ಟೆನಿಸ್ ಬಂಡಾಯ ಶಮನ?
ನವದೆಹಲಿ: ಭಾರತದ ಅಗ್ರ ಸಿಂಗಲ್ಸ್ ಟೆನಿಸ್ ತಾರೆಗಳಾದ ಸೋಮ್‌ದೇವ್ ದೇವ್‌ವರ್ಮನ್ ಮತ್ತು ಯೂಕಿ ಭಾಂಬ್ರಿ ಅವರು ಡೇವಿಸ್ ಕಪ್ ತಂಡಕ್ಕೆ ಮರಳುವ ಸಾಧ್ಯತೆಗಳಿವೆ. ಇಂಡೋನೇಷ್ಯಾ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಪಂದ್ಯಾವಳಿಗೆ ರಾಷ್ಟ್ರೀಯ ತಂಡ ಆಯ್ಕೆ ಮಾಡಲು, ಆಯ್ಕೆ ಸಮಿತಿ ಶನಿವಾರ ದೆಹಲಿಯಲ್ಲಿ ಸಭೆ ಸೇರಲಿದೆ.
ದೇಶದ ಅಗ್ರ 11 ಆಟಗಾರರು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ವಿರುದ್ಧ ಬಂಡಾವೆದ್ದಿದ್ದ ಹಿನ್ನೆಲೆಯಲ್ಲಿ, ದಕ್ಷಿಣ ಕೊರಿಯಾ ವಿರುದ್ಧ ಈ ತಿಂಗಳ ಆರಂಭದಲ್ಲಿ ನಡೆದ ಏಷ್ಯಾ ಓಸೇನಿಯಾ ಪಂದ್ಯಾವಳಿಯಲ್ಲಿ ಭಾರತ 1-4 ಅಂತರದಿಂದ ಪರಾಭವ ಹೊಂದಿತ್ತು.
ಆಟಗಾರರಿಗೆ ಅನುಕೂಲಕರವಾದ ವಾತಾವರಣ ಒದಗಿಸಿಕೊಡುವುದಾಗಿ ಎಐಟಿಎ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಬಂಡಾವೆದ್ದಿದ್ದ ಆಟಗಾರರು ತಾತ್ಕಾಲಿಕವಾಗಿ ಬಂಡಾಯವನ್ನು ಕೈಬಿಟ್ಟಿದ್ದು, ತಂಡಕ್ಕೆ ಲಭ್ಯರಾಗುವುದಾಗಿ ತಿಳಿಸಿದ್ದಾರೆ. ಎಐಟಿಎ ಎಲ್ಲ ಒಪ್ಪಿಗೆಗಳನ್ನು ಲಿಖಿತ ರೂಪದಲ್ಲಿ ನೀಡಿದೆ ಎನ್ನಲಾಗಿದೆ.
ರ್ಯಾಂಕಿಂಗ್‌ನಲ್ಲಿ 354ನೇ ಸ್ಥಾನದಲ್ಲಿರುವ ಸೋಮ್‌ದೇವ್ ಭಾರತದ5ನೇ ಅಗ್ರ ಆಟಗಾರನಾಗಿದ್ದರೂ, ಆಯ್ಕೆ ಸಮಿತಿ ಅವರನ್ನು ಕಡೆಗಣಿಸುವ ಸಾಧ್ಯತೆಗಳಿಲ್ಲ. ಏಕೆಂದರೆ ಪ್ರಸ್ತುತ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಎಟಿಪಿ ಪಂದ್ಯಾವಳಿಯಲ್ಲಿ 39ನೇ ರ್ಯಾಂಕಿಂಗ್ ಆಟಗಾರ ಬೆನೋಯಿಟ್ ಅವರನ್ನು ಸೋಲಿಸಿದ್ದಾರೆ.
257ನೇ ರ್ಯಾಂಕ್ ಹೊಂದಿರುವ ಯೂಕಿ ಭಾಂಬ್ರಿ ಭಾರತದ ಅಗ್ರ ಸಿಂಗಲ್ಸ್ ಟೆನಿಸ್ ತಾರೆ ಎನಿಸಿದ್ದಾರೆ. ಹೀಗಾಗಿ ಯೂಕಿ ತಂಡಕ್ಕೆ ಮರಳಲಿದ್ದಾರೆ. ಯೂಕಿ ಕಿರಿಯರ ವಿಭಾಗದಲ್ಲಿ ಮಿಂಚಿದ ನಂತರ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಆದರೆ, ಭವಿಷ್ಯದಲ್ಲಿ ಸೋಮ್‌ದೇವ್ ಅವರೊಂದಿಗೆ ಸಿಂಗಲ್ಸ್ ಆಟಗಾರನಾಗಿ ಯೂಕಿ ಗುರುತಿಸಿಕೊಳ್ಳುವ ಸಾಧ್ಯತೆಗಳಿವೆ. ನ್ಯೂಜಿಲೆಂಡ್ ವಿರುದ್ಧ ಸೆಪ್ಟೆಂಬರ್ 2012ರಲ್ಲಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಅವರು ತಮ್ಮ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿದ್ದರು.
ಇನ್ನು ಡಬಲ್ಸ್ ವಿಭಾಗದಲ್ಲಿ ಲಿಯಾಂಡರ್ ಪೇಸ್ ಪ್ರಮುಖ ಆಟಗಾರ ಎನಿಸಿದ್ದಾರೆ. ಆದರೆ, ಕೊರಿಯಾ ವಿರುದ್ಧ ಲಿಯಾಂಡರ್ ಪೇಸ್ ಅವರೊಂದಿಗೆ ಉತ್ತಮ ಸಾಥ್ ನೀಡಿದ್ದ ಪುರವ ರಾಜಾ ಅವರನ್ನು ಉಳಿಸಿಕೊಳ್ಳಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.