ಜಯದೊಂದಿಗೆ ಮಾನ ಉಳಿಸಿಕೊಂಡ ಆಫ್ರಿಕಾ
ಕಟಕ್: ಈ ಬಾರಿಯ ಮಹಿಳಾ ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತದಲ್ಲಿ ಇದುವರೆಗೆ ಯಾವುದೇ ಪಂದ್ಯವನ್ನೂ ಗೆಲ್ಲದೇ, 'ಶೂನ್ಯ' ಅಂಕದೊಂದಿಗೆ ಸೂಪರ್ ಸಿಕ್ಸ್ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ, ಬುಧವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 110 ರನ್‌ಗಳ ಭಾರೀ ಅಂತರದಿಂದ ಸೋಲಿಸಿ, ಮಾನ ಉಳಿಸಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ, 36.4 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟ್ ಆಯಿತು.
ಲಂಕಾ ಹಾಗೂ ದಕ್ಷಿಣ ಆಫ್ರಿಕಾ ಎರಡೂ ತಂಡಗಳು, ಈಗಾಗಲೇ ವಿಶ್ವಕಪ್ ಫೈನಲ್ ಪ್ರವೇಶಿಸುವ ಅವಕಾಶದಿಂದ ವಂಚಿತವಾಗಿರುವ ಹಿನ್ನೆಲೆಯಲ್ಲಿ, ಬುಧವಾರ ನಡೆದ ಈ ಪಂದ್ಯ ಕೇವಲ ಔಪಚಾರಿಕ ಪಂದ್ಯವಾಗಿತ್ತು.
ಆಸರೆಯಾದ ಮಧ್ಯಮ ಕ್ರಮಾಂಕ: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ, ಆರಂಭದಲ್ಲೇ ಎಡವುತ್ತಾ ಸಾಗಿತು. ತಂಡದ ಮೊತ್ತ 67 ರನ್ ಆಗುವಷ್ಟರಲ್ಲಿ ಆರಂಭಿಕರಾದ ಪೊಟ್ಜೀಟರ್, ತ್ರಿಶಾ ಚೆಟ್ಟಿ ಹಾಗೂ ಮೂರನೇ ಕ್ರಮಾಂಕದ ಡು ಪ್ರೀಜ್ ಅವರನ್ನು ಕಳೆದುಕೊಂಡಿತು.
ಇನಿಂಗ್ಸ್ ಆರಂಭಿಸಿದ ಪೊಟ್ಜೀಟರ್ ಹಾಗೂ ಚೆಟ್ಟಿ ಅವರು, ಮೊದಲ ವಿಕೆಟ್‌ಗೆ ಸೇರಿಸಿದ್ದು ಕೇವಲ ನಾಲ್ಕು ರನ್ ಮಾತ್ರ. 3ನೇ ಓವರ್‌ನಲ್ಲೇ ಅವರು ಔಟಾಗಿ ಹೊರನಡೆದರು. ಅವರ ನಂತರ, ಕ್ರೀಸ್‌ಗೆ ಆಗಮಿಸಿದ್ದು, ಡು ಪ್ರೀಸ್. ಈ ಜೋಡಿ 2ನೇ ವಿಕೆಟ್‌ಗೆ 20 ರನ್ ಸೇರಿಸುವಷ್ಟರಲ್ಲಿ ಬೇರ್ಪಟ್ಟಿತು. ಪೊಟ್ಜೀಟರ್ ಅವರು ಇನಿಂಗ್ಸ್‌ನ 12ನೇ ಓವರ್‌ನಲ್ಲಿ ಹೊರನಡೆದರು.
ಈ ಹಂತದಲ್ಲಿ ಇನಿಂಗ್ಸ್‌ನ ಜವಾಬ್ದಾರಿ ಹೊತ್ತ ಡು ಪ್ರೀಜ್ ಅವರು, ನಾಲ್ಕನೇ ಕ್ರಮಾಂಕದ ಕ್ರಿಝೆಲ್ಡಾ ಬ್ರಿಟ್ಸ್ ಜೊತೆಗೂಡಿ 3ನೇ ವಿಕೆಟ್‌ಗೆ 43 ರನ್ ಸೇರಿಸಿದರು. 24ನೇ ಓವರ್‌ನಲ್ಲಿ ಡು ಪ್ರೀಜ್ ಅವರ ವಿಕೆಟ್ ಉರುಳಿತು. ಆಗ, ಕ್ರಿಝೆಲ್ಡಾ ಬ್ರಿಟ್ಸ್‌ಗೆ ಜೋಡಿಯಾಗಿದ್ದು ಶಾಂಡ್ರೆ ಫ್ರಿಟ್ಸ್. ಈ ಇಬ್ಬರೂ 4ನೇ ವಿಕೆಟ್‌ಗೆ 70 ರನ್‌ಗಳ ಜೊತೆಯಾಟವಾಡಿದರು. 38ನೇ ಓವರ್‌ನಲ್ಲಿ ಬ್ರಿಟ್ಸ್ ಅವರು ಎಲ್‌ಬಿಡಬ್ಲ್ಯೂಗೆ ಒಳಗಾದಾಗ, ಅವರ ಜಾಗಕ್ಕೆ ಬಂದಿದ್ದು, ವ್ಯಾನ್ ನೀಕರ್ಕ್. ಈ ಜೋಡಿ, 5ನೇ ವಿಕೆಟ್‌ಗೆ 71 ರನ್ ಸೇರಿಸಿತು. ವೈಯಕ್ತಿಕವಾಗಿ 64 ರನ್ ಗಳಿಸಿದ್ದ ಫ್ರಿಟ್ಸ್ ಅವರು 48ನೇ ಓವರ್‌ನಲ್ಲಿ ಔಟಾದರು. ಅದರ ಮುಂದಿನ ಓವರ್‌ನಲ್ಲೇ ವ್ಯಾನ್ ನೀಕರ್ಕ್ ಅವರೂ ಹೊರನಡೆದರು. ಆನಂತರ, ದಕ್ಷಿಣ ಆಫ್ರಿಕಾದ ಇನಿಂಗ್ಸ್ ಮತ್ತೆ ಕುಸಿತ ಕಂಡಿತು. ಅಂತಿಮ ಹಂತದ ಬ್ಯಾಟರ್‌ಗಳು ಯಾರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಆಡಲಿಲ್ಲ.
ಲಂಕಾ ಠುಸ್: ಲಂಕಾದ ಬೌಲಿಂಗ್ ದಾಳಿಗೆ ಎಡವುತ್ತಲೇ ಎದುರಿಸಿದ ದಕ್ಷಿಣ ಆಫ್ರಿಕಾ, 227 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಈ ಮೊತ್ತವನ್ನು ಮೀರುವುದು ಲಂಕಾಕ್ಕೆ ಸಾಧ್ಯವಾಗಲಿಲ್ಲ.
ಲಂಕಾ ಮಾಡಿದ್ದ ಬೌಲಿಂಗ್ ದಾಳಿಗಿಂತಲೂ, ಹರಿಣಗಳ ಬೌಲಿಂಗ್ ದಾಳಿ ಹೆಚ್ಚು ಮೊನಚಾಗಿತ್ತು. ಹರಿಣಗಳ ಈ ಮೊನಚು ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದೆಂದರೆ ಅದು ಆರಂಭಿಕ ಆಟಗಾರ್ತಿ ಮಾತ್ರ ಜಯಾಗಾನಿ ಮಾತ್ರ. ಉತ್ತಮವಾಗಿ ಇನಿಂಗ್ಸ್ ಆರಂಭಿಸಿದ್ದ ಅವರು,74 ಎಸೆತಗಳಲ್ಲಿ ಅವರು 9 ಬೌಂಡರಿಗಳುಳ್ಳ 63 ರನ್ ಗಳಿಸಿದ ಅವರು, ಇನಿಂಗ್ಸ್‌ನ 30ನೇ ಓವರ್‌ನವರೆಗೂ ಹೋರಾಟ ನಡೆಸಿದರು.
ಅವರ ಈ ಹೋರಾಟಕ್ಕೆ ಲಂಕಾದ ಯಾರೊಬ್ಬ ಬ್ಯಾಟರ್‌ಗಳಿಂದಲೂ ಉತ್ತಮ ಸಾಥ್ ಸಿಕ್ಕಲಿಲ್ಲ. 4ನೇ ವಿಕೆಟ್‌ಗೆ ಜಯಾಗನಿ ಹಾಗೂ ಡೋಲವಟ್ಟೆ ಇಬ್ಬರೂ, ನಾಲ್ಕನೇ ವಿಕೆಟ್‌ಗೆ 64 ರನ್ ಸೇರಿಸಿದ್ದು ಬಿಟ್ಟರೆ, ಲಂಕಾದ ಆಟಗಾರ್ತಿಯರಿಂದ ಇಂಥ ದೊಡ್ಡ ಜೊತೆಯಾಟ ಬರಲೇ ಇಲ್ಲ.
ಅಂತಿಮವಾಗಿ, 36.4 ಓವರ್‌ಗಳಲ್ಲಿ 117 ರನ್ ಪೇರಿಸುವ ಹೊತ್ತಿಗೆ ಲಂಕಾ, ತನ್ನೆಲ್ಲಾ ವಿಕೆಟ್‌ಗಳನ್ನೂ ಕಳೆದುಕೊಂಡಿತು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ: 227/8 (50 ಓವರ್)
ಫ್ರಿಟ್ಸ್ 64 (71), ಬ್ರಿಟ್ಸ್ 52 (69),
ಬೌಲಿಂಗ್: ಸೇನೆವಿರತ್ನ 44/3, ಕೌಶಲ್ಯ 33/1
ಶ್ರೀಲಂಕಾ: 117/10 (36.4 ಓವರ್)
ಜಯಾಗನಿ ರನೌಟ್ 63 (74),
ಡೋಲಾವಟ್ಟೆ 21 (76),
ಬೌಲಿಂಗ್: ವ್ಯಾನ್ ನಿಕೆರ್ಕ್ 18/4
ಇಸ್ಮಾಯಿಲ್ 22/2
ಪಂದ್ಯಶ್ರೇಷ್ಠ: ವ್ಯಾನ್ ಡಿ ನಿಕೆರ್ಕ್ (ದಕ್ಷಿಣ ಆಫ್ರಿಕಾ)