ಡ್ರಾ ಸಾಧಿಸಿದ ವಿಶ್ವನಾಥನ್
ಜುರಿಚ್ (ಸ್ವಿಜರ್ಲೆಂಡ್): ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ಜುರಿಚ್ ಚೆಸ್ ಚಾಲೆಂಜ್ ಪಂದ್ಯಾವಳಿಯಲ್ಲಿ ಮಂಗಳವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಇಸ್ರೇಲ್ನ ಬೋರಿಸ್ ಜೆಲ್ಫಾಂಡ್ ವಿರುದ್ಧ ಡ್ರಾ ಸಾಧಿಸಿದರು. ಮೂರನೇ ದಿನದ ಪಂದ್ಯದಲ್ಲಿ ಪಂದ್ಯಾವಳಿಯ ಮೊದಲ ಜಯ ಎದುರು ನೋಡುತ್ತಿದ್ದ ಆನಂದ್, ತೀವ್ರ ಪೈಪೋಟಿಯ ಹೋರಾಟ ನಡೆಸಿದರು. ಆದರೆ, ಪಂದ್ಯದಲ್ಲಿ ಕಠಿಣ ಸವಾಲು ಎದುರಿಸುವ ಮೂಲಕ ಡ್ರಾ ಸಾಧಿಸುವಲ್ಲಿ ಮಾತ್ರ ಯಶಸ್ವಿಯಾದರು.
ದಿನದ ಇನ್ನೊಂದು ಪಂದ್ಯದಲ್ಲಿ ಇಟಲಿಯ ಫ್ಯಾಪಿಯಾನೋ ಕಾರುನಾ ಅವರು ವಿಶ್ವದ ಮಾಜಿ ಚಾಂಪಿಯನ್ ಲಾಡಿಮಿರ್ ಕ್ರಾಮ್ನಿಕ್ ವಿರುದ್ಧ ಡ್ರಾ ಸಾಧಿಸಿದರು. ಮೂರು ಸುತ್ತು ನಡೆದ ಪಂದ್ಯಾವಳಿಯಲ್ಲಿ ಇದುವರೆಗೂ ಯಾವ ಆಟಗಾರನೂ ಮುನ್ನಡೆ ಕಂಡುಕೊಂಡಿಲ್ಲ.
ನಾಲ್ಕೂ ಆಟಗಾರರು ತಲಾ 1.5 ಅಂಕ ಹೊಂದಿದ್ದಾರೆ. ಒಂದು ದಿನದ ವಿಶ್ರಾಂತಿಯ ನಂತರ ಉಳಿದ ಪಂದ್ಯಗಳು ನಡೆಯಲಿವೆ.