ಕ್ರೀಡೆ

ಕಾಂಗರೂ ನಾಡಲ್ಲಿ ಕನ್ನಡಿಗನ ಕರಾಟೆ ಕಲರವ

ಪುಟ್ಟ ಪೊರನೊಬ್ಬನಿಗೆ ಪಕ್ಕದ ಬಿಲ್ಡಿಂಗ್‌ನಲ್ಲಿ ನಡೆಯುತ್ತಿದ್ದ ಕರಾಟೆ ಅಭ್ಯಾಸ ನೋಡಿ, ತಾನು ಕಲಿಯಬೇಕು ಎಂಬ ಹಂಬಲ. ಆದರೆ, ದೊಡ್ಡವರ ಹತ್ತಿರ ಹೋಗಿ ಅದನ್ನು ವ್ಯಕ್ತಪಡಿಸುವ ಧೈರ್ಯವಿಲ್ಲ. ಹಾಗಿದ್ದರೂ, ಯಾರಿಗೂ ಕಾಣದಂತೆ ಕರಾಟೆ ಪಟುಗಳಂತೆ ಅಣುಕು ಪ್ರದರ್ಶನ ಮಾತ್ರ ನಿರಂತರ. ಹಾಗೆ ಈತ ಮಾಡುತ್ತಿದ್ದ ಅಣುಕು ಪ್ರದರ್ಶನ ಕರಾಟೆಪಟುಗಳ ಕಣ್ಣಿಗೊಮ್ಮೆ ಬಿತ್ತು ನೋಡಿ. 'ಏನೋ ಅದು ಬಾ ಇಲ್ಲಿ' ಎಂದು ಗದರಿಸಿ ಕರೆದೇ ಬಿಟ್ಟರು. ನಡುಗುತ್ತಲೇ ಹೆಜ್ಜೆ ಹಾಕಿದ ಬಾಲಕನಿಗೆ ಧೈರ್ಯ ತುಂಬಿದ ಕರಾಟೆ ಪಟುಗಳು ಆತನಲ್ಲಿರುವ ಹಂಬಲಕ್ಕೆ ತಕ್ಕ ಮಟ್ಟಿಗೆ ಮಾನಸಿಕ ಬೆಂಬಲ ನೀಡಿ, ಅಭ್ಯಾಸಕ್ಕೆ ಬರಲು ಆಹ್ವಾನ ನೀಡಿದರು. ಅದರ ಫಲವೇ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಕರಾಟೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಸೇರಿದಂತೆ ಮೂರು ಪದಕಗಳನ್ನು ಗೆದ್ದು, ಕಾಂಗರೂ ನಾಡಿನಲ್ಲಿ ಕನ್ನಡದ ಕಲರವ ಹರಿಸಿದ್ದಾರೆ ಬೆಂಗಳೂರಿನ ಡಾಕ್ಟರ್ ಪ್ರಶಾಂತ್ ಕುಮಾರ್.
ಕನಸಲ್ಲಿ ನೆನೆಸಿಕೊಂಡಿರಲಿಲ್ಲ
ವ್ಯಕ್ತಿಯೊಬ್ಬನಲ್ಲಿ ಏನೇನು ಕಲಿಯುವ ಹಂಬಲವಿರುತ್ತದೆಯೋ ಯಾರಿಗೆ ಗೊತ್ತು. ಇದಕ್ಕೆ ಡಾಕ್ಟರ್ ಪ್ರಶಾಂತ್ ಅವರೇ ಒಂದು ನಿದರ್ಶನ. ವೃತ್ತಿಯಲ್ಲಿ ವೈದ್ಯರಾಗಿದ್ದರೂ ಕರಾಟೆಯಲ್ಲಿ ವೃತ್ತಿ ಮೀರಿದ ಆಸಕ್ತಿ. ಜೀವನದಲ್ಲಿ ಆಕಸ್ಮಿಕವಾಗಿ ಕರಾಟೆ ಕಲಿಯಲು ಸಿಕ್ಕ ಅವಕಾಶದಿಂದ ಪ್ರಶಾಂತ್, ಇಂದು ಕನಸಿನಲ್ಲಿ ನೆನಸಿಕೊಳ್ಳದ ವಿಶ್ವ ಕರಾಟೆ ವಿಶ್ವಚಾಂಪಿಯನ್. ಹಾಗಂತಾ ಅವರೇ ಹೇಳುತ್ತಾರೆ. 'ನಾನು ನನ್ನ 13ನೇ ವಯಸ್ಸಿನಲ್ಲೇ ಕರಾಟೆ ಅಭ್ಯಾಸ ಮಾಡಲು ಆರಂಭಿಸಿದ್ದೇನೆ. ಆದರೆ, 46ನೇ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್‌ಷಿಪ್ ಗೆಲ್ಲುತ್ತೇನೆ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ಆದರೆ, ಯಾವುದಾದರೊಂದು ಪದಕ ಗೆಲ್ಲುವ ವಿಶ್ವಾಸದಿಂದ ನಾವು ಚಾಂಪಿಯನ್‌ಷಿಪ್‌ಗೆ ತೆರಳಿದೆವು. ಆದರೆ, ಅಲ್ಲಿ ನಾವು ಚಿನ್ನದ ಪದಕ ಗೆದ್ದಿದ್ದು ಅಚ್ಚರಿ ಮೂಡಿಸಿತು' ಎನ್ನುತ್ತಾರೆ ಪ್ರಶಾಂತ್.
ವೃತ್ತಿಯಲ್ಲಿ ವೈದ್ಯ
ವೃತ್ತಿಯಲ್ಲಿ ವೈದ್ಯರಾಗಿರುವ ಪ್ರಶಾಂತ್ ಕುಮಾರ್ ಅವರಿಗೆ ಕರಾಟೆ ಅಭ್ಯಾಸ ಮಾಡಲು ಸಮಯ ಸಿಕ್ಕುವುದೇ ಕಡಿಮೆ. ಆದರೆ, ಸಿಕ್ಕ ಅಲ್ಪಸ್ವಲ್ಪ ಬಿಡುವಿನ ಸಮಯವನ್ನೆಲ್ಲಾ ಅವರು ಕರಾಟೆಯಲ್ಲಿ ಹೊಸದನ್ನು ಕಲಿಯಲೆಂದೇ ಉಪಯೋಗಿಸುತ್ತಾರಂತೆ. ಜತೆಗೆ ವರ್ಷದಲ್ಲಿ ತಮಗೆ ಸಿಗುವ ರಜೆ ದಿನಗಳಲ್ಲಿ ಜಪಾನ್‌ಗೆ ತೆರಳಿ ಅಲ್ಲಿ ಸಹ ಕರಾಟೆಯಲ್ಲಿನ ಹೊಸ ಹೊಸ ವಿಧಾನಗಳನ್ನು ಕಲಿಯುತ್ತಾರಂತೆ ಪ್ರಶಾಂತ್.
ಸದ್ಯಕ್ಕೆ ಆಸೀಸ್‌ನಲ್ಲೇ ನೆಲೆ
ಹತ್ತು ವರ್ಷಗಳ ಹಿಂದೆ ವೈದ್ಯ ವೃತ್ತಿಯನ್ನು ಅರಸಿ ಆಸ್ಟ್ರೇಲಿಯಾಕ್ಕೆ ತೆರಳಿದ ಪ್ರಶಾಂತ್ ಅಲ್ಲಿಯ ಪೌರತ್ವವನ್ನೇ ಹೊಂದಿದ್ದಾರೆ. ಹೀಗಾಗಿ ಕರಾಟೆ ಸ್ಪರ್ಧೆಗಳಲ್ಲಿ ಅವರು ಆಸ್ಟ್ರೇಲಿಯಾವನ್ನೇ ಪ್ರತಿನಿಧಿಸುತ್ತಾರೆ. ಭಾರತಕ್ಕೆ ಬಂದು ಇಲ್ಲಿಯೇ ನೆಲೆಸಿ ಇತರರಿಗೂ ಕರಾಟೆಯನ್ನು ಕಲಿಸಬೇಕು ಎಂಬ ಆಸೆ ಇದೆಯಂತೆ. ಆದರೆ, ಈಗಾಗಲೇ ಇಬ್ಬರು ಮಕ್ಕಳ ಓದು ಕಾಲೇಜು ಹಂತ ತಲುಪಿರುವುದರಿಂದ ಸದ್ಯಕ್ಕೆ ಇದು ಕೊಂಚ ಕಷ್ಟ. ಆದರೆ, ಭವಿಷ್ಯದಲ್ಲಿ ಭಾರತವೇ ನನ್ನ ಮನೆ. ಇಲ್ಲಿಯೇ ಬಂದು ನೆಲೆಸಿ ನನ್ನಲ್ಲಿರುವ ಕರಾಟೆ ಕಲೆಯನ್ನು ಇತರರಿಗೆ ಧಾರೆ ಎರೆಯುತ್ತೇನೆ ಎನ್ನುತ್ತಾರೆ ಪ್ರಶಾಂತ್ ಕುಮಾರ್.
ಕರಾಟೆ ನಿನ್ನ ಮೊದಲ ಹೆಂಡತಿ
ಪ್ರಶಾಂತ್ ಕುಮಾರ್ ಅವರಲ್ಲಿ ಅಡಗಿರುವ ಕರಾಟೆ ಆಸಕ್ತಿಯಿಂದ ಮನೆಯಲ್ಲಿ ಆಗಾಗ ಮಡದಿಯೊಂದಿಗೆ ಮುನಿಸುಂಟಾಗುವುದು ಸಹಜವಂತೆ. ಹಾಗೆ ಮುನಿಸಿಕೊಂಡಾಗ ಅವರ ಪತ್ನಿ 'ನಿಮಗೆ ಕರಾಟೆ ಮೊದಲ ಹೆಂಡತಿ' ಎಂದು ಮೂದಲಿಸುತ್ತಾರಂತೆ. ಆದರೆ, ಪ್ರಶಾಂತ್ ಕರಾಟೆ ಉಡುಪು ತೊಟ್ಟರೆಂದರೆ, ಅವರ ಬೆಂಬಲಕ್ಕೆ ನಿಲ್ಲುತ್ತಾರಂತೆ. ಅಲ್ಲದೆ ವಿಶ್ವಚಾಂಪಿಯನ್‌ಷಿಪ್ ಗೆದ್ದಾಗ ಪತ್ನಿ ಸೇರಿದಂತೆ ಕುಟುಂಬದ ಸದಸ್ಯರೆಲ್ಲ ಸಂಭ್ರಮಪಟ್ಟಿದ್ದಾರಂತೆ.
ಭಾರತ-ಆಸೀಸ್‌ಗೆ ವ್ಯತ್ಯಾಸ
'ಭಾರತದಲ್ಲೂ ಉನ್ನತಮಟ್ಟದ ಕರಾಟೆಪಟುಗಳಿದ್ದಾರೆ. ಆದರೆ, ಇಲ್ಲಿ ಒಂದು ಹಂತ ತಲುಪಿದ ತಕ್ಷಣ ಕಲಿಯುವುದನ್ನು ನಿಲ್ಲಿಸಿಬಿಡುತ್ತಾರೆ. ಅಲ್ಲದೆ ಇಲ್ಲಿಗೇ ಕಲಿಯುವುದು ಮುಗಿಯಿತು ಎಂಬ ಭಾವನೆ ಹೆಚ್ಚಿನವರನ್ನು ಆವರಿಸಿಬಿಡುತ್ತದೆ. ಆದರೆ, ಆಸ್ಟ್ರೇಲಿಯಾದಲ್ಲಿ ಹಾಗಲ್ಲ. ಅಲ್ಲಿ ಎಷ್ಟೇ ಅನುಭವಿಯಾಗಿದ್ದರೂ ಕಲಿಕೆ ಮಾತ್ರ ನಿರಂತರ. ಅಲ್ಲದೆ ಯಾವುದೇ ಒಂದು ವಿಷಯದಲ್ಲಿ ನಾವು ಆಳವಾಗಿ ಇಳಿದಾಗ ಮಾತ್ರ ಅದರ ಮಹತ್ವ ಗೊತ್ತಾಗುತ್ತದೆ' ಎನ್ನುತ್ತಾರೆ ಪ್ರಶಾಂತ್.
ಮೂರು ಪದಕ
ಕಳೆದ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ವಿಶ್ವ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಮಿಶ್ರ ಯಾಕೋಸೋಕು ಕುಮಿಟೆ ವಿಭಾಗದಲ್ಲಿ ಚಿನ್ನ, ಪುರುಷರ ಮಾಸ್ಟರ್ಸ್ ವೈಯಕ್ತಿಕ ಕತಾ ಮತ್ತು ಮಾಸ್ಟರ್ಸ್ ತಂಡ ಕುಮಿತೆ ವಿಭಾಗದಲ್ಲಿ ಕಂಚು ಸೇರಿದಂತೆ ಪ್ರಶಾಂತ್ ಮೂರು ಪ್ರಶಸ್ತಿ ಗೆದ್ದು ಕೊಂಡಿದ್ದಾರೆ. ಚಾಂಪಿಯನ್‌ಷಿಪ್‌ನಲ್ಲಿ 60 ರಾಷ್ಟ್ರಗಳು ಭಾಗವಹಿಸಿದ್ದವು.
ಕರಾಟೆಯಲ್ಲಿ ಏನೇನು ಕಲಿತಿದ್ದಾರೆ
ಕರಾಟೆಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿರುವ ಪ್ರಶಾಂತ್, ಸೋಟೋಕಾನ್ ಕರಾಟೆ ಡೋ ಅಂತಾರಾಷ್ಟ್ರೀಯ ಫೆಡರೇಷನ್‌ನಿಂದ ಫೋರ್ಥ್ ಡಿಗ್ರಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ. ಅದರ ನಂತರ ಅಂತಾರಾಷ್ಟ್ರೀಯ ಕರಾಟೆ ಡೋ ಗೋಜಕಾಯ್ ಅಸೋಸಿಯೇಷನ್‌ನಿಂದ ಸೆಕೆಂಡ್ ಡಿಗ್ರಿ ಬ್ಲಾಕ್ ಬೆಲ್ಟ್ ಪಡೆದುಕೊಂಡಿದ್ದಾರೆ. ಕರಾಟೆಯೊಂದಿಗೆ ಯೋಗದ ಮಾದರಿಯ ತಾಯ್ ಚಿ ಎಂಬ ಮೆಡಿಟೇಷನ್ ಮಾದರಿಯಲ್ಲಿ ಅವರು 10 ಡಿಗ್ರಿ ಬ್ಲಾಕ್ ಬೆಲ್ಟ್ ಪಡೆದುಕೊಂಡಿದ್ದಾರೆ. ಇದು ಭಾರತದ ಯೋಗದ ಮಾದರಿಯ ಸಾಧನೆಯೇ ಆಗಿದ್ದು, ಇದನ್ನು ದೈಹಿಕ ಸಾಮರ್ಥ್ಯ ಕಂಡುಕೊಳ್ಳಲು ಯಾರು ಬೇಕಾದರೂ ಕಲಿಬಹುದಾಗಿದೆ. ಇದರಲ್ಲಿ ಹಲವಾರು ಮಾದರಿಯ ಶೈಲಿಗಳಿದ್ದು, ಯಾಂಗ್ ಮತ್ತು ಚೆನ್ ಎಂಬ ಎರಡು ಶೈಲಿಗಳಲ್ಲಿ ಪಳಗಿದ್ದೇನೆ ಎನ್ನುತ್ತಾರೆ ಪ್ರಶಾಂತ್.

-ಮಲ್ಲಿಕಾರ್ಜುನ ಕರಿಯಪ್ಪನವರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