ಬೇಲಿಯ ಹೂಗಳ ಸೈಕ್ಲಿಂಗ್ ದಾಹ
ರಣ ರಣ ಬಿಸಿಲು... ಎಲ್ಲೆಲ್ಲೂ ಶುಷ್ಕ ವಾತಾವರಣ... ಇಂಥಾ ಪರಿಸರದಲ್ಲಿ...
ರಣ ರಣ ಬಿಸಿಲು... ಎಲ್ಲೆಲ್ಲೂ ಶುಷ್ಕ ವಾತಾವರಣ... ಇಂಥಾ ಪರಿಸರದಲ್ಲಿ ಪಂದ್ಯ ಗೆಲ್ಲಲು ಟೊಂಕ ಕಟ್ಟಿ ನಿಂತಿರುವ ಸವಾರರು... ಅವರಿಗೆ ಯಾರ ಬೆಂಬಲವೂ ಇಲ್ಲ. ಯಾರ ಪ್ರಾಯೋಜಕತ್ವವೂ ಇಲ್ಲ. ಮಾಧ್ಯಮಗಳೂ ಇವರ ಬಳಿ ಸುಳಿಯೋಲ್ಲ. ಕಂಪನಿಗಳ ಜಾಹೀರಾತುಗಳನ್ನು ಬಿಂಬಿಸುವ ಉಡುಪು ಇಲ್ಲ. ಪಂದ್ಯದಲ್ಲಿ ಅವರಿಗೆ ದಣಿವಾದರೆ, ಅವರ ದಾಹ ತಣಿಸಲು ಕನಿಷ್ಠ ಒಂದು ಜ್ಯೂಸ್ ಬಾಟಲಿಯೂ ಇಲ್ಲ.....
ಈ ಎಲ್ಲಾ 'ಇಲ್ಲ...'ಗಳ ನಡುವೆ, ಇರುವ ಒಂದೇ ಒಂದು 'ಇದೆ' ಎನ್ನುವುದಾದರೆ, ಅವರಲ್ಲಿನ ಬತ್ತದ ಕ್ರೀಡೋತ್ಸಾಹ ಮಾತ್ರ. ಬ್ರೆಜಿಲ್ಗೆ ಫುಟ್ಬಾಲ್ ಹೇಗೋ ಹಾಗೇ, ಇಲ್ಲಿ ಸೈಕ್ಲಿಂಗ್.
... ಇದು ಆಫ್ರಿಕಾದ ಬಡರಾಷ್ಟ್ರ ಎರಿಟ್ರಿಯಾ ದೇಶದಲ್ಲಿ ವಾರ್ಷಿಕವಾಗಿ ನಡೆಯುವ 'ಗಿರೋ ಡಿ'ಎರಿಟ್ರಿಯಾ' ಎಂಬ ಹೆಸರಿನ ಬೈಸಿಕಲ್ ಪಂದ್ಯಾವಳಿಯ ಮುನ್ನುಡಿ. ಇಲ್ಲಿ ಬಡತನವಿದೆ. ತುತ್ತು ಕೂಳಿಗೂ ಪರದಾಟವಿದೆ. ಇಲ್ಲಿಯ ಜನರ ಬದುಕಿಗೆ ಕಷ್ಟದ ದುಡಿಮೆಯೇ ಆಧಾರ. ಆದರೆ, ಅದನ್ನೂ ಮೀರಿ ಸೈಕ್ಲಿಂಗ್ ಕ್ರೀಡೆಯ ಉತ್ಸಾಹವಿದೆ. ಪ್ರತಿವಾರದ ಕೊನೆಯ ದಿನ ಇಲ್ಲಿ ಸೈಕ್ಲಿಂಗ್ ಪಂದ್ಯಗಳು ನಡೆಯುತ್ತಿರುತ್ತವೆ. ಆದರೆ, ವರ್ಷಕ್ಕೊಮ್ಮೆ ನಡೆಯುವ ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಮಾತ್ರ ಇಲ್ಲಿಯ ಜನರು ರಾಷ್ಟ್ರೀಯ ಹಬ್ಬದಂತೆ ಆಚರಿಸುತ್ತಾರೆ. ಸೈಕ್ಲಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಳುಗಳಿಗೆ ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ಕೈಬೀಸಿ ಪ್ರೋತ್ಸಾಹಿಸುತ್ತಾರೆ. ಅಂದಿನ ಮಟ್ಟಿಗೆ ಈ ಜನರ ತಿಂಡಿ, ಊಟ, ಟಾಕಿಂಗ್, ವಾಕಿಂಗ್, ಇನ್ನಿತರ ಚಟುವಟಿಕೆ ಎಲ್ಲವೂ... ಕೇವಲ ಸೈಕ್ಲಿಂಗ್ ಮಾತ್ರ! ಜಗತ್ತಿನ ಕಡುಬಡತನದ ದೇಶಗಳಲ್ಲೊಂದಾದ ಎರಿಟ್ರಿಯಾದಲ್ಲಿ ಕಾಣಬರುವ ಉತ್ಸಾಹದ ಚಿಲುಮೆ ಈ ಸೈಕ್ಲಿಂಗ್!
ಎಲ್ಲ ದೇಶಗಳಿಂದ ಬರುತ್ತಾರೆ
ಅಂದ ಹಾಗೆ, ಎರಿಟ್ರಿಯಾ ದೇಶದಲ್ಲಿ ಮೊಟ್ಟ ಮೊದಲ ಬಾರಿ ಇಂಥಾ ಸೈಕ್ಲಿಂಗ್ ಸ್ಪರ್ಧೆ ನಡೆದಿದ್ದು 2009ರ ಡಿಸೆಂಬರ್ 16ರಂದು. ಅಲ್ಲಿಂದ ಇಲ್ಲಿಯವರೆಗೂ ನಾಲ್ಕು ಅಂತಾರಾಷ್ಟ್ರೀಯ ಪಂದ್ಯಾವಳಿಗಳು ಇಲ್ಲಿ ನಡೆದಿವೆ. ಈ ಪಂದ್ಯಾವಳಿಗಳಲ್ಲಿ ಎರಿಟ್ರಿಯಾದ ಕ್ರೀಡಾಳುಗಳು ಮಾತ್ರವಲ್ಲ, ಮೊರಕ್ಕೊ, ಕೀನ್ಯಾ, ಸೌದಿ ಅರೇಬಿಯಾ, ಲಿಬಿಯಾ ಹಾಗೂ ಸುಡಾನ್ ದೇಶಗಳ ಕ್ರೀಡಾಳುಗಳು ಭಾಗವಹಿಸುತ್ತಾರೆ. ಪ್ರತಿ ಪಂದ್ಯಾವಳಿಯಲ್ಲೂ ಸುಮಾರು 50 ಕ್ರೀಡಾಳುಗಳು ಇರುತ್ತಾರೆ.
ಸ್ಪರ್ಧಾಳುಗಳ ಹಾದಿ...
ಈ ಪಂದ್ಯಾವಳಿ ಐದು ಹಂತಗಳನ್ನೊಳಗೊಂಡಿರುತ್ತದೆ. ಮೊದಲ ಹಂತದಲ್ಲಿ, ಸೈಕ್ಲಿಸ್ಟ್ಗಳು ಮೆಂಡೆಫೆರಾದ ಕೆರೆನ್ನ ಪರ್ವತ, ಶಿಖರಗಳ ದುರ್ಗಮ ಹಾದಿಯಲ್ಲಿ ಸಾಗಬೇಕಿರುತ್ತದೆ. ಇದು ಸುಮಾರು 14 ಕಿ.ಮೀ. ಪಯಣ.
ಎರಡನೇ ಹಂತ - ಮೆಕೆಮ್ಹಾರೆ ಪ್ರಾಂತ್ಯದ 15 ಕಿ.ಮೀ. ಪಯಣ. ಇದೂ ಸಹ ದುರ್ಗಮ ಹಾದಿಯೇ.
ಮೂರನೇ ಹಂತ- ಮಸ್ಸಾವಾ ಪ್ರಾಂತ್ಯದ ದಾರಿ. ಇದು 151 ಕಿ. ಮೀ. ಇರುತ್ತದೆ.
ನಾಲ್ಕನೇ ಹಂತವು ಅಸ್ಮಾರಾ ಪ್ರಾಂತ್ಯದ ಹಾದಿ. ಇಲ್ಲಿ ಸೈಕ್ಲಿಸ್ಟ್ಗಳು ಸುಮಾರು 115 ಕಿ. ಮೀ. ಸವೆಸಬೇಕು. ಇದರಲ್ಲಿ 50 ಕಿ.ಮೀ. ಮರುಭೂಮಿಯ ಹಾದಿ. ಐದನೇ ಹಾಗೂ ಕೊನೆಯ ಹಂತದಲ್ಲಿ ಸೈಕ್ಲಿಸ್ಟ್ಗಳು ಒಟ್ಟು 140 ಕಿ.ಮೀ. ಕ್ರಮಿಸಬೇಕು. ಕೊನೆಯ ಹಂತವಾದ ಇದು ಬಹಳಷ್ಟು ಜನರನ್ನು ಸೆಳೆದಿರುತ್ತದೆ. ಏಕೆಂದರೆ, ಗ್ರಾಂಡ್ ಫಿನಾಲೆ ನಡೆಯುವುದು ಈ ಹಂತದಲ್ಲೇ. ಅಲ್ಲದೇ, ಪಂದ್ಯಾವಳಿಯ ವಿಜೇತ ಕ್ರೀಡಾಳು ಇಲ್ಲೇ ನಿರ್ಧಾರವಾಗುವುದರಿಂದ ಸಹಜವಾಗಿ ಈ ಹಂತ ಹೆಚ್ಚು ಜನರನ್ನು ಸೆಳೆಯುತ್ತದೆ. ಇದುವರೆಗೂ ನಡೆದ ಪಂದ್ಯಾವಳಿಗಳಲ್ಲಿ ಸರಾಸರಿ 1.3 ಮಿಲಿಯನ್ ಜನರು ಈ ಫಿನಾಲೆ ಹಂತವನ್ನು ವೀಕ್ಷಿಸಿದ್ದಾರೆ.
ತಲೆ ಕೆಡಿಸಿಕೊಳ್ಳಲ್ಲ
ಎರಿಟ್ರಿಯಾದಲ್ಲಿ ನಡೆಯುವ ಈ ಪಂದ್ಯಾವಳಿ ಹೆಸರಿಗಷ್ಟೇ ಅಂತಾರಾಷ್ಟ್ರೀಯ ಪಂದ್ಯಾವಳಿ. ಅಂತಾರಾಷ್ಟ್ರೀಯ ಸೈಕ್ಲಿಂಗ್ ಸಂಸ್ಥೆಯಿಂದ ಅಂಗೀಕೃತವಾಗಿದ್ದರೂ, ಈ ಪಂದ್ಯಾವಳಿಗೆ ಯಾವುದೇ ಪ್ರಾಯೋಜಕತ್ವವಿಲ್ಲ. ಯಾವ ಮಾಧ್ಯಮಗಳೂ ಈ ಸ್ಪರ್ಧೆಗೆ ಕವರೇಜ್ ಕೊಡುವುದಿಲ್ಲ. ಅಷ್ಟೇ ಏಕೆ, ಸಹಜವಾಗಿ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಕಾಣುವ ಒಂದು ರೀತಿಯ ಮೆರುಗು ಈ ಪಂದ್ಯಾವಳಿಯಲ್ಲಿ ಕಾಣಸಿಗುವುದಿಲ್ಲ. ಹಾಗಂತ, ಯಾರೂ ಇಲ್ಲಿ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ.
ಸೈಕಲ್ ಚಕ್ರದ ಗುರುತು...
ಎರಿಟ್ರಿಯಾ ದೇಶ ಮೊದಲು ಯೂರೋಪಿಯನ್ನರ ಆಳ್ವಿಕೆಯಲ್ಲಿತ್ತು. 1910ರಲ್ಲಿ ಅಲ್ಲಿ ನೆಲೆಯಾಗಿದ್ದ ಯೂರೋಪಿಯನ್ನರು ಎರಿಟ್ರಿಯಾ ದೇಶಕ್ಕೆ ಸೈಕಲ್ ತಂದರು. 1946ರಲ್ಲಿ ಆಫ್ರಿಕಾದಲ್ಲಿ ನಡೆದ ಮೊದಲ ಸೈಕ್ಲಿಂಗ್ ಸ್ಪರ್ಧೆಯೇ ಈ ಸೀಮೆಯಲ್ಲಿ ನಡೆದ ಮೊಟ್ಟ ಮೊದಲ ಸೈಕ್ಲಿಂಗ್ ಪಂದ್ಯಾವಳಿ. ಅಲ್ಲಿಂದ ನಿಧಾನವಾಗಿ, ಈ ಕ್ರೀಡೆ, ಎರಿಟ್ರಿಯಾ ದೇಶಕ್ಕೂ ಸಾಗಿಬಂತು.
ದಾಖಲೆ...
ಎರಿಟ್ರಿಯಾ ದೇಶದ ಜನಸಂಖ್ಯೆ 4.8 ಮಿಲಿಯನ್. ಅಲ್ಲಿರುವ ಸೈಕಲ್ಗಳ ಸಂಖ್ಯೆ 5 ಲಕ್ಷ. ಪ್ರತಿಯೊಂದು ಪಂದ್ಯಾವಳಿ ನಡೆದಾಗ ಈ ದೇಶದ ಜನಸಂಖ್ಯೆಯ ಮೂರನೇ ಎರಡರಷ್ಟು ಜನ ನೋಡಲು ಜಮಾಯಿಸುತ್ತಾರೆ. ಈ ದೇಶದ ಜನಸಂಖ್ಯೆಗೆ ಹೋಲಿಸಿದರೆ, ಇಷ್ಟು ಪ್ರಮಾಣದ ಜನರು ಈ ಪಂದ್ಯಾವಳಿ ವೀಕ್ಷಿಸಲು ಬರುವುದು ಒಂದು ಅಂತಾರಾಷ್ಟ್ರೀಯ ಮಟ್ಟದ ದಾಖಲೆಯಾಗಿದೆ.
ಬಾಯಿಮಾತಲ್ಲೇ ಸಾಧನೆ
ಇಲ್ಲಿನ ಸ್ಥಳೀಯ ಸೈಕ್ಲಿಸ್ಟ್ಗಳು ಜಾಗತಿಕ ಮಟ್ಟದಲ್ಲೂ ಮಿಂಚಿದ ಸಾಕಷ್ಟು ಉದಾಹರಣೆಗಳಿವೆ. 1936ರಲ್ಲಿ ಇಟಲಿಯಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಇಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬ ಭಾಗವಹಿಸುವ ಅರ್ಹತೆ ಪಡೆದಿದ್ದ. 1942ರಲ್ಲಿ ಇದೇ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎರಿಟ್ರಿಯಾ ದೇಶದ ಪ್ರಜೆಯೊಬ್ಬ ಪದಕವನ್ನೂ ಗೆದ್ದಿದ್ದ. ಇಷ್ಟೆಲ್ಲವನ್ನೂ ಇಲ್ಲಿಯ ಜನರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರಾದರೂ, ಅವುಗಳ ಬಗ್ಗೆ ಯಾವುದೇ ದಾಖಲೆಯನ್ನೂ ಈ ಜನ ಇಟ್ಟಿಲ್ಲ. ಹಾಗೆ, ದೇಶದ ಕ್ರೀಡಾಳುಗಳ ಬಗ್ಗೆ ದಾಖಲೆ ಲಿಖಿತ ದಾಖಲೆ ಇಟ್ಟುಕೊಳ್ಳಬೇಕು ಎಂಬುದೂ ಅವರಿಗೆ ಈ ಹಿಂದೆ ಗೊತ್ತಿರಲಿಲ್ಲ ಎಂದೆನಿಸುತ್ತದೆ. ಹಾಗಾಗಿ, ಹಿಂದಿನ ಕ್ರೀಡಾಳುಗಳ ಸಾಧನೆಗಳು ಬಾಯಿಂದ ಬಾಯಿಗೆ, ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿತವಾಗಿದೆ. ಆದರೆ, ಹಾಗೆ ವರ್ಗಾಯಿಸುವಾಗ ಸಾಧನೆ ಮಾಡಿದ ಕ್ರೀಡಾಳುಗಳು, ಸಾಧನೆಯ ರೀತಿ ಮುಂತಾದ ದಾಖಲೆಗಳು ಮಾಯವಾಗಿವೆ!
ಹಾಗೇನಾದರೂ, ಇವರ ಬಗ್ಗೆ ಇಂಥಾ ಲಿಖಿತ ದಾಖಲೆಗಳು ಇವೆಯೆಂದಾದಲ್ಲಿ ಅದು 1950ರಿಂದ ಈಚೆಗಷ್ಟೇ ಲಭ್ಯ. ಎರಿಟ್ರಿಯಾದ ಸೈಕ್ಲಿಸ್ಟ್ಗಳ ಸಾಧನೆಯನ್ನು ಪರಿಗಣಿಸಿದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ, ಈ ದೇಶದ ಆಯ್ದ ಸೈಕ್ಲಿಸ್ಟ್ಗಳಿಗೆ ಒಲಿಂಪಿಕ್ಸ್ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅನುಮತಿ ನೀಡಿತು.
1952ರಲ್ಲಿ, ಅಮೆರಿಕ ಸಂಸ್ಥಾನವು ಎರಿಟ್ರಿಯಾ ಹಾಗೂ ಅದರ ದಕ್ಷಿಣ ದೇಶವಾದ ಇಥಿಯೋಪಿಯಾ ದೇಶಗಳ ಸೈಕ್ಲಿಸ್ಟ್ಗಳನ್ನು ಒಟ್ಟಾರೆಯಾಗಿ ಪರಿಗಣಿಸಿ, ತನ್ನ ದೇಶದಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅನುಕೂಲ ಕಲ್ಪಿಸಿತು.
1961ರಲ್ಲಿ ಎರಿಟ್ರಿಯಾ ದೇಶ ಸ್ವತಂತ್ರ್ಯ ಗಳಿಸಿದ ಮೇಲೆ ಇಲ್ಲಿ ಸೈಕ್ಲಿಂಗ್ ಮತ್ತಷ್ಟು ಭದ್ರವಾಗಿ ತಳವೂರಿತು. ಜಗತ್ತಿನಲ್ಲಿ ಸಾಕಷ್ಟು ಬಡದೇಶಗಳಿವೆ. ಅಲ್ಲಿ ನಡೆಯುವ ಕ್ರೀಡೆಗಳು, ಜಗತ್ತಿನ ಗಮನ ಸೆಳೆಯುವುದೇ ಇಲ್ಲ. ಏಕೆಂದರೆ, ನಾವೇ ಅವುಗಳ ಕಡೆಗೆ ತಿರುಗಿಯೂ ನೋಡುವುದಿಲ್ಲ. ಅಭಿವೃದ್ಧಿ ಹೊಂದಿದ ಅಥವಾ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಕ್ರೀಡೆಗಳು ಮಾತ್ರ ತಮ್ಮ ಥಳುಕು, ಬಳುಕುಗಳಿಂದ ಎಲ್ಲರ ಗಮನ ಸೆಳೆಯುತ್ತವೆ. ಆದರೆ, ಕಡುಬಡ ರಾಷ್ಟ್ರಗಳಲ್ಲಿನ ಕ್ರೀಡೆ, ಅಲ್ಲಿಯ ಜನರ ಕ್ರೀಡೋತ್ಸಾಹ ಮಾತ್ರ ಯಾವುದೇ ಡಾಂಭಿಕತೆಯಿಲ್ಲದೇ ಎಲೆಮರೆ ಕಾಯಿಯಂತೆ ನಡೆಯುತ್ತಿರುತ್ತವೆ. ಅಂಥವುಗಳಲ್ಲಿ ಒಂದು ಎರಿಟ್ರಿಯಾದ ಸೈಕ್ಲಿಂಗ್ ಪಂದ್ಯಾವಳಿಗಳು.
- ಚೇತನ್ ಓ.ಆರ್.