ಧರ್ಮಶಾಲಾ: ಐದನೇ ಮತ್ತು ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾಗವಹಿಸಲು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಗುರುವಾರ ಧರ್ಮಶಾಲಾಗೆ ಆಗಮಿಸಿದವು.
ಮೊಹಾಲಿಯಿಂದ ಚಾರ್ಟರ್ಡ್ ವಿಮಾನದ ಮೂಲಕ ಇಲ್ಲಿನ ಗಗ್ಗಲ್ ವಿಮಾನ ನಿಲ್ದಾಣಕ್ಕೆ ಆಟಗಾರರು ಮಧ್ಯಾಹ್ನ ಆಗಮಿಸಿದರು. ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳು ಮತ್ತು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟ ಬಾಲಕಿಯರು ತಂಡದ ಆಟಗಾರರನ್ನು ಬರಮಾಡಿಕೊಂಡರು.
ಇನ್ನು ಹೊಟೇಲ್ ತಲುಪಿದ ನಂತರ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಅನುರಾಗ್ ಠ್ಯಾಕೂರ್ ತಂಡಗಳನ್ನು ಸ್ವಾಗತಿಸಿದರು.
ಗುಡ್ಡಗಾಡು ಪ್ರದೇಶದಲ್ಲಿರುವ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ನಡೆಸಲಾಗುತ್ತಿದೆ. ಪಂದ್ಯವನ್ನು ಮೊದಲು ಹೊನಲು ಬೆಳಕಿನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ನಂತರ ಮಂಜಿನ ತೊಂದರೆಯನ್ನು ತಪ್ಪಿಸಲು ಬೆಳಗ್ಗೆ 9 ಗಂಟೆಯಿಂದಲೇ ಆರಂಭಿಸಲು ತೀರ್ಮಾನಿಸಲಾಗಿದೆ.
'ಗುಡ್ಡಗಾಡು ಪ್ರದೇಶದಲ್ಲಿ ಪಂದ್ಯ ನಡೆಯುವ ದಿನ ಐತಿಹಾಸಿಕ ದಿನವಾಗಲಿದೆ. ನಮ್ಮ ಮುಂದಿನ ಗುರಿ ಈ ಮೈದಾನದಲ್ಲಿ ಟೆಸ್ಟ್ ಪಂದ್ಯವನ್ನು ನಡೆಸುವುದು' ಎಂದು ಠಾಕೂರ್ ಹೇಳಿದ್ದಾರೆ.
ಪಂದದ ದಿನ ಅನಿರೀಕ್ಷಿತ ವಾತಾವರಣದ ಕುರಿತು ಆತಂಕಗೊಂಡಿರುವ ಠಾಕೂರ್ ಸ್ಥಳೀಯ ಮಂದಿರಕ್ಕೆ ಭೇಟಿ ನೀಡಿ ಪೂಜಾ ವಿಧಿವಿಧಾನ ನೆರವೇರಿಸಿದ್ದಾರೆ ಎನ್ನಲಾಗಿದೆ.
5 ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 3-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿದೆ. ಭಾರತ ತಂಡದ ಸ್ಟಾರ್ ಆಟಗಾರನಾಗಿರುವ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಗಾಯಗೊಂಡಿದ್ದು, ಈ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಗಳಿವೆ.
ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ ಹಾಗೂ ಗೌತಮ್ ಗಂಭೀರ್ ಅವರು ವಿಶ್ರಾಂತಿ ಪಡೆಯುವ ಸಾಧ್ಯತೆಗಳಿದ್ದು, ಅವರ ಸ್ಥಾನದಲ್ಲಿ ಅಮಿತ್ ಮಿಶ್ರಾ, ಚೇತೇಶ್ವರ ಪೂಜಾರ ಹಾಗೂ ಅಶೋಕ್ ದಿಂಡಾ ಆಡುವ ಸಾಧ್ಯತೆಗಳಿವೆ.
ಇನ್ನೊಂದೆಡೆ ಮಂಜಿನಿಂದ ಕೂಡಿರುವ ಧರ್ಮಶಾಲಾದಲ್ಲಿ ಇಂಗ್ಲೆಂಡ್ ಆಟಗಾರರು ಇಂಗ್ಲೆಂಡ್‌ನ ಶೀತದಂತಹ ವಾತಾವರಣದಲ್ಲಿ ಆಡುವ ಮೂಲಕ ತವರನ್ನು ನೆನಪಿಸಿಕೊಳ್ಳಲಿದ್ದಾರೆ.