ದುಬೈ: ಐಸಿಸಿ ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 3ನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಐಸಿಸಿ ಗುರುವಾರ ಟಿ20 ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತ ತಂಡ ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನ ಉಳಿಸಿಕೊಂಡರೆ, ಭಾರತ ತಂಡದ ಬ್ಯಾಟ್ಸ್‌ಮನ್ ವಿರಾಟ್‌ಕೊಹ್ಲಿ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ಶ್ರೀಲಂಕಾ ತಂಡ 127 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ಟಿ20 ಚಾಂಪಿಯನ್ ತಂಡವಾದ ವೆಸ್ಟ್ ಇಂಡೀಸ್ 122 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. 119 ಅಂಕಗಳನ್ನು ಪಡೆದಿರುವ ಭಾರತ ತಂಡ ತೃತಿಯ ಸ್ಥಾನದಲ್ಲಿದೆ.
ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಶೇನ್ ವಾಟ್ಸನ್ 798 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ಕೆರಿಬಿಯನ್ ಬ್ಯಾಟ್ಸ್‌ಮನ್ ಕ್ರಿಸ್ ಗೇಯ್ಲ್ 792 ಅಂಕಗಳನ್ನು ಸಂಪಾಧಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ನಂತರ ಕಿವೀಸ್ ನಾಯಕ ಮೆಕಲಂ 787 ಅಂಕಗಳೊಂದಿಗೆ ಮೂರನೇ ಹಾಗೂ ಶ್ರೀಲಂಕಾದ ಮಹೇಲಾ ಜಯವರ್ಧನೆ 759 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತದ ವಿರಾಟ್ ಕೊಹ್ಲಿ 730 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ಟಿ20 ಬೌಲರ್‌ಗಳ ಪಟ್ಟಿಯಲ್ಲಿ ಪಾಕ್‌ನ ಸೈಯದ್ ಅಜ್ಮಲ್ 756 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಬೌಲರ್ ಆರ್.ಅಶ್ವಿನ್ 618 ಅಂಕಗಳೊಂದಿಗೆ 16ನೇ ಸ್ಥಾನದಲ್ಲಿದ್ದಾರೆ.
ಆಲ್ರೌಂಡರ್ ವಿಭಾಗದಲ್ಲಿ ಆಸೀಸ್‌ನ ಶೇನ್ ವಾಟ್ಸನ್ 531 ಅಂಕಗಳೊಂದಿಗೆ ಅಗ್ರ ಸ್ಥಾನ ಕಾಯ್ದುಕೊಂಡಿದ್ದು, ಪಾಕ್‌ನ ನಾಯಕ ಮೊಹಮದ್ ಹಫೀಜ್ 377 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಭಾರತದ ಯುವರಾಜ್ ಸಿಂಗ್ 335 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಏಕದಿನದಲ್ಲಿ ನಂ.1: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಗೆದ್ದಿರುವ ಭಾರತ ತಂಡ ಏಕದಿನ ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ 120 ಅಂಕಗಳೊಂದಿಗೆ ಭಾರತ ತಂಡ ಅಗ್ರ ಸ್ಥಾನದಲ್ಲಿರೆ, ಇತರೆ ದೇಶಗಳಿಂದ ನಂ.1 ಪಟ್ಟಕ್ಕೆ ಪೈಪೋಟಿ ಇಲ್ಲದಂತಾಗಿದೆ. ಭಾರತ ವಿರುದ್ಧ ಏಕದಿನ ಸರಣಿ ಸೋತ ಇಂಗ್ಲೆಂಡ್ ತಂಡ 117 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಆಸೀಸ್ 113, ದಕ್ಷಿಣ ಆಫ್ರಿಕಾ 111 ಹಾಗೂ ಶ್ರೀಲಂಕಾ 110 ಅಂಕಗಳೊಂದಿಗೆ ಕ್ರಮವಾಗಿ ಮೂರು, ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದೆ.
ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡದ ವಿರಾಟ್ ಕೊಹ್ಲಿ 824 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ನಾಯಕ ಮಹೇಂದ್ರ ಸಿಂಗ್ ಧೋನಿ 789 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೊದಲೆರಡು ಸ್ಥಾನಗಳಲ್ಲಿ ಹರಿಣಗಳ ಬ್ಯಾಟ್ಸ್‌ಮನ್‌ಗಳಾದ ಹಷೀಂ ಆಮ್ಲಾ 901 ಹಾಗೂ ಡಿವಿಲಿಯರ್ಸ್ 852 ಅಂಕಗಳೊಂದಿಗೆ ಕ್ರಮವಾಗಿ ಒಂದು ಹಾಗೂ ಎರಡನೇ ಸ್ಥಾನದಲ್ಲಿದ್ದಾರೆ.