊಲ್ಟರ್ನೈಲ್ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು.
ನಂತರ ಕ್ರೀಸ್ಗೆ ಬಂದ ಡರೇನ್ ಬ್ರಾವೊ ಆರಂಭಿಕ ಚಾರ್ಲ್ಸ್ ಜತೆ ತಂಡಕ್ಕೆ ಅತ್ಯಮೂಲ್ಯ 88ರನ್ಗಳ ಜತೆಯಾಟ ನೀಡಿದರು. ಈ ವೇಳೆ 35 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ಗಳಿಸಿದ ಚಾರ್ಲ್ಸ್ ಕೊಲ್ಟರ್ನೈಲ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ತಮ್ಮ ಉತ್ತಮ ಇನಿಂಗ್ಸ್ ಅಂತ್ಯಗೊಳಿಸಿದರು.
ನಂತರ ಕೆಲ ಹೊತ್ತಿನಲ್ಲೇ 27 ಎಸೆತಗಳಲ್ಲಿ 32ರನ್ಗಳಿಸಿದ್ದ ಬ್ರಾವೊ ದುರಾದೃಷ್ಟವಾಗಿ ರನೌಟ್ ಆದರು.
ಪೊಲಾರ್ಡ್ 17 ಎಸೆತಗಳಲ್ಲಿ 26ರನ್ಗಳಿಸಿದರು. 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದ ಪೊಲಾರ್ಡ್ ಉತ್ತಮ ಇನಿಂಗ್ಸ್ ಕಟ್ಟುವ ಭರವಸೆ ನೀಡಿದರು. ಆದರೆ ಈ ವೇಳೆ ದಾಳಿಗಿಳಿದ ಫಾಲ್ಕನರ್ ಪೊಲಾರ್ಡ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು.
ನಂತರ ಬಂದ ಡ್ವೇನ್ ಬ್ರಾವೊ 13, ಸಾಮಿ 20 ರನ್ಗಳಿಸಿದರು ಅಂತಿಮವಾಗಿ ರಸೆಲ್ 11 ಎಸೆತಗಳಲ್ಲಿ ಅಜೇಯ 23 ಹಾಗೂ ಡಿಯೊನರೇನ್ ಅಜೇಯ 6 ರನ್ಗಳಿಸಿ ತಂಡ 191 ರನ್ಗಳಿಸಲು ಕಾಣಿಕೆ ನೀಡಿದರು.
ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಕಾಂಗರೂ ಪಡೆ ಆರಂಭಿಕರಿಂದ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆ್ಯರನ್ ಫಿಂಚ್ 6 ಎಸೆತಗಳಲ್ಲಿ ಕೇವಲ 4 ರನ್ಗಳಿಸಿ ಸಾಮಿ ಎಸೆತದಲ್ಲಿ ಬೌಲ್ಡ್ ಆದರು. ನಂತರ ಜತೆಗೂಡಿದ ಮಾರ್ಷ್ ಹಾಗೂ ವೊಗ್ಸ್ ತಂಡಕ್ಕೆ 74 ರನ್ಗಳ ಜತೆಯಾಟ ನೀಡುವ ಮೂಲಕ ತಂಡವನ್ನು ಕುಸಿತದಿಂದ ಪಾರು ಮಾಡಿತು. ಆದರೆ ಸ್ವಲ್ಪ ಸಮಯದ ಅಂತರದಲ್ಲೇ 21 ರನ್ಗಳಿಸಿದ್ದ ಮಾರ್ಷ್ ಹಾಗೂ 51 ರನ್ಗಳಿಸಿ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಈ ಆಟಗಾರರು ರನೌಟ್ ಆದರು. ಇ ದು ಆಸೀಸ್ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
ನಂತರ ಬಂದ ಎಲ್ಲಾ ಆಟಗಾರರು ನಿಗದಿತ ಅಂತರದಲ್ಲಿ ತಮ್ಮ ವಿಕೆಟ್ ಕೈಚೆಲ್ಲುತ್ತಾ ಸೋಲಿನ ಸುಳಿಗೆ ಸಿಲುಕಿತು. ಬೇಯ್ಲಿ 15, ರೊಹರ್ 16, ಹ್ಯಾಡಿನ್ 22 ರನ್ಗಳಿಸಿ ಔಟಾದರೆ, ಫಾಲ್ಕನರ್ 7 ಹಾಗೂ ಕಟಿಂಗ್ ಶೂನ್ಯಕ್ಕೆ ಸುಸ್ತಾದರು.
ಅಂತಿಮವಾಗಿ ಕೊಲ್ಟರ್ನೈಲ್ ಅಜೇಯ 16 ಹಾಗೂ ಮೆಕೆ ಅಜೇಯ 6 ರನ್ಗಳಿಸಿ ತಂಡ 150ರ ಗಡಿ ದಾಟುವಂತೆ ಮಾಡಿದರು. ವೆಸ್ಟ್ ಇಂಡೀಸ್ ತಂಡದ ಪರ 4 ಓವರ್ಗಳಲ್ಲಿ 30 ರನ್ ನೀಡಿ 3 ವಿಕೆಟ್ ಕಬಳಿಸಿದ ಪೊಲಾರ್ಡ್ ಯಶಸ್ವಿ ಬೊಲರ್ ಎನಿಸಿದರು. ಬ್ಯಾಟಿಂಗ್ನಲ್ಲಿ 26 ರನ್ ಹಾಗೂ ಬೌಲಿಂಗ್ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಆಲ್ರೌಂಡ್ ಪ್ರದರ್ಶನ ನೀಡಿದ ಪೊಲಾರ್ಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ 191/6 (20 ಓವರ್)
ಚಾರ್ಲ್ಸ್ 57 (35)
ಡರೇನ್ ಬ್ರಾವೊ 32 (27)
ಬೌಲಿಂಗ್: ಫಾಲ್ಕನರ್ 28/3, ಕೊಲ್ಟರ್ನೈಲ್ 36/1
ಆಸ್ಟ್ರೇಲಿಯಾ 164/8 (20 ಓವರ್)
ವೊಗ್ಸ್ 51 (33)
ಹ್ಯಾಡಿನ್ 22 (11)
ಬೌಲಿಂಗ್: ಪೊಲಾರ್ಡ್ 30/3, ನಾರಾಯಣ್ 19/2