ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪಿಸ್ಟೋರಿಯಸ್ ವಿರುದ್ಧ ಆರೋಪ ಪಟ್ಟಿ ದಾಖಲು

Rashmi Kasaragodu
Updated On : 15 Feb 2013, 10:39 am

ಪ್ರಿಟೋರಿಯಾ: ತಮ್ಮ ಪ್ರೇಯಸಿಯನ್ನು ಹತ್ಯೆಗೈದ ಆರೋಪ ಹೊತ್ತಿರುವ ಒಲಿಂಪಿಕ್ಸ್ 'ಬ್ಲೇಡ್ ರನ್ನರ್‌' ಆಸ್ಕರ್ ಪಿಸ್ಟೋರಿಯಸ್ ವಿರುದ್ಧ ಸ್ಥಳೀಯ ಮ್ಯಾಜಿಸ್ಟ್ರೇಟ್ ಆರೋಪಪಟ್ಟಿ ದಾಖಲಿಸಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ಪಿಸ್ಟೋರಿಯಸ್ ಅವರ ಪ್ರೇಯಸಿ ಹಾಗೂ ಮಾಜಿ ಮಾಡೆಲ್ ರೀವಾ ಸ್ಟೀನ್‌ಕ್ಯಾಂಪ್ ಅವರು ಪಿಸ್ಟೋರಿಯಸ್ ಮನೆಯಲ್ಲೇ ಹತ್ಯೆಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ, ಪಿಸ್ಟೋರಿಸ್ ಅವರನ್ನು ಗುರುವಾರ ಬಂಧಿಸಲಾಗಿತ್ತು.
ಶುಕ್ರವಾರ ಅವರನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ಆದ ಡೆಸ್ಮಂಡ್ ನೈರ್ ಅವರ ಮುಂದೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಅವರು ಬಿಕ್ಕಿಬಿಕ್ಕಿ ಅಳುತ್ತಿದ್ದರು. ಈ ಸಂದರ್ಭದಲ್ಲಿ, ಪ್ರಿಟೋರಿಯಾ ನ್ಯಾಯಾಲಯದಲ್ಲಿ ವಿಚಾರಣೆಗೆ ಅನುಮತಿ ನೀಡಿದರು. ಅಲ್ಲದೇ, ವಿಚಾರಣೆಯ ವರದಿಗಳನ್ನು ಮಾಧ್ಯಮಗಳು ವರದಿ ಮಾಡಲೂ ಅವಕಾಶ ನೀಡಿದರು.
ಆರೋಪಪಟ್ಟಿಯಲ್ಲಿ ರೀವಾ ಅವರು 9 ಎಂ.ಎಂ. ಪಿಸ್ತೂಲಿನಿಂದ ಹಾರಿದ ಗುಂಡೇಟಿನಿಂದ ಸಾವಿಗೀಡಾಗಿದ್ದಾರೆಂದು ಹೇಳಲಾಗಿದೆ.
ಕುತೂಹಲ ಕೆರಳಿಸಿದ ಪ್ರಕರಣ: ಘಟನೆಗೆ ಸಂಬಂಧಿಸಿದಂತೆ, ಈ ಮೊದಲು ಬಂದಿದ್ದ ವರದಿಗಳನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ಪಿಸ್ಟೋರಿಯಸ್‌ಗೆ ಅಚ್ಚರಿ ನೀಡಲೆಂದು ಮನೆ ಪ್ರವೇಶಿಸಿದ್ದ ರೀವಾ ಅವರನ್ನು ಕಳ್ಳರೆಂದು ತಪ್ಪಾಗಿ ತಿಳಿದ ಪಿಸ್ಟೋರಿಯಸ್ ಗುಂಡು ಹಾರಿಸಿದ್ದರು. ಹಾಗಾಗಿ, ಅವರು ಹತ್ಯೆಗೀಡಾಗಿದ್ದರು ಎಂದು ಹೇಳಲಾಗಿತ್ತು. ಆದರೆ, ಪೊಲೀಸರು ಈ ಪ್ರಾಥಮಿಕ ವರದಿಗಳನ್ನು ತಳ್ಳಿ ಹಾಕಿದ್ದಾರೆ. ಪಿಸ್ಟೋರಿಸ್ ಮನೆಯಲ್ಲಿ ಕೊಲೆ ನಡೆದ ಸ್ಥಳವನ್ನು ಪರಿಶೀಲಿಸಿದ ತಜ್ಞರು ಕೆಲವು ಮಹತ್ವದ ವಿಷಯಗಳನ್ನು ಹೊರಹಾಕಿರುವುದು ಇದಕ್ಕೆ ಕಾರಣ.
ಅಲ್ಲದೇ, ಘಟನೆ ನಡೆದ ಹಿಂದಿನ ರಾತ್ರಿ ಪಿಸ್ಟೋರಿಯಸ್, ತಡರಾತ್ರಿಯವರೆಗೂ ಕ್ಲಬ್ ಹಾಗೂ ಬಾರ್‌ಗಳಲ್ಲಿ ಇದ್ದರೆಂದೂ, ಅಲ್ಲಿಂದ ಸಂಪೂರ್ಣ ಪಾನಮತ್ತರಾಗಿ ಮನೆಗೆ ಆಗಮಿಸಿದ್ದ ಅವರಿಂದ ಕೆಲವೇ ಗಂಟೆಗಳಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೇ, ಅವರಿಗೆ ವೇಗವಾಗಿ ಕಾರು ಓಡಿಸುವುದು, ಬಂದೂಕು, ಪಿಸ್ತೂಲುಗಳನ್ನು ಕೊಳ್ಳುವುದು ಅವರ ಚಟಗಳಾಗಿದ್ದವು. ಅಲ್ಲದೇ, ಹಲವಾರು ಹೆಂಗಳೆಯರ ಸಹವಾಸವೂ ಅವರಿಗಿತ್ತು ಎಂದು ಪೊಲೀಸರು ಹೇಳಿದ್ದಾರೆ. 2009ರಲ್ಲಿ, ಪಾರ್ಟಿಯೊಂದರಲ್ಲಿ 19 ವರ್ಷದ ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿದ್ದ ಹಿನ್ನೆಲೆಯಲ್ಲಿ, ಅವರು ಒಂದು ರಾತ್ರಿ ಪೊಲೀಸ್ ಲಾಕಪ್‌ನಲ್ಲಿಯೂ ಇದ್ದರೆಂದು ಪೊಲೀಸರು ವಿವರಿಸಿದ್ದಾರೆ.
ಪಿಸ್ಟೋರಿಸ್ ಅವರ ಹಿಂದಿನ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಪ್ರಕರಣದ ಮೇಲೆ ಹದ್ದಿನ ಕಣ್ಣಿಟ್ಟು ತನಿಖೆಯನ್ನು ಪೊಲೀಸರು ಮುಂದುವರೆಸಿದ್ದು, ವಿಶ್ವದ ಮಿಲಿಯನ್‌ಗಟ್ಟರೆ ಜನರ ಆಸಕ್ತಿಯನ್ನು ಕೆರಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement