ಪಿಸ್ಟೋರಿಯಸ್ ಮನೆಯಲ್ಲಿ ರಕ್ತಸಿಕ್ತ ಬ್ಯಾಟ್ ಪತ್ತೆ
ಜೊಹಾನ್ಸ್ಬರ್ಗ್: ತನ್ನ ಪ್ರೇಯಸಿಯನ್ನು ಕೊಂದ ಆರೋಪ ಹೊತ್ತಿರುವ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ ಅವರ ಪ್ರಕರಣದಲ್ಲಿ ಮತ್ತೊಂದು ತಿರುವು ಪಡೆದಿದೆ. ಪಿಸ್ಟೋರಿಯಸ್ ಮನೆಯಲ್ಲಿ ರಕ್ತದ ಕಲೆಯಾಗಿರುವ ಕ್ರಿಕೆಟ್ ಬ್ಯಾಟೊಂದು ಪೊಲೀಸರಿಗೆ ಲಭ್ಯವಾಗಿದೆ ಎಂದು ಅಲ್ಲಿನ ಪತ್ರಿಕೆಯಲ್ಲಿ ವರದಿಯಾಗಿದೆ.
ಈ ಪ್ರಕರಣದ ತನಿಖೆಯಲ್ಲಿರುವ ಪೊಲೀಸ್ ಮೂಲಗಳ ಮಾಹಿತಿ ಆಧಾರದ ಮೇಲೆ ಪತ್ರಿಕೆ ಈ ವರದಿಯನ್ನು ಪ್ರಕಟಿಸಿದೆ. ಆ ಮೂಲಗಳ ಪ್ರಕಾರ ಪಿಸ್ಟೋರಿಯಸ್ನ ಪ್ರೇಯಸಿ, ರೀವಾ ಸ್ಟೀನ್ಕಾಂಪ್ ಅವರ ತಲೆಬುರುಡೆ ಸ್ವಲ್ಪ ಮಟ್ಟಿಗೆ ನುಜ್ಜಾಗಿದ್ದು, ಪಿಸ್ಟೋರಿಯಸ್ ಮನೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ರಕ್ತದ ಕಲೆಯಾಗಿರುವ ಕ್ರಿಕೆಟ್ ಬ್ಯಾಟ್ ಪೊಲೀಸರಿಗೆ ಲಭಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ರೀವಾ ಮೇಲೆ ಈ ಬ್ಯಾಟ್ನಿಂದ ಹಲ್ಲೆ ಮಾಡಲಾಗಿದೆಯೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.