ಕ್ರೀಡೆ

ಸರಣಿ ಗೆಲ್ಲುವ ತವಕದಲ್ಲಿ ಟೀಂ ಇಂಡಿಯಾ

ಮೊಹಾಲಿ: ಒಂದರ ಹಿಂದೊಂದರಂತೆ ಕಳೆದೆರಡು ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಸದ್ಯಕ್ಕೆ ಉತ್ಸಾಹದ ಬುಗ್ಗೆಯಾಗಿರುವ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸರಣಿಯ ನಾಲ್ಕನೇ ಪಂದ್ಯವನ್ನಾಡಲಿದೆ.
ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಸೋತರೂ, ನಂತರದ ಪಂದ್ಯಗಳಲ್ಲಿ ಗೆಲುವಿನ ಹೊಸ ದಾರಿಯನ್ನು ಭಾರತ ತಂಡ ಅನ್ವೇಷಣೆ ಮಾಡಿಕೊಂಡಿದೆ. ಅಲ್ಲದೇ, ಸರಣಿಯಲ್ಲಿ ಇದುವರೆಗೂ 2-1ರ ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದೆ. ದ್ವಿತೀಯ ಹಾಗೂ ತೃತೀಯ ಏಕದಿನ ಪಂದ್ಯಗಳಲ್ಲಿನ ಗೆಲುವುಗಳಿಂದ ಹೊಸತೊಂದು ಉನ್ಮಾದದ ಅಲೆಯಲ್ಲಿ ತೇಲಾಡುತ್ತಿರುವ ಭಾರತ ತಂಡ, ಇಲ್ಲಿನ ಪಿಸಿಎ ಕ್ರೀಡಾಂಗಣದಲ್ಲಿ ಜಯ ಸಾಧಿಸಿ, ಸರಣಿ ಗೆದ್ದು ಬೀಗುವುದನ್ನು ತಂಡದ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. ದ್ವಿತೀಯ ಏಕದಿನ ನಡೆದ ಕೊಚ್ಚಿ ಹಾಗೂ ಮೂರನೇ ಏಕದಿನ ಪಂದ್ಯ ನಡೆದ ರಾಂಚಿಯಲ್ಲಿ ಭಾರತ ತಂಡ ನೀಡಿದ ಪ್ರದರ್ಶನ ಇಲ್ಲಿಯೂ ಮುಂದುವರೆದರೆ, ಧೋನಿ ಪಡೆಗೆ ಗೆಲುವು ಕಷ್ಟವಾಗದು.
ಭಾರತ ತಂಡದಲ್ಲಿರುವ ಯುವ ಬೌಲರ್‌ಗಳು ಉತ್ತಮ ಪ್ರದರ್ಶನ ತೋರುತ್ತಿರುವುದು ತಂಡಕ್ಕೆ ವರದಾನವಾಗಿದೆ. ಕಳೆದೆರಡೂ ಪಂದ್ಯಗಳಲ್ಲಿ ಭಾರತ ತಂಡ ದೊಡ್ಡ ಗೆಲುವನ್ನು ಪಡೆಯುವಲ್ಲಿ ಯುವ ಬೌಲರ್‌ಗಳೂ ಉದಾತ್ತ ನೆರವನ್ನಿತ್ತಿದ್ದಾರೆ.
ಆರಂಭಿಕರ ಸಮಸ್ಯೆ: ಇಷ್ಟೆಲ್ಲಾ ಉತ್ಸಾಹದಿಂದ ಭಾರತ ತಂಡ ತೇಲಾಡುತ್ತಿದ್ದರೂ ತಂಡದಲ್ಲಿನ ಕೆಲ ನ್ಯೂನತೆಗಳು ಧೋನಿಗೆ ಕೊಂಚ ತಲೆನೋವಾಗಿ ಕಾಡಿರಲೂಬಹುದು. ಅವುಗಳಲ್ಲಿ ಮುಖ್ಯವಾಗಿ ಇತ್ತೀಚಿನ ಪಂದ್ಯಗಳಲ್ಲಿ ಭಾರತದ ಇನಿಂಗ್ಸ್ ಭರ್ಜರಿ ಆರಂಭವನ್ನು ಪಡೆಯದೇ ಇರುವುದು.
