5ನೇ ಸ್ಥಾನಕ್ಕೆ ಲಂಕಾ ಸೆಣಸು
ಕಟಕ್: ಮಹಿಳಾ ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಇಂದು ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು 5ನೇ ಸ್ಥಾನಕ್ಕಾಗಿ ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ಸೆಣೆಸಾಟ ನಡೆಸಲಿದ್ದಾರೆ.
ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಹರಿಣಗಳು ಲಂಕಾ ತಂಡವನ್ನು 110ರನ್‌ಗಳ ಅಂತರದಲ್ಲಿ ಮಣಿಸಿತು. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ಲಂಕನ್ನರು ಕಾಯುತ್ತಿದ್ದು, ಈ ಪಂದ್ಯ ಉಭಯ ತಂಡಗಳಿಗೂ ಪ್ರತಿಷ್ಠೆಯ ಪಂದ್ಯವಾಗಿದೆ.
ಪಂದ್ಯಾವಳಿಯ ಘಟಾನುಘಟಿ ತಂಡಗಳಾದ ಇಂಗ್ಲೆಂಡ್ ಹಾಗೂ ಆತಿಥೇಯ ಭಾರತ ತಂಡವನ್ನು ಮಣಿಸಿ ಉತ್ತಮ ಆರಂಭ ಪಡೆದಿದ್ದ ಲಂಕನ್ನರು ಸೂಪರ್ ಸಿಕ್ಸ್ ಹಂತಕ್ಕೆ ಲಗ್ಗೆ ಇಟ್ಟಿದ್ದರು. ಪ್ರಸ್ತುತ ಈ ಎರಡು ತಂಡಗಳು ಪಂದ್ಯಾವಳಿಯಿಂದ ಹೊರಗುಳಿದಿದ್ದು, ಗೆಲುವಿನೊಂದಿಗೆ ತವರಿಗೆ ತೆರಳಲು ಚಿಂತನೆ ನಡೆಸಿವೆ.