ನವದೆಹಲಿ: ಗಾಯದ ಸಮಸ್ಯೆಗೆ ಗುರಿಯಾಗಿರುವ ಸಾನಿಯಾ ಮಿರ್ಜಾ ಅವರು, ಕಝಕಿಸ್ತಾನದ ಆಸ್ತಾನಾದಲ್ಲಿ ಫೆ. 6ರಲ್ಲಿ ಆರಂಭವಾಗಲಿರುವ ಫೆಡರೇಷನ್ ಕಪ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಸಾನಿಯಾ ಇತ್ತೀಚೆಗೆ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿ ಸಂದರ್ಭದಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದರು.
ಆಸ್ಟ್ರೇಲಿಯನ್ ಓಪನ್‌ನಲ್ಲಿ ಗಾಯಗೊಂಡ ಸಾನಿಯಾ ಅವರಿಗೆ ವೈದ್ಯರು ಎರಡು ವಾರಗಳ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿರುವುದರಿಂದ, ಸಾನಿಯಾ ಈ ಬಾರಿಯ ಫೆಡರೇಷನ್ ಕಪ್‌ನಲ್ಲಿ ಪಾಲ್ಗೊಳ್ಳದ್ದಿರಲು ನಿರ್ಧರಿಸಿದ್ದಾರೆ.
ಸಾನಿಯಾ ಬದಲು ಯಾರು?: ಫೆಡರೇಷನ್ ಕಪ್‌ನಿಂದ ದೂರ ಸರಿದಿರುವ ಸಾನಿಯಾ ಅವರ ಬದಲಿಗೆ ಯಾರು ಆಡಲಿದ್ದಾರೆ ಎಂಬುದರ ಬಗ್ಗೆ ಭಾರತೀಯ ಟೆನಿಸ್ ಸಂಸ್ಥೆ ವಿಚಾರ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಫೆಡರೇಷನ್ ಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮಹಿಳಾ ಆಟಗಾರರ ಪಟ್ಟಿಯಲ್ಲಿ ಕೀರಾ ಶ್ರಾಫ್, ರುತುಜಾ ಭೋಸಲೇ, ರಿಷಿಕಾ ಸುಂಕಾರಾ ಇದ್ದಾರೆ. ತಂಡದ ಜೊತೆ ಅಂಕಿತಾ ರೈನಾ, ಪ್ರೇರಣಾ ಭಾಂಬ್ರಿ ಅವರನ್ನು ಮೀಸಲು ಆಟಗಾರರನ್ನಾಗಿ ಮೊದಲೇ ಹೆಸರಿಸಲಾಗಿತ್ತು. ಈ ಮೀಸಲು ಆಟಗಾರರಲ್ಲಿ ಒಬ್ಬರು ಸಾನಿಯಾ ಬದಲು ಆಡುವ ಸಂಭವವಿದೆ.