ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬನ್ನೂರ ಮೀನು

ಈತ ಪಕ್ಕಾ ಗ್ರಾಮೀಣ ಪ್ರತಿಭೆ. ಬಾಲ್ಯದಲ್ಲಿ ಹಾಗೆ ಸುಮ್ಮನೆ ಕಾಲ ಕಳೆಯಲೆಂದು ಈಜುವುದನ್ನು ಹವ್ಯಾಸವನ್ನಾಗಿಸಿಕೊಂಡಿದ್ದ. ಈತನ ...

Rashmi Kasaragodu
Updated On : 26 Feb 2013, 1:24 am

ಈತ ಪಕ್ಕಾ ಗ್ರಾಮೀಣ ಪ್ರತಿಭೆ. ಬಾಲ್ಯದಲ್ಲಿ ಹಾಗೆ ಸುಮ್ಮನೆ ಕಾಲ ಕಳೆಯಲೆಂದು ಈಜುವುದನ್ನು ಹವ್ಯಾಸವನ್ನಾಗಿಸಿಕೊಂಡಿದ್ದ. ಈತನ ಆಸೆಯನ್ನು ಗಮನಿಸಿದ ಪೋಷಕರು, ಇನ್ನಷ್ಟು ಪ್ರೋತ್ಸಾಹ ಹಾಗೂ ತರಬೇತಿ ನೀಡಿದರೆ ಹೇಗೆ ಎನ್ನುವ ಯೋಚನೆಯಲ್ಲಿ ತೊಡಗಿದರು. ಮೊದಲೇ ಸ್ವಿಮ್ಮಿಂಗ್ ವಲಯ ಪರಿಚಯವಿದ್ದ ಈತನ ತಂದೆ ತರಬೇತಿ ನೀಡಲು ಅಣಿಯಾದರು. ಮೊದಮೊದಲು ತಂದೆಯ ಗರಡಿಯಲ್ಲೇ ಪಳಗಿದ ಈ ಪ್ರತಿಭೆ ಇಂದು ರಾಜ್ಯಮಟ್ಟದ ಪ್ರತಿಭಾವಂತ ಈಜುಗಾರ. ಅಂದ ಹಾಗೆ ಈತನ ಹೆಸರು ಗೌತಮ್. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರಿನ ಪುರಂದರ ಮತ್ತು ಹೇಮಾಮಾಲಿನಿ ದಂಪತಿಯ ಪುತ್ರ. ಐದನೇ ವಯಸ್ಸಿಗೆ ಸ್ವಿಮ್ಮಿಂಗ್ ಕಲಿತವ.
ಸಾಧನೆಯ ಶಿಖರವನ್ನೇರಿ...
ಗೌತಮ್ ಸ್ವಿಮ್ಮಿಂಗ್ ಪ್ರಾರಂಭಿಸಿದ್ದು ಪುತ್ತೂರು 'ಬಾಲವನ ಈಜುಕೊಳ'ದಲ್ಲಿ. 2003ರಲ್ಲಿ ಪುತ್ತೂರಿನಲ್ಲೇ ನಡೆದ 25 ಮೀ. ಫ್ರೀ ಸ್ಟೈಲ್ ರಿಲೇಯಲ್ಲಿ ದ್ವಿತೀಯ ಸ್ಥಾನಿ. 4 ್ಢ 50 ಫ್ರೀ ಸ್ಟೈಲ್ ರಿಲೇಯಲ್ಲಿ 3ನೇ ಸ್ಥಾನ, 25 ಮೀ. ಬ್ಯಾಕ್ ಸ್ಟೈಲ್ ರಿಲೇ ಮತ್ತು 50 ಮೀಟರ್ ಸ್ಟೈಲ್ ರಿಲೇಯಲ್ಲಿ 2ನೇ ಸ್ಥಾನ ಬಾಚಿ ಒಟ್ಟು 2 ಬೆಳ್ಳಿ ಮತ್ತು ಒಂದು ಕಂಚು ಪದಕವನ್ನು ತೆಕ್ಕೆಗೆ ಹಾಕಿಕೊಂಡ.
ಅಂತೆಯೇ 2004ರಲ್ಲಿ ವಿಟ್ಲದ ಕೋಟಿಕೆರೆಯಲ್ಲಿ ನಡೆದ 25 ಮೀ, ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟ. 2005ರಲ್ಲೂ ಈತನ ಪ್ರದರ್ಶನ ಗಮನಾರ್ಹ. ಪುತ್ತೂರಿನ ಬಾಲವನ ಈಜುಕೊಳದಲ್ಲಿ ನಡೆದ 4 ್ಢ 50 ಫ್ರೀ ಸ್ಟೈಲ್ ರಿಲೇಯಲ್ಲಿ ತೃತೀಯ, 50 ಮೀ. ಸ್ಟೈಲ್ ರಿಲೇಯಲ್ಲಿ ತೃತೀಯ, 25 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ದ್ವಿತೀಯ ಸ್ಥಾನ ಸೇರಿದಂತೆ ಒಟ್ಟು ಮೂರು ಕಂಚಿನ ಪದಕವನ್ನು ಗಳಿಸಿದ್ದ.
ಕಾರಣಾಂತರಗಳಿಂದ ಎರಡು ವರ್ಷಗಳ ಕಾಲ ಸ್ವಿಮ್ಮಿಂಗ್‌ಗೆ ಬ್ರೇಕ್ ಹಾಕಿದ ಗೌತಮ್ 2009ರಲ್ಲಿ ಪುನಾ ಕಮ್‌ಬ್ಯಾಕ್ ಆದ. ಇದೇ ವರ್ಷ ಬೆಂಗಳೂರಿನ ಕೆ.ಸಿ. ರೆಡ್ಡಿ ಈಜುಕೊಳದಲ್ಲಿ ನಡೆದ ಸ್ಪರ್ಧೆಯಲ್ಲಿ 200 ಮೀ. ಸ್ಟ್ರೋಕ್ ಈಜಿನಲ್ಲಿ ತೃತೀಯ, 100 ಮೀ. ಸ್ಟ್ರೋಕ್‌ನಲ್ಲಿ ತೃತೀಯ ಸ್ಥಾನ ದೊರಕಿತು. ಇಷ್ಟೇ ಅಲ್ಲದೆ ಜಿಲ್ಲಾ ಮಟ್ಟದಲ್ಲೂ ಉತ್ತಮ ಪ್ರದರ್ಶನ ತೋರಿ, ಮಂಗಳೂರಿನಲ್ಲಿ ನಡೆದ 100 ಮೀ. ಬ್ರೆಸ್ಟ್ ಸ್ಟ್ರೋಕ್ ಸ್ವಿಮ್ಮಿಂಗ್‌ನಲ್ಲಿ ಪ್ರಥಮ, 50 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಪ್ರಥಮ, 4 ್ಢ 100ಮೀ. ಫ್ರೀ ಸ್ಟೈಲ್‌ನಲ್ಲಿ ದ್ವಿತೀಯ ಸ್ಥಾನ ಸೇರಿದಂತೆ ಬರೋಬ್ಬರಿ ಎರಡು ಚಿನ್ನ, ಬೆಳ್ಳಿ ಮತ್ತು ಕಂಚು ಪದಕಗಳನ್ನು ಪಡೆದುಕೊಂಡ.
ಈತನ ಪ್ರತಿಭಾ ಹೂರಣ ಇಷ್ಟಕ್ಕೇ ಮುಗಿಯುತು ಅಂದುಕೊಂಡಿರಾ? ಖಂಡಿತಾ ಇಲ್ಲ, 2010ರಲ್ಲೂ ಪದಕಗಳ ಸರಮಾಲೆಯನ್ನೇ ಪಡೆದ ಪ್ರತಿಭಾನ್ವಿತ ಈತ. ಪುತ್ತೂರಿನಲ್ಲಿ ನಡೆದ 100 ಮೀಟರ್, 50 ಮತ್ತು 200 ಮೀ. ಬ್ರೆಸ್ಟ್ ಸ್ಟ್ರೋಕ್ ಈಜಿನಲ್ಲಿ ಬೆಳ್ಳಿಯ ಪದಕಕ್ಕೆ ಗುರಿಯಿಟ್ಟ. ಇದೇ ವರ್ಷ ಮಂಗಳೂರಿನಲ್ಲಿ ನಡೆದ ಇಂಟರ್ ಡಿಸ್ಟ್ರಿಕ್ಟ್ ಸ್ಪರ್ಧೆಯಲ್ಲಿ 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಸ್ಮಿಮ್ಮಿಂಗ್‌ನಲ್ಲಿ ಚಿನ್ನದ ಪದಕ, 50 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಜೊತೆಗೆ ಮೀ. ಬಟರ್ ಫ್ಲೈ ಸ್ಟ್ರೋಕ್‌ನಲ್ಲಿ ಬೆಳ್ಳಿಯ ಪದಕ ಪಡೆದ. ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 4 ್ಢ 100 ಮೀ. ಫ್ರೀ ಸ್ಟೈಲ್ ರಿಲೇ  ಮತ್ತು ಮಿಡ್ ರಿಲೇಯಲ್ಲಿ ಬೆಳ್ಳಿ ಪದಕ ಈತನಿಗೊಲಿದಿದೆ.



ಸ್ವಿಮ್ಮಿಂಗ್ ಮೈಗೂಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆ ನಿರಂತರವಾದ ಕಠಿಣ ಅಭ್ಯಾಸ ನಡೆಸಬೇಕು. ನನ್ನ ಈ ಕ್ರೀಡಾಸಕ್ತಿಯನ್ನು ಇನ್ನಷ್ಟು ಎತ್ತರಕ್ಕೇರಿಸಿದ್ದು ಹೆತ್ತವರೂ ಹಾಗೂ ನನ್ನ ಗುರುಗಳು.
- ಗೌತಮ್


-ನವೀನ್ ಭಟ್ ಇಳಂತಿಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement