ಪುರುಷರ ಟಿ-20ಯಲ್ಲೂ ನ್ಯೂಜಿಲೆಂಡ್ಗೆ ಸೋಲು
ವೆಲ್ಲಿಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದ್ದ ಇಂಗ್ಲೆಂಡ್ ತಂಡವು, ಶುಕ್ರವಾರ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭರ್ಜರಿ 10 ವಿಕೆಟ್ಗಳ ಜಯ ದಾಖಲಿಸುವುದರೊಂದಿಗೆ ಸರಣಿ ಕೈವಶ ಮಾಡಿಕೊಂಡಿದೆ.
ಸರಣಿಯ ಮೊದಲ ಪಂದ್ಯದಲ್ಲಿ ಜಯಗಳಿಸಿದ್ದ ಇಂಗ್ಲೆಂಡ್ ತಂಡ, ಎರಡನೇ ಪಂದ್ಯದಲ್ಲಿ ಸೋಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ ಮತ್ತೆ ತಿರುಗಿ ಬಿದ್ದ ಆಂಗ್ಲರು, ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಗೆದ್ದುಕೊಂಡಿದ್ದಾರೆ.
ಈ ಪಂದ್ಯದಲ್ಲಿ ಸಂಘಟಿತ ಬೌಲಿಂಗ್ ಹಾಗೂ ಬ್ಯಾಟಿಂಗ್ ನಡೆಸಿದ ಆಂಗ್ಲರು, ಪಂದ್ಯವನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆಂಗ್ಲರು ಉತ್ತಮ ಬೌಲಿಂಗ್ ದಾಳಿಯನ್ನು ನಡೆಸಿದರು. ಪಂದ್ಯದ 3.3ನೇ ಓವರ್ನಲ್ಲಿ ಆರಂಭಿಕ ರೂತರ್ಫೊರ್ಡ್ (11) ಅವರ ವಿಕೆಟ್ ಪಡೆಯುವ ಮೂಲಕ ನಾಯಕ ಬ್ರಾಡ್ ತಂಡಕ್ಕೆ ಮೊದಲ ಯಶ ತಂದುಕೊಟ್ಟರು.
ನಂತರ ಗುಪ್ಟಿಲ್ ಹಾಗೂ ನಾಯಕ ಮೆಕಲಂ ತಂಡಕ್ಕೆ 45 ರನ್ ಜತೆಯಾಟ ನೀಡಿದರು. ಈ ವೇಳೆ ಮೆಕಲಂ (26) ವಿಕೆಟ್ ಪಡೆದ ಟ್ರೆಡ್ವೆಲ್ ಈ ಜೋಡಿಯನ್ನು ಬೇರ್ಪಡಿಸಿದರು. ನಂತರ ಬಂದ ಯಾವುದೇ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ಕ್ರಿಸ್ನಲ್ಲಿ ನಿಲ್ಲಲಿಲ್ಲ. ಟೇಲರ್ 6 ರನ್ಗಳಿಸಿ ರೂಟ್ ಎಸೆತದಲ್ಲಿ ಬೇರ್ಸ್ಟೋ ಗೆ ಕ್ಯಾಚ್ ನೀಡಿದರೆ, ಎಲಿಯೊಟ್ 15 ರನ್ಗಳಿಸಿ ಡರ್ನ್ಬ್ಯಾಚ್ ಎಸೆತದಲ್ಲಿ ಫಿನ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ನಂತರ ಮುನ್ರೊ 1ರನ್ ಸಂಪಾದನೆಯೊಂದಿಗೆ ಬ್ರಾಡ್ ಎಸೆತದಲ್ಲಿ ರೂಟ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದಾದ ನಂತರ 55 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿ 59ರನ್ಗಳಿಸಿದ್ದ ಗುಪ್ಟಿಲ್ ಬ್ರಾಡ್ ಎಸೆತದಲ್ಲಿ ಕಾಟ್ ಅಂಡ್ ಬೌಲ್ ಆಗುವ ಮೂಲಕ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಅಂತಿಮವಾಗಿ ಇಂಗ್ಲೆಂಡ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 139ರನ್ ಕಲೆಹಾಕಿತು.
ಇಂಗ್ಲೆಂಡ್ ತಂಡದ ಪರ ಬ್ರಾಡ್ 4 ಓವರ್ಗಳಲ್ಲಿ 15ರನ್ ನೀಡಿ 3 ವಿಕೆಟ್ ಕಬಳಿಸಿದರು. ಡರ್ನ್ಬ್ಯಾಚ್ 4 ಓವರ್ಗಳಲ್ಲಿ 36 ರನ್ ನೀಡಿ 3 ವಿಕೆಟ್ ಪಡೆದರು.
ಕಿವೀಸ್ ತಂಡ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಆಂಗ್ಲರು ಕೇವಲ 12.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 143ರನ್ಗಳಿಸಿ ಗೆಲುವಿನ ನಗೆ ಬೀರಿತು.
ಇಂಗ್ಲೆಂಡ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಲಂಬ್ ಹಾಗೂ ಹೇಲ್ಸ್ ತಂಡಕ್ಕೆ ಮುರಿಯದ ಜತೆಯಾಟ ನೀಡಿ ಗೆಲುವಿನ ನಗೆ ಬೀರಿತು. 34 ಎಸೆತಗಳನ್ನು ಎದುರಿಸಿದ ಲಂಬ್ 1 ಬೌಂಡರಿ ಹಾಗೂ 5 ಸಿಕ್ಸರ್ ಸೇರಿದಂತೆ ಅಜೇಯ 53ರನ್ಗಳಿಸಿದರು. ಹೇಲ್ಸ್ 42 ಎಸೆತಗಳಲ್ಲಿ 9 ಬೌಂಡರಿಗಳು ಹಾಗೂ 4 ಸಿಕ್ಸರ್ಗಳು ಸೇರಿದ ಅಜೇಯ 80ರನ್ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ 139/8 (20 ಓವರ್)
ಗುಪ್ಟಿಲ್ 59 (55)
ಮೆಕಲಂ 26 (20)
ಬೌಲಿಂಗ್: ಬ್ರಾಡ್ 15/3, ಡರ್ನ್ಬ್ಯಾಚ್ 36/3
ಇಂಗ್ಲೆಂಡ್ 143/0 (12.4 ಓವರ್)
ಹೇಲ್ಸ್ ಅಜೇಯ 80 (42)
ಲಂಬ್ ಅಜೇಯ 53 (34)
ಬೌಲಿಂಗ್: ಬೌಲ್ಟ್ 20/0, ಫ್ರಾಂಕ್ಲಿನ್ 7/0