ಆರಂಭಿಕರಾದ ಗೌತಮ್ ಗಂಭೀರ್ ಹಾಗೂ ಅಜಿಂಕ್ಯ ರಹಾನೆ ಅವರಿಬ್ಬರೂ ಮಾಮೂಲಾಗಿ ಇನ್ನಿಂಗ್ಸ್ ಆರಂಭಿಸುತ್ತಿದ್ದಾರಷ್ಟೇ. ಆದರೆ, ಭರ್ಜರಿ ಆರಂಭವನ್ನು ಇಬ್ಬರೂ ನೀಡಲು ಪದೇ ಪದೇ ವಿಫಲರಾಗುತ್ತಿದ್ದಾರೆ. ಆರಂಭಿಕ ಗೌತಮ್ ಗಂಭೀರ್ '30 ಪ್ಲಸ್‌'ರನ್ ಗಳಿಸಿ ಔಟಾದರೆ, ರಹಾನೆ ತಮ್ಮ ಆಟದಲ್ಲಿನ ಮೊನಚು ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ಇದು ನಿಜಕ್ಕೂ ಭಾರತ ಯೋಚಿಸಬೇಕಾದ ವಿಚಾರ.
ಇನಿಂಗ್ಸ್ ಆರಂಭಕ್ಕೆ ಶಕ್ತಿ ತುಂಬಲು ರಹಾನೆ ಅವರನ್ನು ಕೈ ಬಿಟ್ಟು ಅವರ ಜಾಗದಲ್ಲಿ ಚೇತೇಶ್ವರ ಪೂಜಾರ ಅವರನ್ನು ಗೌತಮ್ ಅವರೊಂದಿಗೆ ಕಳಿಸುವುದು ಒಳ್ಳೆಯ ಉಪಾಯವಾದರೂ, ಅದು ಶೇ. 100ರಷ್ಟು ಸಫಲತೆ ಕಾಣುವುದು ಅನುಮಾನ. ಏಕೆಂದರೆ, ಭಾರತ ತಂಡದಲ್ಲಿದ್ದರೂ, ಏಕದಿನ ಸರಣಿಯಲ್ಲಿ ಇನ್ನೂ ಆಡುವ ಅವಕಾಶವನ್ನು ಪೂಜಾರ ಪಡೆದಿಲ್ಲ. ಹೀಗಿದ್ದ ಮೇಲೆ ಅವರನ್ನು ಏಕಾಏಕಿ ಆರಂಭಿಕರನ್ನಾಗಿ ಕಳಿಸುವುದು ಸರಿಯೆನಿಸಲಾರದು. ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆರಂಭಿಕ ಸ್ಥಾನವನ್ನು ಪಡೆಯಲು ಅವರು ಕೆಲವಾದರೂ ಪಂದ್ಯಗಳಲ್ಲಿ ಪಳಗಬೇಕಿದೆ. ಅವರ ಅನುಭವ ಒಂದು ಹದಕ್ಕೆ ಬಂದ ಮೇಲಷ್ಟೇ ಅವರನ್ನು ಆರಂಭಿಕನಾಗಿ ಆಡಿಸಬಹುದು. ಬಿಸಿಸಿಐ ಆಯ್ಕೆ ಮಂಡಳಿ ಈ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ತಲೆಕೆರೆದುಕೊಂಡಿದೆ. ಹಾಗಾಗಿ, ಪೂಜಾರ ಅವರ ಬಗ್ಗೆ ಪ್ರಯೋಗ ಮಾಡಲು ಅದು ಕೈಹಾಕಲಾರದು. ಇತ್ತೀಚೆಗೆ ಜಯ ಗಳಿಸಿರುವ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೇ ಕಣಕ್ಕಿಳಿಸುವ ಸಾಧ್ಯತೆಗಳೇ ಹೆಚ್ಚಿವೆ. ಆದರೂ, ಆರಂಭಿಕರ ಸಮಸ್ಯೆಯನ್ನು ಪರಿಹರಿಸುವುದು ಅವಶ್ಯಕ.
ಭರವಸೆಯ ರವೀಂದ್ರ: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಗಮನ ಸೆಳೆದಿರುವ ಬೌಲರ್ ರವೀಂದ್ರ ಜಡೇಜಾ, ಸದ್ಯಕ್ಕೆ ಆಯ್ಕೆ ಮಂಡಳಿಯ ಅಚ್ಚುಮೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಕೊಚ್ಚಿ ಹಾಗೂ ರಾಂಚಿಯಲ್ಲಿ ಅವರು ಶ್ಲಾಘನೀಯ ಪ್ರದರ್ಶನ ನೀಡಿರುವುದೇ ಅದಕ್ಕೆ ಕಾರಣ.
ಭಾರತ ತಂಡಕ್ಕೆ ಇಂದಿನ ಪರಿಸ್ಥಿತಿಯಲ್ಲಿ ತುರ್ತಾಗಿ ಬೇಕಿರುವ ಆಲ್ರೌಂಡರ್‌ಗಳ ಕೊರತೆಯನ್ನು ತಕ್ಕಮಟ್ಟಿಗೆ ನೀಗುವಲ್ಲಿ ರವೀಂದ್ರ ಜಡೇಜಾ ಭರವಸೆ ಮೂಡಿಸಿದ್ದಾರೆ. ಧೋನಿ ಸಹ ರವೀಂದ್ರ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಸೌರಾಷ್ಟ್ರದ ಈ ಆಟಗಾರ ತಮ್ಮ ಪ್ರದರ್ಶನವನ್ನು ಹೀಗೇ ಕಾಯ್ದುಕೊಳ್ಳಬೇಕಷ್ಟೇ.
ಧೋನಿ ಅಪಸ್ವರ: ತಂಡ ಈಗ ಗೆಲುವಿನ ಅಲೆಯಲ್ಲಿ ಬೀಗುತ್ತಿದ್ದರೂ, ಕಳೆದುಕೊಂಡಿದ್ದ ಆತ್ಮವಿಶ್ವಾಸವನ್ನು ಮರಳಿ ಪಡೆದಿದ್ದರೂ ನಾಯಕ ಧೋನಿಗೆ ಮಾತ್ರ ಹೊಸ ಏಕದಿನ ಪಂದ್ಯಗಳ ನಿಯಮದ ಹುಳವನ್ನು ತಲೆಯಲ್ಲಿ ಬಿಟ್ಟುಕೊಂಡು ಕೊರಗುತ್ತಿದ್ದಾರೆ. ಮಂಗಳವಾರ ಮಾಧ್ಯಮಗಳ ಜೊತೆಯಲ್ಲಿ ಕೊಂಚ ಹರಟಿದ ಅವರು, ಐಸಿಸಿ ಜಾರಿಗೊಳಿಸಿರುವ ಹೊಸ ಏಕದಿನ ನಿಯಮಗಳ ಕುರಿತಂತೆಅಸಮಾಧಾನ ವ್ಯಕ್ತಪಡಿಸಿದರು. ಹೊಸ ನಿಯಮಗಳಿಂದಾಗಿ ಸುರೇಶ್ ರೈನಾ ಹಾಗೂ ಯುವರಾಜ್ ಸಿಂಗ್ ಅವರನ್ನು ಅರೆಕಾಲಿಕ ಬೌಲರ್‌ಗಳನ್ನಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಅವರ ಕೊರಗಿನ ಮೂಲ ಕಾರಣವಾಗಿತ್ತು.
'ರವೀಂದ್ರ ಜಡೇಜಾ ಅವರು ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಅವರೊಬ್ಬ ಆಲ್ರೌಂಡರ್ ಬೌಲರ್ ಆದರೆ ತಂಡಕ್ಕೆ ಮತ್ತಷ್ಟು ಲಾಭವಾಗಲಿದೆ. ಆದರೆ, ಅದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಆಲ್ರೌಂಡರ್ ಬೌಲರ್ ಜಾಗಕ್ಕೆ ಇರ್ಫಾನ್ ಪಠಾಣ್ ಅವರೇ ಸೂಕ್ತ ವ್ಯಕ್ತಿ' ಎಂದು ಅವರು ತಿಳಿಸಿದರು.
ಮಿಂಚಿನ ಕೊಹ್ಲಿ: ಇತ್ತೀಚಿನ ಸರಣಿಗಳಲ್ಲಿ ಫಾರ್ಮ್ ಕಳೆದುಕೊಂಡು ಪರದಾಡುತ್ತಿದ್ದ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳಿರುವುದು ಭಾರತ ತಂಡಕ್ಕೆ ಮತ್ತೊಂದು ಸಕಾರಾತ್ಮಕ ಅಂಶ. ರಾಂಚಿ ಏಕದಿನದಲ್ಲಿ ಅಜೇಯ 77 ರನ್ ಸಿಡಿಸಿ, ಭಾರತದ ಜಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅದರ ಜೊತೆಗೇ ಧೋನಿ ಸಹ ಬಿರುಸಿನಿಂದ ಬ್ಯಾಟ್ ಬೀಸುತ್ತಿದ್ದು ಈ ಇಬ್ಬರೂ ಮತ್ತೆ ಮಿಂಚಿದರೆ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಆನೆ ಬಲ ಬಂದಂತಾಗುವುದು ಸ್ಪಷ್ಟ.
ಯುವಿ ಅಬ್ಬರಿಸಬೇಕಿದೆ: ಇನ್ನುಳಿದಂತೆ, ಮಧ್ಯಮ ಕ್ರಮಾಂಕದ ಮತ್ತೊಬ್ಬ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರು, ಚೆನ್ನಾಗಿ ಆಡುತ್ತಿದ್ದಾರಾದರೂ, ಅವರ ಮಾಮೂಲು ಸಿಡಿಲ ಮರಿಯ ಆಟ ಅವರಿಂದ ಈ ಸರಣಿಯಲ್ಲಿ ಹೊರಬಂದಿಲ್ಲ. ಮೊಹಾಲಿಯಲ್ಲಿ ಅವರೂ ಅಬ್ಬರಿಸಿದರೆ ತಂಡದ ಇನಿಂಗ್ಸ್‌ಗೆ ಅದು ಮತ್ತಷ್ಟು ಶಕ್ತಿ ತುಂಬಲಿದೆ.
ವೇಗದ ಬೌಲಿಂಗ್‌ನಲ್ಲಿ ಕೊರತೆ: ಟೀಂ ಇಂಡಿಯಾದ ವೇಗದ ಬೌಲಿಂಗ್ ವಿಭಾಗದಲ್ಲಿ ಹೊಸ ಹುಡುಗರಾದ ಭುವನೇಶ್ವರ ಕುಮಾರ್ ಹಾಗೂ ಶಮಿ ಅಹ್ಮದ್ ಇದುವರೆಗೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಈ ವಿಭಾಗದ ಏಕೈಕ ಕೊರತೆ- ಇಶಾಂತ್ ಶರ್ಮಾ. ಇತ್ತೀಚಿನ ಪಂದ್ಯಗಳಲ್ಲಿ ಅವರಿಂದ ಹೇಳಿಕೊಳ್ಳುವ ಪ್ರದರ್ಶನ ವ್ಯಕ್ತವಾಗಿಲ್ಲ. ಅಲ್ಲದೇ, ಅತಿ ಹೆಚ್ಚು ರನ್ ನೀಡುವ ಮೂಲಕ 'ದುಬಾರಿ ಬೌಲರ್‌' ಆಗಿ ಪರಿಣಮಿಸಿದ್ದಾರೆ.
ಅಶ್ವಿನ್ ಪರವಾಗಿಲ್ಲ: ಇನ್ನು ಆಫ್ ಸ್ಪಿನ್ನರ್ ಆದ ಅಶ್ವಿನ್ ಅವರು ರಾಂಚಿಯಲ್ಲಿ ನೀಡಿದ ಉತ್ತಮ ಪ್ರದರ್ಶನ ಅವರ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ರಾಂಚಿಯಲ್ಲಿ 6.2 ಓವರ್ ಮಾಡಿದ್ದ ಅವರು 19 ರನ್ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದ್ದರು.
ಆಂಗ್ಲರ ಸಮಸ್ಯೆ: ಇಂಗ್ಲೆಂಡ್ ತಂಡದಲ್ಲೂ ಕೆಲವು ಸಮಸ್ಯೆಗಳಿವೆ. ದ್ವಿತೀಯ ಹಾಗೂ ತೃತೀಯ ಏಕದಿನ ಪಂದ್ಯಗಳಲ್ಲಿ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ - ಎರಡೂ ವಿಭಾಗಗಳು ವೈಫಲ್ಯಕ್ಕೊಳಗಾಗಿವೆ.
ನಾಯಕ ಅಲಾಸ್ಟೇರ್ ಕುಕ್ ಅವರಿಗೆ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಾಡಿದ ಮೋಡಿಯನ್ನು ಈಗ ಮಾಡಲು ಸಾಧ್ಯವಾಗುತ್ತಿಲ್ಲ. ಅದೂ ಅಲ್ಲದೇ, ಭಾರತೀಯರ ಸ್ಪಿನ್ ಮೋಡಿಗೆ ಆಂಗ್ಲ ಬ್ಯಾಟ್ಸ್‌ಮನ್‌ಗಳು ಉತ್ತರ ನೀಡುತ್ತಿಲ್ಲ. ಇದೂ ಅವರ ತಲೆನೋವಾಗಿ ಪರಿಣಮಿಸಿದೆ. ಆದರೂ, ಕುಕ್ ಅವರು ತಮ್ಮ ತಂಡ ಭಾರತದ ವಿರುದ್ಧ ತಿರುಗಿಬೀಳುವ ಎಲ್ಲಾ ಸಾಮರ್ಥ್ಯ ಹೊಂದಿದ್ದು, ಎದುರೇಟು ನೀಡಲು ಪ್ರಯತ್ನಿಸುತ್ತದೆ ಎಂದಿದ್ದಾರೆ. ಇದೇ ನಿರೀಕ್ಷೆಯೊಂದಿಗೇ ಆ ತಂಡ ಕಣಕ್ಕಿಳಿಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video