ಫೈನಲ್‌ಗೆ ಲಗ್ಗೆಯಿಟ್ಟ ವಿಂಡೀಸ್
ಮಹಿಳಾ ವಿಶ್ವಕಪ್: ಸೋತರೂ ಪ್ರಶಸ್ತಿ ಸುತ್ತಿಗೆ ಕಾಲಿಟ್ಟ ಆಸ್ಟ್ರೇಲಿಯಾ
ಮುಂಬೈ: ಡಾಟಿನ್ ಅವರ ಉಪಯುಕ್ತ ಬ್ಯಾಟಿಂಗ್ ಹಾಗೂ ಡೇಲೇ ಅವರ ಚಮತ್ಕಾರದ ಬೌಲಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡ, ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ವಿಶ್ವಕಪ್ ಸೂಪರ್ ಲೀಗ್ ಪಂದ್ಯದಲ್ಲಿ ಜಯಗಳಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್, 47 ಓವರ್‌ಗಳಲ್ಲಿ 164 ರನ್‌ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಆಸೀಸ್, 48.2 ಓವರ್‌ಗಳಲ್ಲಿ 156 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. 9.2 ಓವರ್ ಬೌಲ್ ಮಾಡಿದ ವಿಂಡೀಸ್‌ನ ಡ್ಯಾಲೇ ಅವರು, ಕೇವಲ 22 ರನ್ ನೀಡಿ 3 ವಿಕೆಟ್ ಪಡೆದು, ವಿಂಡೀಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆಸರೆಯಾದ ಡಾಟಿನ್: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ವೆಸ್ಟ್ ಇಂಡೀಸ್, ಆರಂಭದಿಂದಲೂ ಮುಗ್ಗರಿಸುತ್ತಾ ಸಾಗಿತು. ಕೇವಲ 17 ರನ್‌ಗಳ ಮೊತ್ತಕ್ಕೆ ಆರಂಭಿಕರಾದ ನೆರೋ ಅವರನ್ನು ಕಳೆದುಕೊಂಡ ವಿಂಡೀಸ್, ಆನಂತರ, 31 ರನ್ ಮೊತ್ತಕ್ಕೆ ಮೂರನೇ ಕ್ರಮಾಂಕದ ಕ್ಯಾಂಪ್‌ಬೆಲ್ ಅವರನ್ನು ಕಳೆದುಕೊಂಡಿತು.
ಈ ಹಂತದಲ್ಲಿ ಇನಿಂಗ್ಸ್ ಜವಾಬ್ದಾರಿ ಹೊತ್ತುಕೊಂಡಿದ್ದು, ಮತ್ತೊಬ್ಬ ಆರಂಭಿಕ ಆಟಗಾರ್ತಿ ಮೆಕ್‌ಲೀನ್ ಹಾಗೂ ನಾಲ್ಕನೇ ಕ್ರಮಾಂಕದ ಬ್ಯಾಟರ್ ಕಿಶೋನಾ ಎ. ನೈಟ್. ಆದರೆ, ಈ ಜೋಡಿಯೂ ಕ್ರೀಸ್‌ನಲ್ಲಿ ಹೆಚ್ಚು ಬಾಳಲಿಲ್ಲ. ತಂಡದ ಮೊತ್ತಕ್ಕೆ ಕೇವಲ 5 ರನ್ ಸೇರಿಸುವಷ್ಟರಲ್ಲಿ ಮೆಕ್‌ಲೀನ್ ಅವರು ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಆಗ, ಕ್ರೀಸ್‌ಗೆ ಆಗಮಿಸಿದ್ದು ಮಧ್ಯಮ ಕ್ರಮಾಂಕದ ಬ್ಯಾಟರ್ ಸ್ಟೆಫಾನಿ ಟೇಲರ್. ಈ ಜೋಡಿ, ತಂಡದ ಮೊತ್ತಕ್ಕೆ 17 ರನ್ ಸೇರಿಸಿತು. ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಟೇಲ್ ಅವರು ಔಟಾಗುವ ಮೂಲಕ ಈ ಜೋಡಿ, ಮುರಿಯಿತು.
ಅವರ ಹಿಂದೆಯೇ ಹೊರನಡೆದಿದ್ದು ಕಿಶೋನಾ ಎ. ನೈಟ್.
ಹೀಗೆ, ಟೇಲರ್ ಹಾಗೂ ಕಿಶೋನಾ ಇಬ್ಬರೂ ಔಟಾದ ಮೇಲೆ ಇನಿಂಗ್ಸ್‌ನ ಭಾರತ ಹೊತ್ತಿದ್ದು, ನಾಯಕಿ ಮೆರಿಸ್ಸಾ ಆ್ಯಂಗುಲೀರಾ ಹಾಗೂ ಡೀನ್‌ಡ್ರಾ ಡಾಟಿನ್.
ಇವರಿಬ್ಬರೂ ತಂಡದ ಮೊತ್ತಕ್ಕೆ 27 ರನ್ ಸೇರಿಸಿದರು. ವೈಯಕ್ತಿಕವಾಗಿ 7 ರನ್ ಗಳಿಸಿದ್ದ ಆ್ಯಂಗುಲೀರಾ ಅವರು, ಇನಿಂಗ್ಸ್‌ನ 24ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದ ನಂತರ, ಡಾಟಿನ್‌ಗೆ ಜೊತೆಯಾದ ಡೇಲೇ, ಕ್ರೀಸ್‌ಗೆ ಬಂದಾಗಿನಿಂದ ಹೊಡಿಬಡಿ ಆಟಕ್ಕೆ ಮುಂದಾದರು. 2 ಎಸೆತಗಳನ್ನು ಎದುರಿಸಿದ ಅವರು, ಒಂದು ಬೌಂಡರಿ ಹೊಡೆದು ವಿಕೆಟ್ ಒಪ್ಪಿಸಿ ಹೊರನಡೆದರು. ಅವರ ನಂತರ ಬಂದಿದ್ದು, ಕ್ವಿಂಟೈನ್.
ಡಾಟಿನ್ ಹಾಗೂ ಕ್ವಿಂಟೈನ್ ಜೋಡಿ 8ನೇ ವಿಕೆಟ್‌ಗೆ, 43 ರನ್ ಪೇರಿಸಿತು. ವಿಂಡೀಸ್ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತದ ಜೊತೆಯಾಟ ಬಂದಿದ್ದು ಈ ಜೋಡಿಯಿಂದಲೇ. ಆದರೆ, ತಂಡದ ಮೊತ್ತ 135 ರನ್ ಆಗಿದ್ದಾಗ, ಡಾಟಿನ್ ಅವರು ವಿಕೆಟ್ ಒಪ್ಪಿಸಿದರು. ಒಟ್ಟು 67 ಎಸೆತಗಳಿಂದ ಅವರು 60 ರನ್ ಗಳಿಸಿದರು.
ಡಾಟಿನ್ ಔಟಾದ ಮೇಲೆ, ಕ್ವಿಂಟೈನ್ ಹಾಗೂ ಅನಿಸಾ ಮಹಮ್ಮದ್ ಹಾಗೂ ಅಂತಿಮ ಬ್ಯಾಟರ್ ಆದ ಸ್ಮಾರ್ಟ್ ಯಾರೊಬ್ಬರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ. 164 ರನ್ ಗಳಿಸುವಲ್ಲಿಗೆ ವೆಸ್ಟ್ ಇಂಡೀಸ್ ತನ್ನೆಲ್ಲಾ ವಿಕೆಟ್‌ಗಳನ್ನೂ ಕಳೆದುಕೊಂಡಿತು.
ಕುಸಿದ ಕಾಂಗರೂಗಳು: ತಮ್ಮ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದ ಆಸೀಸ್ ತಂಡದ ಇನಿಂಗ್ಸ್ ಮೇಲೆ ವಿಂಡೀಸ್ ಬೌಲರ್‌ಗಳು ಮುಗಿಬಿದ್ದರು. ಅದರಲ್ಲೂ, ಕೆರಿಬಿಯನ್ನರ ಬೌಲಿಂಗ್ ಪಡೆಯಲ್ಲಿ ಮಿಂಚಿದ್ದು ಡೇಲೇ.
ಆಸೀಸ್ ಕೇವಲ 1 ರನ್ ಗಳಿಸಿದ್ದಾಗಲೇ ಆರಂಭಿಕರಾದ ಲ್ಯಾನಿಂಗ್ ಅವರ ವಿಕೆಟ್ ಗಳಿಸಿದ ಡೇಲೆ, ಆನಂರ, ಮತ್ತೊಬ್ಬ ಆರಂಭಿಕ ಆಟಗಾರ್ತಿಯಾದ ಹೇನ್ಸ್ ಅವರ ವಿಕೆಟನ್ನೂ ಕೆಡವಿದರು.
ಅವರ ದಾಳಿಗೆ ಕೈ ಜೋಡಿಸಿದ ಟೇಲರ್, ನಾಲ್ಕನೇ ಕ್ರಮಾಂಕದ ಬ್ಲಾಕ್‌ವೆಲ್ ಹಾಗೂ ರಿನೀ ಚಾಪೆಲ್ ಅವರನ್ನು ಅಲ್ಪಮೊತ್ತಕ್ಕೇ ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು. ಇನ್ನು, ಭರವಸೆಯ ಆಟಗಾರ್ತಿಯರಾದ ಸ್ಟಾಲೇಕರ್ ಹಾಗೂ ಹಂಟರ್ ಇಬ್ಬರೂ ರನೌಟ್ ಆದರೆ, ನಾಯಕಿ ಜೂಡಿ ಫೀಲ್ಡ್ಸ್ ಅವರನ್ನು ಸ್ಮಾರ್ಟ್ ಪೆವಿಲಿಯನ್‌ಗೆ ಅಟ್ಟುವ ಮೂಲಕ ಆಸೀಸ್ ಜಯ ಅವಕಾಶವನ್ನು ಮತ್ತಷ್ಟು ಕ್ಷೀಣಿಸಿದರು. ಇನಿಂಗ್ಸ್‌ನ 49ನೇ ಓವರ್‌ನಲ್ಲಿ ಮತ್ತೆ ಆಕ್ರಮಣ ಮಾಡಿದ ಡೇಲೇ, ಫರ್ಲಿಂಗ್ ಅವರ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ, ಆಸ್ಟ್ರೇಲಿಯಾ 156 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್‌ಗಳನ್ನೂ ಕಳೆದುಕೊಂಡು 8 ರನ್‌ಗಳ ಅಂತರದಲ್ಲಿ ಪರಾಭವಗೊಂಡಿತು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್: 164/10 (47 ಓ.)
ಡಾಟಿನ್ 60 (67), ಮೆಕ್‌ಲೀನ್ 26 (34)
ಬೌಲಿಂಗ್: ಶುಟ್ 50/3, ಫರ್ಲಿಂಗ್ 27/3
ಆಸ್ಟ್ರೇಲಿಯಾ: 156/10 (48.2 ಓ.)
ಬ್ಲಾಕ್‌ವೆಲ್ 45 (83), ಕ್ಯಾಮೆರೂನ್ 39 (60)
ಬೌಲಿಂಗ್: ಡೇಲೇ 22/3, ಟೇಲರ್ 26/2
ಪಂದ್ಯಶ್ರೇಷ್ಠ: ಡಾಟಿನ್