ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕೇಳಿ ಪ್ರೇಮಿಗಳೇ... ಪ್ರೇಮಿಯೇ ಪ್ರೀತಿಯ ಕೊಂದನು

ಆತ ಒಬ್ಬ ಕ್ರೀಡಾ ಸಾಧಕ... ಎರಡೂ...

ಆಸ್ಕರ್ ಪಿಸ್ಟೋರಿಯಸ್; ರೀವಾ ಸ್ಟೀನ್‌ಕ್ಯಾಂಪ್
Mainashree
Updated On : 15 Feb 2013, 1:39 am

ಕೊಲೆ ಆರೋಪ ಹೊತ್ತ ಆಸ್ಕರ್ ಪಿಸ್ಟೋರಿಯಸ್; ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಪ್ರೇಮಕಥೆ
ಜೊಹಾನ್ಸ್‌ಬರ್ಗ್: ಆತ ಒಬ್ಬ ಕ್ರೀಡಾ ಸಾಧಕ... ಎರಡೂ ಕಾಲುಗಳಿಲ್ಲದಿದ್ದರೂ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ... ವಿಶ್ವದ ಮೊಟ್ಟ ಮೊದಲ ಬ್ಲೇಡ್ ರನ್ನರ್ ಎಂದೇ ಕರೆಸಿಕೊಳ್ಳುತ್ತಿದ್ದ ಗಳಿಸಿದ್ದವ... ಆದರೆ, ಈಗ... ಒಬ್ಬ ಕೊಲೆಗಾರ... ?
ಹೌದು. ತಮ್ಮ ಅಂಗವೈಕಲ್ಯವನ್ನು ಬದಿಗೊತ್ತಿ ವಿಶ್ವದ ಶ್ರೇಷ್ಠ ಕ್ರೀಡಾ ಸಾಧಕರಲ್ಲೊಬ್ಬ ಎಂದು ಹೆಸರು ಮಾಡಿದ್ದ ಆಸ್ಕರ್ ಪಿಸ್ಟೋರಿಯಸ್ ಮೇಲೆ ಈಗ ಕೊಲೆ ಆರೋಪವೊಂದು ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರು ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಪ್ರೇಮಿಗಳ ದಿನವೇ ಇಂಥದ್ದೊಂದು ದುರಂತ ನಡೆದುಹೋಗಿದೆ.
ಏನಿದು ಪ್ರಕರಣ?: ಅಂದಹಾಗೆ, ಪಿಸ್ಟೋರಿಯಸ್ ಬಂಧನದ ವಿಷಯವನ್ನು ದಕ್ಷಿಣ ಆಫ್ರಿಕಾದ ಮಾಧ್ಯಮಗಳು ವರದಿ ಮಾಡಿವೆ. ಪಿಸ್ಟೋರಿಯಸ್ ಅವರು, ತಮ್ಮ ಮನೆಯಲ್ಲಿಯೇ ತಮ್ಮ ಪ್ರೇಯಸಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಯಾರು ಆಕೆ?: ಮೃತಪಟ್ಟವಳನ್ನು ರೀವಾ ಸ್ಟೀನ್‌ಕ್ಯಾಂಪ್ (30) ಎಂದು ಗುರುತಿಸಲಾಗಿದ್ದು, ಈಕೆ ಈ ಹಿಂದೆ ಮಾಡೆಲ್ ಆಗಿದ್ದವಳೆಂದು ಹೇಳಲಾಗಿದೆ. ಈಕೆ, ಕಳೆದೆರಡು ತಿಂಗಳುಗಳಿಂದ ಪಿಸ್ಟೋರಿಯಸ್ ಜೊತೆಯಲ್ಲಿ ಡೇಟಿಂಗ್ ನಡೆಸುತ್ತಿದ್ದಳೆಂದು ಹೇಳಲಾಗಿದೆ.
ಫೆ. 14ರಂದು 'ಪ್ರೇಮಿಗಳ ದಿನಾಚರಣೆ'ಯನ್ನು ಆಚರಿಸಿಕೊಳ್ಳಲು ಆಕೆ ಹಾಗೂ ಪಿಸ್ಟೋರಿಯಸ್ ತಯಾರಿ ನಡೆಸಿದ್ದರು. ಇದ್ದಕ್ಕಿದ್ದಂತೇ ಪಿಸ್ಟೋರಿಯಸ್ ಆಕೆಯನ್ನು ಕೊಂದಿದ್ದಾನೆ ಎಂದು ವರದಿಗಳು ಹೇಳಿವೆ.
ರೀವಾ ಅವರ ತಲೆ, ಎದೆ ಹಾಗೂ ಹೊಟ್ಟೆಯ ಭಾಗಗಳಿಗೆ ಸುಮಾರು ಗುಂಡುಗಳು ಬಿದ್ದಿದ್ದು, ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ನಡೆದಿದ್ದು ಯಾವಾಗ?: ಗುರುವಾರ ಬೆಳಗಿನಜಾವ ಸುಮಾರು ನಾಲ್ಕು ಗಂಟೆಗೆ ಈ ಘಟನೆ ನಡೆದಿದ್ದು, ಮಧ್ಯಾಹ್ನ ಸುಮಾರು 12 ಗಂಟೆಗೆ ಪಿಸ್ಟೋರಿಯಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಪೊಲೀಸರ ಹೇಳಿಕೆ: ಘಟನೆಯು ಗುರುವಾರ ಬೆಳಗ್ಗೆ ನಡೆದಿದ್ದು, ಸುದ್ದಿ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಿಸ್ಟೋರಿಯಸ್ ಅವರನ್ನು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಜೊಹಾನ್ಸ್‌ಬರ್ಗ್ ಪೊಲೀಸ್ ಇಲಾಖೆ ವಕ್ತಾರ ಕಾಟ್ಲೆಗೋ ಮೊರಾಲೆ, ಕೊಲೆಯ ಘಟನೆ ಹಾಗೂ ಆರೋಪಿಯ ಬಂಧನವನ್ನು ಖಚಿತಪಡಿಸಿದ್ದಾರೆ.
ಆದರೆ, ಅವರು ಬಂಧಿತ ಆರೋಪಿ ಪಿಸ್ಟೋರಿಯಸ್ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಆದರೆ, ಬಂಧಿತ ಆರೋಪಿಯು 26 ವರ್ಷದ ಪ್ರಾಯದವನಾಗಿದ್ದು, ಮೃತ ವ್ಯಕ್ತಿ 30 ವರ್ಷ ವಯಸ್ಸಿನವರು ಎಂದಿದ್ದಾರೆ. ಅಲ್ಲದೇ, ಸದ್ಯಕ್ಕೆ ಆರೋಪಿಯ ಮುಖ ಮರೆಮಾಚಲಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇಲೆಯೇ ಅವನ ಗುರುತು ಬಹಿರಂಗಪಡಿಸಲಾಗುವುದು ಎಂದಿದ್ದಾರೆ.
ಪೊಲೀಸರು ಆರೋಪಿಯ ಬಗ್ಗೆ ಖಚಿತ ಉತ್ತರ ನೀಡದೇ ಹೋದರೂ, ಮೂಲಗಳ ಪ್ರಕಾರ, ಪಿಸ್ಟೋರಿಯಸ್ ಮನೆಯಲ್ಲಿಯೇ ಕೊಲೆ ನಡೆದಿರುವುದರಿಂದ ಬಂಧಿತ ಆರೋಪಿ ಪಿಸ್ಟೋರಿಯಸ್ ಅವರೇ ಎಂದು ಹೇಳಿವೆ.
ಜೊಹಾನ್ಸ್‌ಬರ್ಗ್‌ನ ಅತಿ ಭದ್ರತೆ ಹೊಂದಿರುವ ಸಿಲ್ವರ್‌ಲೇಕ್ಸ್‌ನಲ್ಲಿನ ಐಷಾರಾಮಿ ಬಂಗಲೆಗಳಿರುವ ಪ್ರಾಂತ್ಯದಲ್ಲಿ ಪಿಸ್ಟೋರಿಸ್ ಮನೆಯಿದ್ದು, ಅಲ್ಲಿ ಈ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ.

ಅಚ್ಚರಿ ನೀಡಲು ಹೋಗಿ ಹೆಣವಾದಳೇ?
ಪಿಸ್ಟೋರಿಸ್ ಅವರ ವಿಚಾರಣೆ ನಡೆಸಿದ ಪೊಲೀಸರು ರೀವಾ ಕೊಲೆಗೆ ಒಂದು ತಾರ್ಕಿಕ ಕಾರಣವನ್ನು ಕಂಡುಕೊಂಡಿದ್ದಾರೆ.
ಅವರ ಪ್ರಕಾರ, ಪಿಸ್ಟೋರಿಯಸ್ ಮನೆಯಲ್ಲಿ ಕಳೆದೆರಡು ತಿಂಗಳುಗಳಿಂದ ಡೇಟಿಂಗ್ ನಡೆಸುತ್ತಿದ್ದ ರೀವಾ, ಫೆ. 14ರ ಪ್ರೇಮಿಗಳ ದಿನಾಚರಣೆಗೂ ಮುನ್ನ ಕಾರ್ಯನಿಮಿತ್ತ ಮನೆಯಿಂದ ಆಚೆ ತೆರಳಿದ್ದರು.  ಆದರೆ, ಪಿಸ್ಟೋರಿಯಸ್‌ಗೆ ಅಚ್ಚರಿ ನೀಡಲೆಂದು ನಿರ್ಧರಿಸಿದ ಆಕೆ, ಪ್ರೇಮಿಗಳ ದಿನಾಚರಣೆಯ ಮುಂಜಾನೆ ಇದ್ದಕ್ಕಿದ್ದಂತೇ ಭೇಟಿ ನೀಡಿ, ಅಚ್ಚರಿ ನೀಡಬೇಕೆಂದು ಆಕೆ ಎಣಿಸಿದ್ದರೆಂದು ಹೇಳಲಾಗಿದೆ. ತನ್ನ ಟ್ವೀಟರ್ ಖಾತೆಯಲ್ಲಿ ಆಕೆ ಪ್ರೇಮಿಗಳ ದಿನಾಚರಣೆಯನ್ನು ತಾವು ಪಿಸ್ಟೋರಿಯಸ್ ಜೊತೆಯಲ್ಲೇ ಅದ್ಧೂರಿಯಾಗಿ ಆಚರಿಸಲಿರುವುದಾಗಿಯೂ ಹೇಳಿಕೊಂಡಿರುವುದನ್ನು ಪೊಲೀಸರು ತಿಳಿಸಿದ್ದಾರೆ.
ಹಾಗಾಗಿ, ಆಕೆ ಗುರುವಾರ ಮುಂಜಾನೆ ಸುಮಾರು 4 ಗಂಟೆ ಸಮಯಕ್ಕೆ ಆತನ ಮನೆ ತಲುಪಿದ್ದಾರೆ. ತನ್ನಲ್ಲಿದ್ದ ಮನೆಯ ಬೀಗದ ಕೈ ಉಪಯೋಗಿಸಿ ಆಕೆ ಬಾಗಿಲು ತೆರೆದು ಮನೆ ಪ್ರವೇಶಿಸಿದ್ದಾರೆಂದು ಹೇಳಲಾಗಿದೆ.
ಬಾಗಿಲು ಸದ್ದಿನಿಂದ ಎಚ್ಚರಗೊಂಡ ಪಿಸ್ಟೋರಿಯಸ್ ಯಾರೋ ಕಳ್ಳರು ಮನೆ ನುಗ್ಗಿದ್ದಾರೆಂದು ದಿಗಿಲುಗೊಂಡಿದ್ದಾರೆ. ತನ್ನ ಪ್ರೇಯಸಿ ರೀವಾಳೇ ಬಂದಿದ್ದಾಳೆ ಎನ್ನುವ ಕಿಂಚಿತ್ ಕಲ್ಪನೆಯೂ ಪಿಸ್ಟೋರಿಸ್‌ಗೆ ಬಂದಿಲ್ಲ. ಹಾಗಾಗಿ, ಬಾಗಿಲು ತೆರೆದು ಮನೆ ಪ್ರವೇಶಿರುವವರು ಕಳ್ಳರೇ ಎಂದು ಅಂದಾಜಿಸಿದ ಪಿಸ್ಟೋರಿಸ್, ತಕ್ಷಣವೇ ತಮ್ಮಲ್ಲಿದ್ದ ಪಿಸ್ತೂಲನ್ನು ಕೈಗೆತ್ತಿಕೊಂಡು, ಕಳ್ಳನನ್ನು ಹೊಡೆದು ಹಾಕಲು ಹೊಂಚು ಹಾಕಿದ್ದಾರೆ. ಅತ್ತ, ಮನೆ ಪ್ರವೇಶಿಸಿದ ರೀಮಾ ಮೆಲ್ಲ ಮೆಲ್ಲನೇ ಹೆಜ್ಜೆಯಿಡುತ್ತಾ ಆತನ ರೂಮಿನ ಕಡೆಗೆ ಬಂದಿದ್ದಾಳೆ. ಆಕೆ ರೂಮಿನ ಬಾಗಿಲು ತೆರೆಯುತ್ತಲೇ ಅವಿತಿದ್ದ ಪಿಸ್ಟೋರಿಸ್ ಆಕೆಯ ಮೇಲೆ ಗುಂಡಿನ ಮಳೆಗರೆದಿದ್ದಾರೆ. ತನ್ನ, ಅಚ್ಚರಿಯ ಆಗಮನ ತನಗೆ ಮಾರಕವಾಗಿ ಪರಿಣಮಿಸಲಿದೆ ಎಂದರಿಯದ ರೀವಾ ಹೆಣವಾಗಿದ್ದಾಳೆ ಎಂದು ಪೊಲೀಸರ ಪ್ರಾಥಮಿಕ ವರದಿಗಳು ಬಹಿರಂಗಪಡಿಸಿವೆ.

ಪಿಸ್ತೂಲಿನೊಂದಿಗೇ ಮಲಗುತ್ತಿದ್ದ...
ಮತ್ತೊಂದು ಮೂಲಗಳ ಪ್ರಕಾರ, ಪಿಸ್ಟೋರಿಸ್‌ಗೆ ಮೊದಲಿನಿಂದಲೂ ಕಳ್ಳಕಾಕರ ಭಯವಿತ್ತು. ಹಾಗಾಗಿ, ಅವರು ತಮ್ಮ ಆತ್ಮರಕ್ಷಣೆಗಾಗಿ ಪಿಸ್ತೂಲನ್ನು ಯಾವಾಗಲೂ ತಮ್ಮ  ಬಳಿಯಲ್ಲೇ ಇರಿಸಿಕೊಳ್ಳುತ್ತಿದ್ದರೆಂದು ಹೇಳಲಾಗಿದೆ. ರೀವಾ ಪರಿಚಯವಾಗುವ ಮುನ್ನ ಒಂಟಿಯಾಗಿಯೇ ಮನೆಯಲ್ಲಿರುತ್ತಿದ್ದರಿಂದ ಅವರು ತಮ್ಮಲ್ಲಿ ಒಂದು ಮೆಷೀನ್ ಗನ್ ಅನ್ನೂ ಇರಿಸಿಕೊಂಡಿದ್ದರು. ರೀನಾ ಪರಿಚಯವಾಗಿ ಆತನೊಂದಿಗೆ ಇರಲು ಆರಂಭಿಸಿದ ಮೇಲೂ, ಭಯದಿಂದ ದೂರವಾಗದ ಪಿಸ್ಟೋರಿಯಸ್ ತಾವು ಮಲಗುತ್ತಿದ್ದ ಬೆಡ್ ಪಕ್ಕದಲ್ಲೇ ಪಿಸ್ತೂಲನ್ನು ಇರಿಸಿಕೊಂಡು ಮಲಗುತ್ತಿದ್ದರು ಎಂದು ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement