ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸರಣಿ ಗೆದ್ದ ವೆಸ್ಟ್ ಇಂಡೀಸ್

Parashurama
Updated On : 28 Feb 2013, 1:03 am

ಸೇಂಟ್ ಜಾರ್ಜ್: ಎಡಗೈ ಬ್ಯಾಟ್ಸ್‌ಮನ್ ಡರೇನ್ ಬ್ರಾವೋ ಅವರ  ಅಜೇಯ 72 ರನ್‌ಗಳ ನೆರವಿನಿಂದಾಗಿ, ವೆಸ್ಟ್ ಇಂಡೀಸ್ ತಂಡ, ಮಂಗಳವಾರ ನಡೆದ ಜಿಂಬಾಬ್ವೆ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಂಪಾದಿಸಿತು.
ಮೊದಲು ಬ್ಯಾಟಿಂಗ್‌ಗೆ ಇಳಿದ ಜಿಂಬಾಬ್ವೆ ತಂಡ, ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್, 46.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿ, ಪಂದ್ಯದಲ್ಲಿ ಜಯ ಸಾಧಿಸಿತು.
ಈ ಜಯದಿಂದಾಗಿ, ವೆಸ್ಟ್ ಇಂಡೀಸ್ ತಂಡ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ.
ಟಾಸ್ ಗೆದ್ದಿದ್ದ ಜಿಂಬಾಬ್ವೆ, ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕರಾದ ಮವೋಯೋ ಅವರು ಬೇಗನೇ ವಿಕೆಟ್ ಚೆಲ್ಲಿದರೂ, ಮತ್ತೊಬ್ಬ ಆರಂಭಿಕ ಸಿಬಂದಾ ಅವರ 41 ರನ್‌ಗಳ ಸಹಾಯದಿಂದ ಜಿಂಬಾಬ್ವೆ ಉತ್ತಮ ಮೊತ್ತದತ್ತ ಹೆಜ್ಜೆ ಇಟ್ಟಿತು. ಮವೋಯೋ ಅವರ ನಂತರ ಕ್ರೀಸ್‌ಗೆ ಇಳಿದಿದ್ದ ಮೂರನೇ ಕ್ರಮಾಂಕದ ಮಸಕಾಡ್ಜಾ ಬೇಗನೇ ವಿಕೆಟ್ ಚೆಲ್ಲಿದರು. ಆದರೂ, ಧೃತಿಗೆಡದೇ ಬ್ಯಾಟಿಂಗ್ ಮುಂದುವರೆಸಿದ ಸಿಬಂದಾ ಉತ್ತಮ ಪ್ರದರ್ಶನ ನೀಡಿದರು. ಅವರಿಗೆ ಈ ಸಂದರ್ಭದಲ್ಲಿ ಉತ್ತಮ ಸಾಥ್ ನೀಡಿದ್ದೆಂದರೆ, ನಾಲ್ಕನೇ ಕ್ರಮಾಂಕದ ಟೇಲರ್.
ಈ ಜೋಡಿ, 3ನೇ ವಿಕೆಟ್‌ಗೆ 55 ರನ್ ಸೇರಿಸಿತು. ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಮಸಕಾಡ್ಜಾ ಅವರು ವಿಕೆಟ್ ಒಪ್ಪಿಸಿ ಹೊರನಡೆದ ನಂತರ, ಕ್ರೀಸ್‌ನಲ್ಲಿದ್ದ ಸಿಬಂದಾ ಅವರಿಗೆ ಜೋಡಿಯಾಗಿದ್ದು ನಾಯಕ ಟೇಲರ್. ಅವರ ಹಾಗೂ ಸಿಬಂದಾ ಜೊತೆಯಾಟದಲ್ಲಿ 5ನೇ ವಿಕೆಟ್‌ಗೆ ಕೇವಲ 19 ರನ್ ಹರಿದುಬಂದವು. 21ನೇ ಓವರ್‌ನಲ್ಲಿ ಸಿಬಂದಾ ವಿಕೆಟ್ ಒಪ್ಪಿಸಿದರೆ, 24ನೇ ಓವರ್‌ನಲ್ಲಿ ಟೇಲರ್ ಅವರು ವಿಕೆಟ್ ಒಪ್ಪಿಸಿದರು.
ಇದಾದ ಮೇಲೆ ಜಿಂಬಾಬ್ವೆ ಪರವಾಗಿ ಉತ್ತಮ ಜೊತೆಯಾಟ ಮೂಡಿ ಬಂದದ್ದು, ವಾಲರ್ ಹಾಗೂ ಚಕಾಬ್ದಾ ಅವರಿಂದ. ಈ ಜೋಡಿ, 5ನೇ ವಿಕೆಟ್‌ಗೆ 24 ರನ್ ಸೇರಿಸಿತು. ಇವರ ನಂತರ, 9ನೇ ವಿಕೆಟ್‌ಗೆ 41 ರನ್ ಸೇರಿಸಿದ ಜಾರ್ವಿಸ್ ಹಾಗೂ ಚಿಬಂಧಾ ಜೋಡಿ ಉತ್ತಮ  ಪ್ರದರ್ಶನವನ್ನು ನೀಡಿತು. ಇವರೆಲ್ಲರ ಉಪಯುಕ್ತ ರನ್ ಕಾಣಿಕೆಯಿಂದ ಜಿಂಬಾಬ್ವೆ, 50 ಓವರ್‌ಗಳಲ್ಲಿ 211 ರನ್‌ಗಳ ಸಾಮಾನ್ಯ ಮೊತ್ತ ಪೇರಿಸಿತು.
ವಿಂಡೀಸ್ ದಿಟ್ಟ ಉತ್ತರ: ಜಿಂಬಾಬ್ವೆ ಪೇರಿಸಿದ್ದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್‌ಗೆ ಆರಂಭಿಕರಾದ ಪೊವೆಲ್ ಹಾಗೂ ರಾಮ್‌ನರೇಶ್ ಸರವಣ್ ಅವರು ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ, 46 ರನ್ ಪೇರಿಸಿತು. 12ನೇ ಓವರ್‌ನಲ್ಲಿ ಸರವಣ್ ಅವರು ಔಟಾದರು. ಆನಂತರ, ಬಂದ ಡರೇನ್ ಬ್ರಾವೋ ಅವರು, ಇನಿಂಗ್ಸ್‌ಗೆ ಮತ್ತಷ್ಟು ಶಕ್ತಿ ತುಂಬಿದದರು.
ಬ್ರಾವೋ ಹಾಗೂ ಪೊವೆಲ್ ಜೋಡಿ 2ನೇ ವಿಕೆಟ್‌ಗೆ 37 ರನ್ ಸೇರಿಸಿತು. 22ನೇ ಓವರ್‌ನಲ್ಲಿ ಪೊವೆಲ್ ಔಟಾದ ಮೇಲೆ ಬಂದದೇವನಾರಾಯಣ್ ಅವರು, ಬ್ರಾವೋ ಜೊತೆ ಸೇರಿ 3ನೇ ವಿಕೆಟ್‌ಗೆ 37 ರನ್ ಸೇರಿಸಿದರು.
ಆನಂತರ, 31ನೇ ಓವರ್‌ನಲ್ಲಿ ದೇವ್ ನಾರಾಯಣ್ ಅವರ ವಿಕೆಟ್ ಉರುಳಿತು. ಅವರ ನಂತರ ಕ್ರೀಸ್‌ಗೆ ಬಂದಿದ್ದ  ಪೊಲಾರ್ಡ್ ಒಂದೂ ರನ್ ಗಳಿಸದೇ ರನೌಟ್ ಆಗಿ ಹೊರನಡೆದರು. ಆಗ, ಕ್ರೀಸ್‌ನಲ್ಲಿದ್ದ ಡರೇನ್ ಬ್ರಾವೋ ಅವರಿಗೆ ಜೊತೆಯಾಗಿದ್ದು ಅವರ ಸಹೋದರ ಡ್ವೈನ್ ಬ್ರಾವೋ. ಈ ಜೋಡಿ, 5ನೇ ವಿಕೆಟ್‌ಗೆ 46 ರನ್ ಸೇರಿಸಿತು.
39ನೇ ಓವರ್‌ನಲ್ಲಿ ಡ್ವೈನ್ ಬ್ರಾವೋ ಔಟಾದರು. ಆನಂತರ, ಕ್ರೀಸ್‌ಗೆ ಬಂದ ರಾಮ್‌ದಿನ್ ಅವರು, ಡರೇನ್ ಬ್ರಾವೋ ಜೊತೆ ಸೇರಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಇನಿಂಗ್ಸ್‌ನ ಕೊನೆಯವರೆಗೂ ಅಜೇಯರಾಗಿ ಉಳಿದು, ವೆಸ್ಟ್ ಇಂಡೀಸ್ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ ಡರೇನ್ ಬ್ರಾವೋ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರಲ್ಲದೇ, ಸರಣಿ ಶ್ರೇಷ್ಠ ಗೌರವವನ್ನೂ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments