3ನೇ ಸ್ಥಾನದ ಮೇಲೆ ಇಂಗ್ಲೆಂಡ್ ಕಣ್ಣು
ಮುಂಬೈ: ಮಹಿಳಾ ವಿಶ್ವಕಪ್ ಅನ್ನು ತನ್ನಲ್ಲೇ ಉಳಿಸಿಕೊಳ್ಳುವ ಇಂಗ್ಲೆಂಡ್ ತಂಡದ ಕನಸು ಭಗ್ನಗೊಂಡಿದ್ದರೂ, ಇದೀಗ ಆ ತಂಡ ಪಂದ್ಯಾವಳಿಯ ಮೂರನೇ ಸ್ಥಾನವನ್ನು ಪಡೆಯುವ ಹಂಬಲದಲ್ಲಿದೆ. ಪಂದ್ಯಾವಳಿಯ ಮೂರನೇ ಸ್ಥಾನಕ್ಕಾಗಿ ಶುಕ್ರವಾರ ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡ, ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಬುಧವಾರ ನಡೆದ ಸೂಪರ್ ಸಿಕ್ಸ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಜಯ ಗಳಿಸಿದರೂ, ಫೈನಲ್‌ನಲ್ಲಿ ಆಡುವ ಕುರಿತಾಗಿ ಆ ತಂಡ ಹೊಂದಿದ್ದ ಕನಸು ನನಸಾಗಿರಲಿಲ್ಲ.
ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಮತ್ತೊಂದು ಸೂಪರ್ ಸಿಕ್ಸ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಜಯ ಗಳಿಸಿದ ಹಿನ್ನೆಲೆಯಲ್ಲಿ, ಅಂಕಗಳ ಆಧಾರದ ಮೇಲೆ ವಿಂಡೀಸ್ ತಂಡ ಫೈನಲ್ ತಲುಪಿತ್ತು. ಹಾಗಾಗಿ, ಪ್ರಶಸ್ತಿ ಸುತ್ತಿನಲ್ಲಿ ಸೆಣೆಸುವ ಕನಸಿನಿಂದ ದೂರವೇ ಉಳಿದ ಇಂಗ್ಲೆಂಡ್, ಈಗ ಪಂದ್ಯಾವಳಿಯ ಮೂರನೇ ಸ್ಥಾನವನ್ನಾದರೂ ಗಳಿಸಿ, ಸಮಾಧಾನಪಟ್ಟುಕೊಳ್ಳುವ ಇರಾದೆ ಹೊಂದಿದೆ.
ಚಾರ್ಲೋಟ್ ಎಡ್ವರ್ಡ್ ನಾಯಕತ್ವದ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬಲ ಗಣನೀಯ ಏರಿಕೆ ಕಂಡಿದೆ. ಸೂಪರ್ ಸಿಕ್ಸ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಶತಕಾರ್ಧ ಸಿಡಿಸಿದ ಸರಾ ಟೇಲರ್, ಆ ತಂಡದ ಹೊಸ ಬ್ಯಾಟಿಂಗ್ ಭರವಸೆಯಾಗಿದ್ದಾರೆ.
ಪಂದ್ಯಾವಳಿಯ ಲೀಗ್ ಹಂತದಲ್ಲಿ ಭಾರತ ವಿರುದ್ಧ 35 ರನ್ ಗಳಿಸಿದ್ದ ಸರಾ, ಆನಂತರದ ಪಂದ್ಯಗಳಲ್ಲಿ ಸತತವಾಗಿ ಡಕ್‌ಔಟ್ ಆಗಿದ್ದರು. ಆದರೆ, ಕಿವೀಸ್ ವಿರುದ್ಧದ ಪಂದ್ಯದಲ್ಲಿ ಅವರು ತಮ್ಮ ವೈಫಲ್ಯದಿಂದ ಹೊರಬಂದು ಶತಕಾರ್ಧ ಗಳಿಸಿದರಲ್ಲದೇ, ತಂಡದ ಜಯದಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿದ್ದಾರೆ. ಇದು ಆ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಹೊಸ ತಾಕತ್ತು ತಂದಿದೆ.
ಸಾರಾ ಅವರನ್ನು ಹೊರತುಪಡಿಸಿದಂತೆ, ಇಂಗ್ಲೆಂಡ್ ತಂಡದ ಆರಂಭಿಕರೂ ಆಗಿರುವ ಚಾರ್ಲೋಟ್ ಎಡ್ವರ್ಡ್ಸ್ ಹಾಗೂ ಡೇನಿಯೆಲೆ ವ್ಯಾಟ್ ಅವರಿಬ್ಬರೂ ತಂಡಕ್ಕೆ ಇದುವರೆಗೂ ಉತ್ತಮ ಆರಂಭಿಕರಾಗಿದ್ದು, ಶುಕ್ರವಾರದ ಪಂದ್ಯದಲ್ಲಿ ಅವರಿಬ್ಬರೂ ಗಟ್ಟಿಯಾಗಿ ಕ್ರೀಸ್‌ನಲ್ಲಿ ನಿಂತು ಬ್ಯಾಟ್ ಬೀಸಿದರೆ, ಇಂಗ್ಲೆಂಡ್ ಒಂದು ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಬಹುದು.
ಇನ್ನು, ಬೌಲಿಂಗ್ ವಿಭಾಗದಲ್ಲಿ ಆಂಗ್ಲರ ಪಡೆಯಲ್ಲಿ ಕ್ಯಾಥೆರಿನ್ ಬ್ರಂಟ್, ಆನ್ಯಾ ಶ್ರುಬ್‌ಸೋಲ್ ಅವರಂಥಾ ಪ್ರತಿಭಾನ್ವಿತೆಯರು ಇದ್ದಾರೆ. ಶ್ರುಬ್‌ಸೋಲ್ ಅವರು ಪಂದ್ಯಾವಳಿಯಲ್ಲಿ ಐದು ಪಂದ್ಯಗಳಿಂದ 13 ವಿಕೆಟ್ ಪಡೆದಿದ್ದಾರೆ. ಆದರೆ, ಗಾಯಗೊಂಡಿದ್ದ ಕಾರಣ ಅವರು ಕಿವೀಸ್ ವಿರುದ್ಧ ನಡೆದ ಸೂಪರ್ ಸಿಕ್ಸ್ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ, ಶುಕ್ರವಾರದ ನಡೆಯಲಿರುವ ಪಂದ್ಯದಲ್ಲಿ ಅವರು ಮತ್ತೆ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಅತ್ತ, ಕಿವೀಸ್ ತಂಡದಲ್ಲಿ ಮೂರನೇ ಕ್ರಮಾಂಕದ ಬ್ಯಾಟರ್ ಹಾಗೂ ಉಪ-ನಾಯಕಿ ಆ್ಯಮಿ ಸ್ಯಾಟರ್‌ವೇಟ್ ಅವರು ತಂಡದ ಆಧಾರ ಸ್ತಂಭಗಳಲ್ಲೊಬ್ಬರು. ಇನ್ನು, ನಾಯಕಿ ಸುಝಿ ಬೇಟ್ಸ್ ಅವರೂ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ, ಸಿಯಾನ್ ರುಕ್, ರಾಚೆಲ್ ಕ್ಯಾಂಡಿ ಇದ್ದರೆ, ಸ್ಪಿನ್ನರ್‌ಗಳಾದ ಮೋರ್ನಾ ನೀಲ್ಸನ್ ಅವರು ಪ್ರಮುಖ ಬೌಲರ್‌ಗಳಾಗಿದ್ದಾರೆ.