ಕೇರಳವನ್ನು ಕಟ್ಟಿಹಾಕಿದ ಶರತ್
ಮೊದಲ ಪಂದ್ಯದಲ್ಲಿ ಗೋವಾ ತಂಡದ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯದೊಂದಿಗೆ ವಿಜಯ್ ಹಜಾರೆ ಟ್ರೋಫಿಯನ್ನು
ಪಳನಿ: ಮೊದಲ ಪಂದ್ಯದಲ್ಲಿ ಗೋವಾ ತಂಡದ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯದೊಂದಿಗೆ ವಿಜಯ್ ಹಜಾರೆ ಟ್ರೋಫಿಯನ್ನು ಆರಂಭಿಸಿರುವ ಕರ್ನಾಟಕ ತಂಡ, ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಕೇರಳ ತಂಡದ ವಿರುದ್ಧ 52 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಮೂಲಕ ರಾಜ್ಯ ತಂಡ ಪಂದ್ಯಾವಳಿಯಲ್ಲಿ 8 ಅಂಕಗಳನ್ನು ಪಡೆದು ತಮ್ಮ ಜಯದ ಸವಾರಿ ಮುಂದುವರಿಸಿದೆ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡ, ಉತ್ತಮ ಹಾಗೂ ಸಾಂಘಿಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ನಿಗಧಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 322ರನ್ ಕಲೆಹಾಕಿತು.
ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್. ರಾಹುಲ್ ಹಾಗೂ ರಾಬಿನ್ ಉತ್ತಪ್ಪ ಜೋಡಿ ತಂಡಕ್ಕೆ 112ರನ್ಗಳ ಜತೆಯಾಟ ನೀಡುವ ಮೂಲಕ ಭದ್ರ ಅಡಿಪಾಯ ಹಾಕಿಕೊಟ್ಟರು. ಕಳೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ರಾಬಿನ್ ಉತ್ತಪ್ಪ ಎರಡನೇ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ನಡೆಸಿದರು. 61 ಎಸೆತಗಳನ್ನು ಎದುರಿಸಿದ ಉತ್ತಪ್ಪ 7 ಬೌಂಡರಿಗಳ ಸಹಾಯದಿಂದ 54 ರನ್ಗಳಿಸಿದರು.
ಇನ್ನು ಮೊದಲ ಪಂದ್ಯದಲ್ಲಿ ಕೇವಲ 4ರನ್ಗಳಿಸಿದ್ದ ಕೆ.ಎಲ್ ರಾಹುಲ್, ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದರು. ಸಮಯೋಜಿತ ಆಟ ಪ್ರದರ್ಶಿಸಿದ ರಾಹುಲ್, 98 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ 86 ರನ್ಗಳಿಸಿದರು.
ಈ ವೇಳೆ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಉತ್ತಪ್ಪ, ಜಗದೀಶ್ ಎಸೆತದಲ್ಲಿ ಪ್ರಶಾಂತ್ಗೆ ಕ್ಯಾಚ್ ನೀಡಿ ಔಟಾದರು. ಈ ಮೂಲಕ ಆರಂಭಿಕ ಜೋಡಿ ಬೇರ್ಪಟ್ಟಿತು. ನಂತರ ಬಂದ ಪಾಂಡೆ, ಆರಂಭಿಕ ರಾಹುಲ್ ಜತೆಗೂಡಿ 58ರನ್ಗಳ ಜತೆಯಾಟವಾಡಿದರು.
ಈ ವೇಳೆ 86ರನ್ಗಳಿಸಿದ್ದ ರಾಹುಲ್, ಪ್ರಶಾಂತ್ ಎಸೆತದಲ್ಲಿ ಎಲ್ಬಿ ಬಲೆಗೆ ಬೀಳುವ ಮೂಲಕ ತಮ್ಮ ಉತ್ತಮ ಇನಿಂಗ್ಸ್ ಅಂತ್ಯಗೊಳಿಸಿದರು. ರಾಹುಲ್ ಔಟಾದ ಬೆನ್ನಲ್ಲೇ 25ರನ್ಗಳಿಸಿದ್ದ ಪಾಂಡೆ, ಪ್ರಶಾಂತ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು.
ಈ ವೇಳೆ ಜತೆಯಾಗಿದ್ದು ನಾಯಕ ಬಿನ್ನಿ ಹಾಗೂ ಗಣೇಶ್ ಸತೀಶ್. ಈ ಜೋಡಿ ನಾಲ್ಕನೇ ವಿಕೆಟ್ಗೆ 76ರನ್ಗಳ ಜತೆಯಾಟ ನೀಡಿತು. 32 ಎಸೆತಗಳಲ್ಲಿ 40ರನ್ಗಳಿಸಿದ್ದ ಗಣೇಶ್, ಸಂದೀಪ್ ವಾರಿಯರ್ ಎಸೆತದಲ್ಲಿ ಪ್ರೇಮ್ಗೆ ಕ್ಯಾಚ್ ನೀಡಿ ಹೊರ ನಡೆದರು. ನಂತರ ನಾಯಕ ಸ್ಟುವರ್ಟ್ ಬಿನ್ನಿ ಕರುಣ್ ನಾಯರ್ ಜತೆಗೂಡಿ 49ರನ್ ಜತೆಯಾಟ ನೀಡಿ ತಂಡವನ್ನು 300ರ ಗಡಿ ದಾಟುವಂತೆ ಮಾಡಿದರು. ಈ ವೇಳೆ 60ರನ್ಗಳಿಸಿದ್ದ ನಾಯಕ ಬಿನ್ನಿ, ಮನುಕೃಷ್ಣನ್ ಎಸೆತದಲ್ಲಿ ಫರ್ನಾನ್ಡೀಸ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅಂತಿಮವಾಗಿ ಕರ್ನಾಟಕ ತಂಡ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 322ರನ್ ಪೇರಿಸಿತು.
ಮಿಂಚು ಹರಿಸಿದ ನಾಯರ್: ತಂಡದ ಮೊತ್ತ 254 ಆಗಿದ್ದಾಗ ಗಣೇಶ್ ಸತೀಶ್ ಔಟಾದರು. ಈ ವೇಳೆ ನಾಯಕ ಬಿನ್ನಿ ಅವರ ಜತೆಗೂಡಿದ ಕರುಣ್ ನಾಯರ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 19 ಎಸೆತಗಳನ್ನು ಎದುರಿಸಿದ ನಾಯರ್ 242.10 ಸ್ಟ್ರೈಕ್ರೇಟ್ನಲ್ಲಿ 46 ರನ್ಗಳಿಸಿದರು. ಅವರ ಈ ಮೊತ್ತದಲ್ಲಿ 2 ಬೌಂಡರಿಗಳು ಹಾಗೂ 4 ಭರ್ಜರಿ ಸಿಕ್ಸರ್ಗಳು ಸೇರಿದ್ದವು.
ಕರ್ನಾಟಕ ತಂಡ ನೀಡಿದ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಕೇರಳ, 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 270ರನ್ಗಳನ್ನಷ್ಟೇ ಕಲೆಹಾಕಿತು. ಈ ಮೂಲಕ ಕೇರಳ ತಂಡ 52ರನ್ಗಳ ಸೋಲನುಭವಿಸಿತು.
