ಬಿನ್ನಿ ಪಡೆಗೆ ಬಿಂದಾಸ್ ಗೆಲುವು
ಗೊವಾ: ಪ್ರಸಕ್ತ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಸತತ ಮೂರನೇ ಗೆಲುವು ದಾಖಲಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಬಿನ್ನಿ ಸಾರಥ್ಯದ ರಾಜ್ಯ ತಂಡ, ಭಾನುವಾರ ನಡೆದ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಜಯಗಳಿಸುವುದರೊಂದಿಗೆ ತನ್ನ ಗೆಲುವಿನ ಸವಾರಿ ಮುಂದುವರಿಸಿದೆ.
ಸಂಘಟಿತ ಬೌಲಿಂಗ್ ಹಾಗೂ ಮೊನಚಾದ ಬ್ಯಾಟಿಂಗ್ ಪ್ರದರ್ಶನ ನೀಡಿದ ಕರ್ನಾಟಕ ತಂಡ, ತಮಿಳುನಾಡು ತಂಡವನ್ನು 7 ವಿಕೆಟ್ಗಳ ಅಂತರದಲ್ಲಿ ಮಣಿಸಿ ಗೆಲುವಿನ ನಗೆ ಬೀರಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ತಮಿಳುನಾಡು ತಂಡ, ನಾಯಕ ದಿನೇಶ್ ಕಾರ್ತಿಕ್ ಹಾಗೂ ವಿ.ಶಂಕರ್ ಅವರ ಸಮಯೋಚಿತ ಅರ್ಧ ಶತಕದ ನೆರವಿನಿಂದ ನಿಗಧಿತ 50 ಓವರ್ಗಳಲ್ಲಿ 250 ರನ್ ಕಲೆಹಾಕಿತು.
ತಮಿಳುನಾಡು ತಂಡದ ಪರ ಇನಿಂಗ್ಸ್ ಆರಂಭಿಸಿದ ಶ್ರೀಕಾಂತ್ ಅನಿರುದ್ಧ ಹಾಗೂ ಅಭಿನವ್ ಮುಂಕುಂದ್, ತಂಡಕ್ಕೆ ನಿರೀಕ್ಷಿತ ಆರಂಭ ನೀಡಲಿಲ್ಲ. ತಂಡ 21 ರನ್ಗಳಿಸಿದ್ದಾಗ 5ನೇ ಓವರ್ನ ಕೊನೆ ಎಸೆತದಲ್ಲಿ ಮಿಥುನ್ ಎಸೆತದಲ್ಲಿ ಬೌಲ್ಡ್ ಆದ ಅನಿರುದ್ಧ, ಕೇವಲ 14 ರನ್ಗಳಿಸಿದ್ದರು. ನಂತರ ಬಂದ ಬಾಬಾ ಅಪರಾಜಿತ್ 21 ಎಸೆತಗಳಲ್ಲಿ ಕೇವಲ 14 ರನ್ಗಳಿಸಿ ಸ್ಟುವರ್ಟ್ ಬಿನ್ನಿ ಎಸೆತದಲ್ಲಿ ರಾಹುಲ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು.
ನಂತರ ಬಂದ ಅನುಭವಿ ಬ್ಯಾಟ್ಸ್ಮನ್ ಎಸ್.ಬದ್ರಿನಾಥ್ ಹೆಚ್ಚು ಹೊತ್ತು ಕ್ರಿಸ್ನಲ್ಲಿ ನಿಲ್ಲಲು ಕರ್ನಾಟಕ ತಂಡ ಬಿಡಲಿಲ್ಲ. ಅನಾವಶ್ಯಕ ರನ್ ಕದಿಯಲು ಪ್ರಯತ್ನಿಸಿದ ಬದ್ರಿನಾಥ್, ಉತ್ತಪ್ಪ ಹಾಗೂ ಬಿನ್ನಿ ಅವರ ತೀಕ್ಷ್ಣ ಕ್ಷೇತ್ರ ರಕ್ಷಣೆಯಿಂದ ರನೌಟ್ ಆದರು.
ನಂತರ 78 ಎಸೆತಗಳಲ್ಲಿ 39 ರನ್ಗಳಿಸಿ ರಕ್ಷಣಾತ್ಮಕವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಮುಕುಂದ್, ಮಿಥುನ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.
ಉತ್ತಮ ಜತೆಯಾಟ: ತಂಡ 85 ರನ್ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಒಂದಾದ ನಾಯಕ ದಿನೇಶ್ ಕಾರ್ತಿಕ್ ಹಾಗೂ ವಿ.ಶಂಕರ್ ಉತ್ತಮ ಜತೆಯಾಟ ನೀಡಿದರು. 5ನೇ ವಿಕೆಟ್ಗೆ ಈ ಜೋಡಿ 142 ರನ್ಗಳ ಅದ್ಭುತ ಜತೆಯಾಟ ನೀಡಿ ತಂಡದ ಮೊತ್ತವನ್ನು 227 ರನ್ಗಳಿಗೆ ಕೊಂಡೊಯ್ದು ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು. ಈ ವೇಳೆ 73 ಎಸೆತಗಳಲ್ಲಿ 59 ರನ್ಗಳಿಸಿದ್ದ ಶಂಕರ್ ಬಿನ್ನಿ ಎಸೆತದಲ್ಲಿ ಮಿಥುನ್ಗೆ ಕ್ಯಾಚ್ ನೀಡುವ ಮೂಲಕ ತಮ್ಮ ಉತ್ತಮ ಜತೆಯಾಟಕ್ಕೆ ಅಂತ್ಯವಾಡಿದರು.
ನಂತರ ನಾಲ್ಕು ರನ್ಗಳಲ್ಲಿ, 87 ಎಸೆತಗಳನ್ನು ಎದುರಿಸಿ 84 ರನ್ಗಳಿಸಿದ್ದ ಕಾರ್ತಿಕ್, ಶರತ್ ಎಸೆತದಲ್ಲಿ ಉತ್ತಪ್ಪಗೆ ಕ್ಯಾಚ್ ನೀಡುವ ಮೂಲಕ ತಮ್ಮ ಇನಿಂಗ್ಸ್ ಅನ್ನು ಮುಗಿಸಿದರು. ನಂತರ ಸರ್ಗುಣಂ 8 ಹಾಗೂ ಮಹೇಶ್ 0 ರನ್ಗಳಿಸಿ ಔಟಾದರೆ, ಮಹಮದ್ 7 ಹಾಗೂ ಶಾ 6 ರನ್ಗಳಿಸಿ ಅಜೇಯರಾಗುಳಿದರು.
ಬ್ಯಾಟ್ಸ್ಮನ್ಗಳ ಅಬ್ಬರ: ತಮಿಳುನಾಡು ನೀಡಿದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಕರ್ನಾಟಕ ತಂಡದ ಬ್ಯಾಟ್ಸ್ಮನ್ಗಳು, ಅಬ್ಬರದ ಬ್ಯಾಟಿಂಗ್ ನಡೆಸಿ 45.2 ಓವರ್ಗಳಲ್ಲಿ ತಮ್ಮ ಗುರಿಯನ್ನು ಮುಟ್ಟಿದರು.
ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್. ರಾಹುಲ್ ಹಾಗೂ ರಾಬಿನ್ ಉತ್ತಪ್ಪ, ಮೊದಲ ವಿಕೆಟ್ಗೆ 48 ರನ್ಗಳ ಸಾಧಾರಣ ಜತೆಯಾಟ ನೀಡಿದರು. ಈ ವೇಳೆ 20 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ 20 ರನ್ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಾಹುಲ್, ಮಹೇಶ್ ಎಸೆತದಲ್ಲಿ ಮಹಮದ್ಗೆ ಕ್ಯಾಚ್ ನೀಡಿ ಔಟಾದರು.
ನಂತರ ಉತ್ತಪ್ಪ, ಗಣೇಶ್ ಜತೆಗೂಡಿ 36 ರನ್ಗಳ ಜತೆಯಾಟ ನೀಡಿದರು. 45 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ಗಳನ್ನು ಬಾರಿಸಿದ್ದ ಉತ್ತಪ್ಪ, 49 ರನ್ಗಳಿಸಿ ಶಾ ಎಸೆತದಲ್ಲಿ ಮಹೇಶ್ಗೆ ಕ್ಯಾಚ್ ನೀಡಿದರು.
ನಂತರ ತಂಡದ ಮೊತ್ತ 129 ಆಗಿದ್ದಾಗ, 64 ಎಸೆತಗಳಲ್ಲಿ 35 ರನ್ಗಳಿಸಿ ತಾಳ್ಮೆಯ ಬ್ಯಾಟಿಂಗ್ ಮಾಡುತ್ತಿದ್ದ ಗಣೇಶ್ ಸತೀಶ್ ಅಪರಾಜಿತ್ ಎಸೆತದಲ್ಲಿ ಬೌಲ್ಡ್ ಆದರು.
ಯಶಸ್ವಿಯಾದ ಜೋಡಿ: ಈ ವೇಳೆ ಜತೆಗೂಡಿದ ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್, ರಾಜ್ಯ ತಂಡವನ್ನು ಗುರಿ ತಲುಪಿಸುವಲ್ಲಿ ಯಶಸ್ವಿಯಾದರು. ಈ ಜೋಡಿ 4ನೇ ವಿಕೆಟ್ಗೆ ಮುರಿಯದ 123 ರನ್ಗಳ ಜತೆಯಾಟ ನೀಡಿದರು. 92 ಎಸೆತಗಳನ್ನು ಎದುರಿಸಿದ ಪಾಂಡೆ 7 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ ಅಜೇಯ 81 ರನ್ಗಳಿಸಿದರೆ. ಸ್ಫೋಟಕ ಬ್ಯಾಟಿಂಗ್ ನಡೆಸಿದ ಕರುಣ್ ನಾಯರ್, ಕೇವಲ 51 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಬಾರಿಸಿ 64 ರನ್ಗಳಿಸಿದರು.
ಈ ಮೂಲಕ ಸತತ ಮೂರು ಪಂದ್ಯಗಳಲ್ಲಿ ಗೆಲುವು ಕಂಡಿರುವ ಬಿನ್ನಿ ಪಡೆ, 12 ಅಂಕಗಳನ್ನು ಪಡೆದುಕೊಂಡಿದೆ.