ಕಾಲಿಸ್ ವಿಷಯದಲ್ಲಿ ತಪ್ಪಾಗಿದೆ: ಐಸಿಸಿ
ಕೇಪ್ ಟೌನ್: ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ ಅಂಪೈರ್‌ಗಳಿಂದ ತಪ್ಪು ತೀರ್ಪು ಹೊರ ಬಂದಿದ್ದು, ಇದನ್ನು ಐಸಿಸಿ ಒಪ್ಪಿಕೊಂಡಿದೆ. ದಕ್ಷಿಣ ಆಫ್ರಿಕಾದ ಹಿರಿಯ ಬ್ಯಾಟ್ಸ್‌ಮನ್ ಜಾಕ್ ಕಾಲಿಸ್ 2 ರನ್‌ಗಳಿಸಿದ್ದಾಗ, ಅಜ್ಮಲ್ ಎಸೆತದಲ್ಲಿ ಬಂದ ಚೆಂಡು ಕಾಲಿಸ್ ಬ್ಯಾಟ್‌ಗೆ ತಗುಲದೆ ಶಾರ್ಟ್ ಲೆಗ್‌ನಲ್ಲಿದ್ದ ಅಜರ್ ಅಲಿ ಕೈ ಸೇರಿತು. ಈ ವೇಳೆ ಅಂಪೈರ್ ಸ್ಟೀವ್ ಡೇವಿಸ್ ಅದನ್ನು ಔಟ್ ಎಂದು ತೀರ್ಪು ನೀಡಿದರು. ತಕ್ಷಣ ಕಾಲಿಸ್ ರಿವ್ಯೂ ಪಡೆದು ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸಿದರು. ಈ ವೇಳೆ ಹಲವು ಬಾರಿ ಆ ಎಸೆತವನ್ನು ಪರಿಶೀಲಿಸಿದ ಮೂರನೇ ಅಂಪೈರ್ ಬಿಲ್ಲಿ ಬೌಡೆನ್, ಚೆಂಡು ಬ್ಯಾಟ್ ತಾಕಿರುವ ಬದಲು ಪ್ಯಾಡ್‌ಗೆ ತಾಗಿರುವುದು ಗಮನಕ್ಕೆ ಬಂದಿತು. ಆಗ ಮತ್ತೇ ಆ ಎಸೆತ ಪುನಃ ಪರಿಶೀಲನೆ ನಡೆಸಿ ಕಾಲಿಸ್ ಅವರಿಗೆ ಎಲ್‌ಬಿಡಬ್ಲ್ಯೂ ಎಂದು ಔಟ್ ಎಂಬ ತೀರ್ಪು ನೀಡಿದರು. ಇಲ್ಲಿ ಕಾಲಿಸ್ ಚೆಂಡು ಬ್ಯಾಟಿಗೆ ತಾಕಿಲ್ಲ ಎಂದು ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸಿದ್ದು, ಎಲ್‌ಬಿಡಬ್ಲ್ಯೂ ಎಂದು ಔಟ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಕಾಲಿಸ್‌ಗೆ ನೀಡಿರುವ ತೀರ್ಮಾನವನ್ನು ತಪ್ಪೆಂದು ಒಪ್ಪಿಕೊಂಡಿರುವ ಐಸಿಸಿ, ಅಂಪೈರ್‌ಗಳು ತಮ್ಮ ನಿಯಮಾವಳಿಗಳ ಒಳಗೆ ತೀರ್ಪು ನೀಡಿದ್ದು ಒಂದು ವೇಳೆ ಬ್ಯಾಟ್ಸ್‌ಮನ್ ಔಟಾಗಿರುವ ಬಗ್ಗೆ ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸಿದಾಗ ಎಲ್ಲಾ ಆಯಾಮಗಳಲ್ಲೂ ಅಂಪೈರ್ ಅದನ್ನು ಪರಿಶೀಲಿಸುತ್ತಾರೆ ಎಂದು ತಿಳಿಸಿದೆ.