ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಗಂಭೀರ್ ಪಡೆಗೆ ದಿನದ ಗೌರವ

Parashurama
Updated On : 16 Feb 2013, 11:39 am

ಚೆನ್ನೈ: ಗೌತಮ್ ಗಂಭೀರ್ ಅವರ ಆಕರ್ಷಕ ಶತಕದ ನೆರವಿನಿಂದಾಗಿ, ಭಾರತ ಎ ತಂಡ, ಶನಿವಾರ ಆರಂಭಗೊಂಡ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ದಿನಾಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ. ಆಸೀಸ್ ಪಾಲಿಗೆ ಇದು ದ್ವಿತೀಯ ಹಾಗೂ ಅಂತಿಮ ಅಭ್ಯಾಸ ಪಂದ್ಯವಾಗಿದೆ.
ಗಂಭೀರ್ ಅವರ ಭರ್ಜರಿ 112 ರನ್‌ಗಳ ಜೊತೆಗೆ ರೋಹಿತ್ ಶರ್ಮಾ ಹಾಗೂ ಮನೋಜ್ ತಿವಾರಿ ಅವರ ಅರ್ಧಶತಕಗಳೂ ಭಾರತದ ಪಾಲಿಗೆ ಶನಿವಾರದ ದಿನದಾಟದಲ್ಲಿ ನೆರವಿಗೆ ಬಂದವು.
ಒಟ್ಟು 162 ಎಸೆತಗಳನ್ನು ಎದುರಿಸಿದ ಗಂಭೀರ್, 13 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಾಯದಿಂದ ತಮ್ಮ 33ನೇ ಶತಕವನ್ನು ಗಳಿಸಿದರು. ಅವರೊಂದಿಗೆ ಕ್ರೀಸ್‌ನಲ್ಲಿ ಉತ್ತಮ ಸಾಥ್ ನೀಡಿದ ರೋಹಿತ್ ಶರ್ಮಾ 77 ರನ್ ಗಳಿಸಿದರೆ, ಮತ್ತೊಬ್ಬ ಬ್ಯಾಟ್ಸ್‌ಮನ್ ಮನೋಜ್ ತಿವಾರಿ 77 ರನ್ ಗಳಿಸಿ, ದಿನಾಂತ್ಯದವರೆಗೂ ಅಜೇಯರಾಗಿ ಉಳಿದರು.
ಆಸೀಸ್ ಪರವಾಗಿ 3 ವಿಕೆಟ್ ಗಳಿಸಿದ, ಎಡಗೈ ಸ್ಪಿನ್ನರ್ ಕ್ಸೇವಿಯರ್ ಡೊಹರ್ಟಿ ಅವರು 3 ವಿಕೆಟ್‌ಗಳನ್ನು ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.
ಶನಿವಾರ ದಿನ ಅಕ್ಷರಶಃ ಗಂಭೀರ್ ಅವರ ದಿನವಾಗಿತ್ತು. ಆಸೀಸ್ ಬೌಲರ್‌ಗಳನ್ನು ದಂಡಿಸುವಲ್ಲಿ ಯಶಸ್ವಿಯಾದ ಅವರು, ಶತಕದ ಮೂಲಕ ತಮ್ಮನ್ನು ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿಟ್ಟಿದ್ದ ಆಯ್ಕೆ ಮಂಡಳಿಗೆ, ತಮ್ಮ ಫಾರ್ಮ್ ಅನ್ನು ಸಾಬೀತುಪಡಿಸಿದರು.
ಟಾಸ್ ಗೆದ್ದಿದ್ದ ಗಂಭೀರ್, ಮೊದಲು ಬ್ಯಾಟಿಂಗ್ ತೆಗೆದುಕೊಂಡಿದ್ದರು. ರಣಜಿ ಆಟಗಾರ ಜೀವನ್‌ಜ್ಯೋತ್ ಸಿಂಗ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಅವರು, ಮೊದಲ ವಿಕೆಟ್‌ಗೆ 67 ರನ್‌ಗಳ ಜೊತೆಯಾಟವಾಡಿದರು.
ಇನಿಂಗ್ಸ್‌ನ 25ನೇ ಓವರ್‌ನಲ್ಲಿ ಸಿಂಗ್ (24) ಔಟಾದ ಮೇಲೆ, ಗಂಭೀರ್‌ಗೆ ಜೋಡಿಯಾಗಿದ್ದು ರೋಹಿತ್ ಶರ್ಮಾ. ಈ ಜೋಡಿ, 2ನೇ ವಿಕೆಟ್‌ಗೆ 128 ರನ್ ಸೇರಿಸಿತು. ಜೀವನ್‌ಜ್ಯೋತ್ ಸಿಂಗ್ ನಿರ್ಗಮನದ ನಂತರ, ಸ್ಪಿನ್ನರ್‌ಗಳನ್ನು ಆಸೀಸ್ ನಾಯಕ ಕ್ಲಾರ್ಕ್ ದಾಳಿಗೆ ಇಳಿಸಿದರು.
ಆದರೆ, ಈ ದಾಳಿಯನ್ನು ಸಮರ್ಥವಾಗಿ ಮೆಟ್ಟಿನಿಂತ ಗಂಭೀರ್-ರೋಹಿತ್ ಜೋಡಿ, ಕ್ರೀಸ್‌ನಲ್ಲಿ ನಿರರ್ಗಳವಾಗಿ ಬ್ಯಾಟ್ ಬೀಸಿತು. ಅದರಲ್ಲೂ ವಿಶೇಷವಾಗಿ ಗಂಭೀರ್ ಅತ್ಯುತ್ತಮವಾಗಿ ಸ್ಪಿನ್ನರ್‌ಗಳ ದಾಳಿಯನ್ನು ಎದುರಿಸಿದರು. ನಥಾನ್ ಲಿಯಾನ್ ಅವರ 20 ಓವರ್‌ಗಳು (0/97), ಎಡಗೈ ಸ್ಪಿನ್ನರ್ ಆಶ್ಟಾನ್ ಆ್ಯಗರ್ ಅವರ 13 ಓವರ್‌ಗಳು (0/78) ಆಸೀಸ್ ಪಾಲಿಗೆ ನಿರೀಕ್ಷಿತ ಪ್ರತಿಫಲ ನೀಡಲಿಲ್ಲ. ಅದರಲ್ಲೂ ರೋಹಿತ್ ಹಾಗೂ ಗಂಭೀರ್ ಇಬ್ಬರೂ ಆ್ಯಗರ್ ಅವರ ಬೌಲಿಂಗ್‌ನಲ್ಲಿ ಹಲವಾರು ಬಾರಿ ಬೌಡರಿ ಬಾರಿಸಿ, ಕ್ಲಾರ್ಕ್ ಅವರ ಯೋಜನೆಯನ್ನು ತಲೆಕೆಳಗು ಮಾಡಿದರು.
ರೋಹಿತ್‌ಗೆ ಪುಳಕ: ಇತ್ತೀಚೆಗೆ ನಡೆದ ಇರಾನಿ ಕಪ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಏಕಅಂಕಿ ರನ್ ಮಾತ್ರವೇ ಗಳಿಸಲು ಶಕ್ತರಾಗಿದ್ದ ರೋಹಿತ್ ಅವರಿಗೂ ತಮ್ಮ ಫಾರ್ಮ್ ಸಾಬೀತುಪಡಿಸಲು ಸಾಧ್ಯವಾಯಿತು. ಒಟ್ಟು 144 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸೇರಿದಂತೆ 77 ರನ್ ಗಳಿಸಿದರು.
2ನೇ ವಿಕೆಟ್‌ಗೆ 128 ರನ್ ಪೇರಿಸಿದ ಈ ಜೋಡಿ, ಇನಿಂಗ್ಸ್‌ನ 56ನೇ ಓವರ್‌ನಲ್ಲಿ ಮುರಿಯಿತು. 112 ರನ್ ಗಳಿಸಿದ್ದ ಗಂಭೀರ್, ಹೆನ್ರಿಕ್ಯೂಸ್ ಬೌಲಿಂಗ್‌ನಲ್ಲಿ ವ್ಯಾಟ್ಸನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
ಅವರ ನಂತರ, ಕ್ರೀಸ್‌ಗೆ ಕಾಲಿಟ್ಟಿದ್ದು ಮನೋಜ್ ತಿವಾರಿ. ಈ ಜೋಡಿ, ಕ್ರೀಸ್‌ನಲ್ಲಿ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿತಾದರೂ, ಆನಂತರ ಬಿರುಸಿನ ಆಟ ಆರಂಭಿಸಿತು.
ಬಂಗಾಳ ತಂಡದ ನಾಯಕರೂ ಆಗಿರುವ ತಿವಾರಿ, 12 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಾಯದಿಂದ ದಿನಾಂತ್ಯಕ್ಕೆ 77 ರನ್ ಗಳಿಸಿದ್ದಾರೆ.
ಶನಿವಾರದ ದಿನದಾಟದಲ್ಲಿ ಶತಕ ಗಳಿಸುವಲ್ಲಿ ರೋಹಿತ್ ಶರ್ಮಾ ವಿಫಲರಾದರು. 72ನೇ ಓವರ್‌ನಲ್ಲಿ ಡೊಹರ್ಟಿ ಎಸೆತದಲ್ಲಿ ಕೀಪರ್ ಮ್ಯಾಥ್ಯೂ ವೇಡ್‌ಗೆ ಕ್ಯಾಚ್ ನೀಡಿದ ಶರ್ಮಾ, ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ರೋಹಿತ್ - ತಿವಾರಿ ಜೋಡಿ, 3ನೇ ವಿಕೆಟ್‌ಗೆ 71 ರನ್ ಸೇರಿಸಿತು.
ರೋಹಿತ್ ಔಟಾದ ನಂತರ, ಕ್ರೀಸ್‌ಗೆ ಕಾಲಿಟ್ಟ ಅಭಿಷೇಕ್ ನಾಯರ್, ಒಂದು ಬೌಂಡರಿ ಮೂಲಕವೇ ತಮ್ಮ ಇನಿಂಗ್ಸ್ ಆರಂಭಿಸಿದರು. ಆದರೆ, ಅವರ ಆರ್ಭಟವನ್ನು ಕಟ್ಟಿಹಾಕಿದ ಡೊಹರ್ಟಿ, ಇನಿಂಗ್ಸ್‌ನ 74ನೇ ಓವರ್‌ನಲ್ಲಿ ಅವರ ವಿಕೆಟ್ ಕೆಡವಿ, ಪೆವಿಲಿಯನ್‌ಗೆ ಕಳಿಸಿದರು.
ಆಗ, ತಿವಾರಿಗೆ ಜೊತೆಯಾಗಿದ್ದು ಕರ್ನಾಟಕದ ವಿಕೆಟ್ ಕೀಪರ್ ಸಿ.ಎಂ. ಗೌತಮ್. ದಿನಾಂತ್ಯದವರೆಗೂ ಅಜೇಯವಾಗಿ ಉಳಿದ ಈ ಜೋಡಿ, ಮುರಿಯದ 5ನೇ ವಿಕೆಟ್ ಜೊತೆಯಾಟದಲ್ಲಿ 66 ರನ್ ಕಲೆಹಾಕಿತು.
ದಿನಾಂತ್ಯಕ್ಕೆ, 77 ರನ್ ಗಳಿಸಿದ ತಿವಾರಿ, 34 ರನ್ ಗಳಿಸಿದ ಗೌತಮ್ ಇಬ್ಬರೂ ಕ್ರೀಸ್‌ನಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement