ಪಾಕ್‌ಗೆ ಯೂನಿಸ್, ಅಸದ್ ಆಸರೆ
ಕೇಪ್‌ಟೌನ್: ಯೂನಿಸ್ ಖಾನ್ ಹಾಗೂ ಅಸದ್ ಶರೀಫ್ ಉತ್ತಮ ಜೊತೆಯಾಟದಿಂದಾಗಿ ಪ್ರವಾಸಿ ಪಾಕಿಸ್ತಾನ ತಂಡ ಗುರುವಾರ ಆರಂಭಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ತನ್ನ ಮೊದಲ ಇನಿಂಗ್ಸ್‌ನಲ್ಲಿ ಚೇತರಿಕೆ ಕಂಡುಕೊಂಡಿತು.
ಮೊದಲು ಇನಿಂಗ್ಸ್ ಆರಂಭಿಸಿದ್ದ ಪಾಕಿಸ್ತಾನ ಕೇವಲ 33 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಕಂಗಾಲಾಗಿತ್ತು. ಆದರೆ, ಪಾಕಿಸ್ತಾನ ತಂಡಕ್ಕೆ ಯೂನಿಸ್ ಖಾನ್ ಹಾಗೂ ಮಿಸ್ಬಾ ಉಲ್ ಹಕ್ ಆಸರೆಯಾದರು. ಪತ್ರಿಕೆ ಮುದ್ರಣಕ್ಕೆ ಹೋಗುವ ಸಂದರ್ಭದಲ್ಲಿ ಪಾಕಿಸ್ತಾನ ಮೂರನೇ ಸೆಷನ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು. ಯೂನಿಸ್ ಖಾನ್ (ಅಜೇಯ 63) ಹಾಗೂ ಅಸದ್ ಶರೀಫ್ (ಅಜೇಯ 69) ಇಬ್ಬರೂ ಕ್ರೀಸ್‌ನಲ್ಲಿದ್ದರು.
ಆರಂಭಿಕ ಕುಸಿತ: ಟಾಸ್ ಗೆದ್ದಿದ್ದ ದಕ್ಷಿಣ ಆಫ್ರಿಕಾ, ಮೊದಲು ಪಾಕಿಸ್ತಾನವನ್ನು ಬ್ಯಾಟಿಂಗ್‌ಗೆ ಇಳಿಸಿತು. ಮಹಮ್ಮದ್ ಹಫೀಸ್ ಹಾಗೂ ನಾಸಿರ್ ಜೆಮ್ಷೆಡ್ ಇಬ್ಬರೂ ಪಾಕಿಸ್ತಾನದ ಇನಿಂಗ್ಸ್ ಆರಂಭಿಸಿದರು. ಆದರೆ, ತಂಡದ ಮೊತ್ತಕ್ಕೆ ಕೇವಲ 10 ರನ್ ಸೇರಿಸುವಷ್ಟರಲ್ಲಿ, ನಾಸಿರ್ ಜೆಮ್ಷೆಡ್ (3) ಅವರ ವಿಕೆಟ್ ಉರುಳಿತು. ಫಿಲ್ಯಾಂಡರ್ ಅವರು ಈ ವಿಕೆಟ್ ಪಡೆದರು. ಅವರ ನಂತರ, ಕ್ರೀಸ್‌ಗೆ ಕಾಲಿಟ್ಟಿದ್ದು ಅಜರ್ ಅಲಿ. ಆದರೆ, ಈ ಜೋಡಿಯು ಕ್ರೀಸ್‌ನಲ್ಲಿ ಹೊಂದಿಕೊಳ್ಳುವ ಮುನ್ನವೇ ಸ್ಟೇಯ್ನ್ ಅವರು ಮತ್ತೊಬ್ಬ ಆರಂಭಿಕ ಮಹಮ್ಮದ್ ಹಫೀಸ್ (17) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಆಗ, ಕ್ರೀಸ್‌ಗೆ ಬಂದಿದ್ದು ಯೂನಿಸ್ ಖಾನ್.
ಆದರೆ, ಯೂನಿಸ್ ಖಾನ್‌ಗೆ ಕ್ರೀಸ್‌ನಲ್ಲಿದ್ದ ಅಜರ್ ಅಲಿ ಅವರಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ. ಇನಿಂಗ್ಸ್‌ನ 17ನೇ ಓವರ್‌ನಲ್ಲೇ ಅಜರ್ ಅವರು, ಮಾರ್ಕೆಲ್ ಬೌಲಿಂಗ್‌ನಲ್ಲಿ ಔಟಾದರು. ಆಗ, ತಂಡದ ಮೊತ್ತ ಕೇವಲ 33 ರನ್. ಅಜರ್ ನಿರ್ಗಮನದ ನಂತರ ಬಂದ ನಾಯಕ ಮಿಸ್ಬಾ ಉಲ್ ಹಕ್ ಸಹ ಅದೇ ಮೊತ್ತಕ್ಕೇ ಡಕ್‌ಔಟ್ ಆಗಿ ಪೆವಿಲಿಯನ್‌ಗೆ ಮರಳಿದರು.
ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ಯೂನಿಸ್ ಖಾನ್ ಅವರಿಗೆ ಬೆಂಬಲವಾಗಿ ನಿಂತ ಅಸದ್ ಶರೀಫ್, ಉತ್ತಮ ಜೊತೆಯಾಟವಾಡಿದರು. ಪತ್ರಿಕೆ ಮುದ್ರಣಕ್ಕೆ ಹೋಗುವವರೆಗೆ ಈ ಜೋಡಿ, 128 ರನ್‌ಗಳ ಭರ್ಜರಿ ಜೊತೆಯಾಟವಾಡಿತ್ತು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 164/4 (65.1 ಓ.)
(ಪತ್ರಿಕೆ ಮುದ್ರಣಕ್ಕೆ ಹೋಗುವ ಸಂದರ್ಭದಲ್ಲಿ)
ಯೂನಿಸ್ ಅಜೇಯ 63,
ಅಸದ್ ಶರೀಫ್ ಅಜೇಯ 69
ಬೌಲಿಂಗ್: ಮಾರ್ಕೆಲ್ 42/2,
ಫಿಲ್ಯಾಂಡರ್ 38/1,
ಸ್ಟೇಯ್ನ್ 24/1