ಆಸ್ಕರ್‌ಗೆ ಸಿಕ್ತು ಜಾಮೀನು
ಪ್ರಿಟೊರಿಯಾ: ಪ್ರೇಯಸಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಆರೋಪದ ಹಿನ್ನಲೆಯಲ್ಲಿ ಬಂಧನಕ್ಕೊಳಗಾಗಿರುವ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್‌ಗೆ ಕೊನೆಗೂ ಶುಕ್ರವಾರ ಜಾಮೀನು ದೊರೆತಿದೆ. ಜಾಮೀನು ದೊರೆಯುವ ವಿಶ್ವಾಸದೊಂದಿಗೆ ವಿಚಾರಣೆಗೆ ಬಂದ ಪಿಸ್ಟೋರಿಯಸ್, ವಿಚಾರಣೆವೇಳೆ ತನ್ನ ಪ್ರೇಯಸಿಯನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಲಾಗಿದೆ ಎಂಬ ಪ್ರಸಿಕ್ಯೂಟರ್ ಆರೋಪವನ್ನು ತಳ್ಳಿ ಹಾಕಿದರು. ಆಕೆಯನ್ನು ದರೋಡೆಕೊರರೆಂದು ತಪ್ಪುತಿಳಿದು ಸ್ನಾನಗೃಹದಲ್ಲಿ ಗುಂಡಿಕ್ಕಲಾಯಿತು ಎಂದು ತಿಳಿಸಿದರು. ಶುಕ್ರವಾರ ವಾದಮಂಡಿಸಿದ ಪ್ರಾಸಿಕ್ಯೂಟರ್, ಪಿಸ್ಟೋರಿಯಸ್ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಘಟನೆಯ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಿಲ್ಲ ಹಾಗಾಗಿ ಅವರಿಗೆ ಜಾಮೀನು ನೀಡಬಾರದು ಎಂದು ವಾದಿಸಿದ್ದರು. ನಾಲ್ಕು ದಿನಗಳ ವಿಚಾರಣೆ ನಂತರ ಪಿಸ್ಟೋರಿಯಸ್‌ಗೆ ಜಾಮೀನು ನೀಡಲು ಒಪ್ಪಿದ ಮ್ಯಾಜಿಸ್ಟ್ರೇಟ್ ಡೆಸ್ಮಂಡ್ ನೈರ್, ಅಂತಿಮವಾಗಿ ಪಿಸ್ಟೋರಿಯಸ್‌ಗೆ ಜಾಮೀನು ನೀಡಿದರು. ಮ್ಯಾಜಿಸ್ಟ್ರೇಟ್ ಈ ನಿರ್ಧಾರ ಹೊರಡಿಸುತ್ತಿದ್ದಂತೆ ಪಿಸ್ಟೋರಿಯಸ್ ಕುಟುಂಬ ಸದಸ್ಯರು ಸಂತಸ ವ್ಯಕ್ತಪಡಿಸಿದ್ದು, ಈ ವೇಳೆ ಪಿಸ್ಟೋರಿಯಸ್ ಭಾವುಕರಾದರು.