ಬೃಹತ್ ಮೊತ್ತವನ್ನು ಬೆನ್ನತ್ತಿದ ಕೇರಳ ತಂಡಕ್ಕೆ ಎಚ್.ಎಸ್.ಶರತ್ ಮಾರಕವಾಗಿ ಪರಿಣಮಿಸಿದರು. ತಂಡದ ಮೊತ್ತ 11 ಆಗಿದ್ದಾಗ ಸ್ಯಾಮ್ಸನ್ (7) ಅವರ ವಿಕೆಟ್ ಪಡೆದ ಶರತ್ ಕರ್ನಾಟಕಕ್ಕೆ ಆರಂಭದಲ್ಲೇ ಮುನ್ನಡೆ ತಂದುಕೊಟ್ಟರು. ನಂತರ ಮತ್ತೊರ್ವ ಆರಂಭಿಕ ಬ್ಯಾಟ್ಸ್ಮನ್ ಜಗದೀಶ್ (13), ಹಾಗೂ ಪ್ರೇಮ್ (6) ಅವರ ವಿಕೆಟ್ ಪಡೆದ ಶರತ್, ತಂಡದ ಮೊತ್ತ 32ರನ್ ಆಗುವಷ್ಟರಲ್ಲಿ ಕೇರಳದ ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದರು.
ಈ ವೇಳೆ ಜತೆಯಾದ ಫರ್ನಾನ್ಡೀಸ್ ಹಾಗೂ ನಾಯಕ ಸಚಿನ್ ಬೇಬಿ, 106 ರನ್ಗಳ ಜತೆಯಾಟ ನೀಡುವ ಮೂಲಕ ತಂಡವನ್ನು ಕುಸಿತದಿಂದ ಮೇಲೆತ್ತಿದರು. 56 ಎಸೆತಗಳಲ್ಲಿ 61ರನ್ಗಳಿಸಿದ್ದ ಸಚಿನ್ ಬೇಬಿ ಅವರನ್ನು ಬೌಲ್ಡ್ ಮಾಡುವ ಮೂಲಕ ಶರತ್, ಸಚಿನ್ ಬೇಬಿಗೆ ಪೆವಿಲಿಯನ್ ದಾರಿ ತೋರಿದರು.
ನಂತರ ಕೆಲ ಹೊತ್ತಿನಲ್ಲಿ ಅರ್ಧಶತಕ ಗಳಿಸಿದ್ದ ಫರ್ನಾನ್ಡೀಸ್, ನಿನಾನ್ ಎಸೆತದಲ್ಲಿ ಶರತ್ಗೆ ಕ್ಯಾಚಿತ್ತು ಹೊರ ನಡೆದರು. ನಂತರ ಬಂದ ಗೊಮೆಜ್ ಹಾಗೂ ರಾಕೇಶ್ ತಂಡಕ್ಕೆ 70 ರನ್ಗಳ ಜತೆಯಾಟವಾಡಿದರು. 41 ಎಸೆತಗಳಲ್ಲಿ 44ರನ್ಗಳಿಸಿದ ಗೊಮೆಜ್ ಬಿನ್ನಿ ಎಸೆತದಲ್ಲಿ ಉತ್ತಪ್ಪಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಅಂತಿಮವಾಗಿ ಕೇರಳ ತಂಡ 50 ಓವರ್ಗಳಲ್ಲಿ 270ರನ್ಗಳಿಸಿತು. ಅಜೇಯರಾಗಿ ಉಳಿದ ರಾಕೇಶ್ 41 ಹಾಗೂ ಪ್ರಶಾಂತ್ 21 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ 322/5 (50 ಓ.)
ರಾಹುಲ್ 86 (98), ಬಿನ್ನಿ 60 (55), ಉತ್ತಪ್ಪ 54 (61)
ನಾಯರ್ ಅಜೇಯ 46 (19)
ಬೌಲಿಂಗ್: ಪ್ರಶಾಂತ್ 53/2, ಜಗದೀಶ್ 26/1,
ಕೇರಳ 270/6 (50 ಓ.)
ಸಚಿನ್ ಬೇಬಿ 61 (56),
ಫರ್ನಾಂಡಿಸ್ 55 (84)
ಗೊಮೆಜ್ 44 (41)
ರಾಕೇಶ್ ಅಜೇಯ 41 (50)
ಬೌಲಿಂಗ್: ಶರತ್ 40/4, ಬಿನ್ನಿ 43/1