ಪುಣೆ ವಾರಿಯರ್ಸ್ಗೆ ಸೇರ್ಪಡೆಗೊಂಡ ರಸೂಲ್
ನವದೆಹಲಿ: ಬುಧವಾರ ಮುಕ್ತಾಯಗೊಂಡ ಆಸ್ಟ್ರೇಲಿಯಾ ಹಾಗೂ ಬಿಸಿಸಿಐ ಅಧ್ಯಕ್ಷರ ಇಲೆವೆನ್ ತಂಡದ ನಡುವಿನ ಅಭ್ಯಾಸ ಪಂದ್ಯದಲ್ಲಿ ಅಧ್ಯಕ್ಷರ ಇಲೆವೆನ್ ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಆಲ್ರೌಂಡರ್ ಪರ್ವೇಜ್ ರಸೂಲ್ ಅವರು ಐಪಿಎಲ್ ಫ್ರಾಂಚೈಸಿಯಾದ ಪುಣೆ ವಾರಿಯರ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆಸೀಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅವರು 7 ವಿಕೆಟ್ ಕಬಳಿಸಿದ್ದರು. ಇದೀಗ, ಐಪಿಎಲ್ ಪಂದ್ಯಾವಳಿಯಲ್ಲಿ ಆಡಲು ಅವಕಾಶ ಪಡೆದಿರುವ ರಸೂಲ್, ಜಮ್ಮು-ಕಾಶ್ಮೀರ ರಾಜ್ಯದಿಂದ ಐಪಿಎಲ್ಗೆ ಆಡಲು ಅವಕಾಶ ಪಡೆದ ಮೊದಲ ಕ್ರಿಕೆಟಿಗ ಎಂಬ ಹಿರಿಮೆಯನ್ನೂ ಗಳಿಸಿದ್ದಾರೆ. ಸಹಾರಾ ಇಂಡಿಯಾ ಪರಿವಾರ ಒಡೆತನದ ಪುಣೆ ವಾರಿಯರ್ಸ್ ತಂಡಕ್ಕೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿದ ರಸೂಲ್ ಅವರು, 'ನನ್ನನ್ನು ತಮ್ಮ ತಂಡಗಳಲ್ಲಿ ಆಡಿಸಲು ಕೆಲ ಐಪಿಎಲ್ ಫ್ರಾಂಚೈಸಿಗಳು ನನ್ನನ್ನು ಸಂಪರ್ಕಿಸಿದ್ದವು. ಆದರೆ, ನಾನು ದಿಢೀರ್ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ, ಪುಣೆ ವಾರಿಯರ್ಸ್ ತಂಡದಲ್ಲಿ ಆಡಲು ನಾನು ನಿರ್ಧರಿಸಿದೆ' ಎಂದು ರಸೂಲ್ ತಿಳಿಸಿದ್ದಾರೆ. ಆಸೀಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರಸೂಲ್ ಅವರು ಏಳು ವಿಕೆಟ್ ಕಬಳಿಸಿದ್ದೇ ತಡ, ಅವರನ್ನು ತಮ್ಮ ತಂಡಕ್ಕೇ ಸೇರ್ಪಡೆಗೊಳಿಸಲು ಕೆಲವು ಐಪಿಎಲ್ ಫ್ರಾಂಚೈಸಿಗಳು ಮುಗಿಬಿದ್ದಿದ್ದವು ಎಂದು ಐಪಿಎಲ್ ಪಂದ್ಯಾವಳಿಯ ಮೂಲಗಳು ತಿಳಿಸಿವೆ.