ಧರ್ಮಶಾಲಾ: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಾಣುವುದರೊಂದಿಗೆ ಭಾರತ ತಂಡ ಇಂಗ್ಲೆಂಡ್ ವಿರುದ್ಧ ನಡೆದ 5ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ 7 ವಿಕೆಟ್ ಅಂತರದಿಂದ ಸೋಲನುಭವಿಸಿತು.
ಇಯಾನ್ ಬೆಲ್ (ಅಜೇಯ 113) ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ್ದು ಇಂಗ್ಲೆಂಡ್ ಜಯಕ್ಕೆ ಕಾರಣವಾಯಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಸರಣಿ ಸೋತಿದ್ದ ಇಂಗ್ಲೆಂಡ್, 3-2 ಅಂತರದಿಂದ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತು.
ನೆಲ ಕಚ್ಚಿ ನಿಂತ ಬೆಲ್ ವಿಕೆಟ್ ಪಡೆಯುವಲ್ಲಿ ಭಾರತದ ವಿಫಲವಾಗಿದ್ದು ಸೋಲಿಗೆ ಮತ್ತೊಂದು ಕಾರಣವಾಯಿತು. 143 ಎಸೆತಗಳನ್ನು ಎದುರಿಸಿದ ಬೆಲ್ ಮೊತ್ತದಲ್ಲಿ 1 ಸಿಕ್ಸರ್ ಮತ್ತು 13 ಬೌಂಡರಿಗಳು ಸೇರಿದ್ದವು.
ಟಾಸ್ ಗೆದ್ದರೂ ಬ್ಯಾಟಿಂಗ್ ಬಿಟ್ಟುಕೊಟ್ಟ ಪ್ರವಾಸಿ ಇಂಗ್ಲೆಂಡ್, ಅತಿಥೇಯ ತಂಡವನ್ನು 226 ರನ್‌ಗಳಿಗೆ ಕಟ್ಟಿಹಾಕಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಆಂಗ್ಲರು ಇನ್ನೂ 16 ಎಸೆತಗಳು ಬಾಕಿ ಇರುವಂತೆಯೇ ಜಯದ ದಡ ಸೇರಿದರು.
ಮೊಹಾಲಿಯಲ್ಲಿ ನಾಲ್ಕನೇ ಪಂದ್ಯ ಗೆಲ್ಲುವ ಮೂಲಕ ಸರಣಿಯಲ್ಲಿ 3-1 ಅಂತರದಿಂದ ಮುನ್ನಡೆ ಕಂಡುಕೊಂಡಿದ್ದ ಭಾರತದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು. ಇಂಗ್ಲೆಂಡ್ ಪರ ಮೊನಚಾದ ಬೌಲಿಂಗ್ ಪ್ರದರ್ಶಿಸಿದ ಟಿಮ್ ಬ್ರೆಸ್ನಾನ್ 45 ರನ್ ನೀಡಿ 4 ವಿಕೆಟ್ ಪಡೆದರು. ಸ್ಟಿವೆನ್ ಫಿನ್ ಮತ್ತು ಜೇಮ್ಸ್ ಟ್ರೆಡ್‌ವೆಲ್ ಅವರು ತಲಾ 2 ವಿಕೆಟ್ ಪಡೆದುಕೊಂಡರು. ಬೌಲಿಂಗ್‌ಗೆ ಅನುಕೂಲಕರವಾಗಿದ್ದ ಪಿಚ್‌ನಲ್ಲಿ ಟಾಸ್ ಗೆದ್ದ ನಂತರ ಇಂಗ್ಲೆಂಡ್ ಬೌಲರ್‌ಗಳ ಅವಕಾಶವನ್ನು ಉಪಯೋಗಿಸಿಕೊಂಡರು.
ಗೌತಮ್ ಗಂಭೀರ್ (24), ರೋಹಿತ್ ಶರ್ಮಾ (4), ವಿರಾಟ್ ಕೊಹ್ಲಿ (0), ಯುವರಾಜ್ ಸಿಂಗ್ (0) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (15) ಅವರು ಬೇಗನೆ ಪೆವಿಲಿಯನ್‌ಗೆ ನಿರ್ಗಮಿಸಿದರು. ಈ ಹಿನ್ನೆಲೆಯಲ್ಲಿ ಭಾರತ ಒಂದು ಹಂತದಲ್ಲಿ 79 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿ ಸಿಲುಕಿತ್ತು.
ಆದರೆ, ತಂಡ ಒತ್ತಡದಲ್ಲಿ ಸಿಲುಕಿದ ಸಂದರ್ಭದಲ್ಲೂ ಪ್ರತಿಭಾನ್ವಿತ ಬ್ಯಾಟಿಂಗ್ ಪ್ರದರ್ಶಿಸಿದ ಸುರೇಶ್ ರೈನಾ ಆಕರ್ಷಕ ಅರ್ಧ ಶತಕ ತಂಡ ಸಾಧಾರಣ ಮೊತ್ತ ಕಲೆಹಾಕಲು ನೆರವಾಯಿತು. 98 ಎಸೆತಗಳನ್ನು ಎದುರಿಸಿದ ರೈನಾ ಮೊತ್ತದಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದವು. ರವಿಂದ್ರ ಜಡೇಜಾ (39) ಮತ್ತು ಭುವನೇಶ್ವರ ಕುಮಾರ್ (31) ಕೊಂಚ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಇಂಗ್ಲೆಂಡ್ ಪರ ಆರಂಭಿಕರಾದ ಅಲಸ್ಟೇರ್ ಕುಕ್ ಮತ್ತು ಇಯಾನ್ ಬೆಲ್ ಮೊದಲ ವಿಕೆಟ್‌ಗೆ 53 ರನ್ ಪೇರಿಸುತ್ತಿದ್ದಂತೆಯೇ ಇಶಾಂತ್ ಶರ್ಮಾ ಅವರು ಕುಕ್ ಅವರನ್ನು ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್‌ಗೆ ಕಳುಹಿಸಿದರು.
ಆದರೆ, ಇದಕ್ಕೂ ಮುನ್ನವೇ ಇಶಾಂತ್ ಶರ್ಮಾ ಎಸೆತದಲ್ಲಿ ಕುಕ್ ಬ್ಯಾಟ್‌ಗೆ ತಾಗಿಕೊಂಡು ಹೋದ ಚೆಂಡನ್ನು ಧೋನಿ ಕ್ಯಾಚ್ ಪಡೆದಿದ್ದರು. ಆದರೆ, ಅಂಪೈರ್ ಸುಧೀರ್ ಅಸ್ನಾನಿ ಅವರು ಅದನ್ನು ಗ್ರಹಿಸುವಲ್ಲಿ ವಿಫಲವಾದರು. ಹೀಗಾಗಿ ಕುಕ್ ಒಂದು ಬಾರಿ ಜೀವದಾನ ಪಡೆದರು. ಆದರೆ, ಕೊನೆಗೂ ಕುಕ್ ವಿಕೆಟ್ ಪಡೆಯುವಲ್ಲಿ ಇಶಾಂತ್ ಯಶಸ್ವಿಯಾದರು.
ಸರಣಿಯಲ್ಲಿ ಇದೇ ಮೊದಲ ಬಾರಿಗೆ ಮೊನಚಾದ ಬೌಲಿಂಗ್ ಪ್ರದರ್ಶಿಸಿದ ಇಶಾಂತ್ ಮೊದಲ ಸ್ಪೆಲ್‌ನಲ್ಲಿ 5 ಓವರ್‌ಗಳಲ್ಲಿ 9 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಆದರೆ, ನಂತರ ವಿಕೆಟ್ ಕಬಳಿಸುವಲ್ಲಿ ಇಶಾಂತ್ ವಿಫಲವಾದರು. ಭವನೇಶ್ವರ ಕುಮಾರ್ ಅವರು ಕೆಲ ಬೌಂಡರಿ ನೀಡುವ ಮೂಲಕ ಹೆಚ್ಚು ರನ್ ನೀಡಿದರು. ಶಮಿ ಅಹ್ಮಮದ್ ಅಪಾಯಕಾರಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ, ತಂಡವನ್ನು ಸೋಲಿನಿಂದ ತಪ್ಪಿಸಲು ಅವರಿಂದಲೂ ಸಾಧ್ಯವಾಗಲಿಲ್ಲ.
ಸ್ಕೋರ್ ಬೋರ್ಡ್
ಭಾರತ: 226/10 (49.4 ಓವರ್)
ಗಂಭೀರ್ ಸಿ ಬೆಲ್ ಬಿ ಟ್ರೆಡ್‌ವೆಲ್ 24 (42), ರೋಹಿತ್ ಸಿ ಟ್ರೆಡ್‌ವೆಲ್ ಬಿ ಬ್ರೆಸ್ನಾನ್ 4 (9), ಕೊಹ್ಲಿ ಸಿ ಟ್ರೆಡ್‌ವೆಲ್ ಬ್ರೆಸ್ನಾನ್ 0 (1), ಯುವರಾಜ್ ಸಿ ಮಾರ್ಗನ್ ಬಿ ಫಿನ್ 0 (3), ರೈನಾ ಸಿ ಬೆಲ್ ಬಿ ವೋಕಸ್ 83 (98), ಧೋನಿ ಎಲ್‌ಬಿಡಬ್ಲ್ಯೂ ಬಿ ಫಿನ್ 15 (23), ರವಿಂದ್ರ ಜಡೇಜಾ ಸಿ ಬೆಲ್ ಬಿ ಟ್ರೆಡ್‌ವೆಲ್ 39 (65), ಅಶ್ವಿನ್ ಸಿ ಫಿನ್ ಬಿ ಪಟೇಲ್ 19 (21), ಭುವನೇಶ್ವರ ಸಿ ಫಿನ್ ಬಿ ಬ್ರೆಸ್ನಾನ್ 31 (30), ಶಮಿ ಅಹ್ಮದ್ ಸಿ ಮತ್ತು ಬಿ ಬ್ರೆಸ್ನಾನ್ 1 (6), ಇಶಾಂತ್ ಅಜೇಯ 0 (0), ಇತರೆ 11
ವಿಕೆಟ್ ಪತನ: 1-13, 2-13, 3-24, 4-49, 5-79, 6-157, 7-177, 8-211, 9-225, 10-226.
ಬೌಲಿಂಗ್: ಸ್ಟಿವೆನ್ ಫಿನ್ 10-2-28-2, ಟಿಮ್ ಬ್ರೆಸ್ನಾನ್ 9.4-1-45-4, ಕ್ರಿಸ್ ವೊಕಸ್ 9-1-45-1, ಜೇಮ್ಸ್ ಟ್ರೆಡ್‌ವೆಲ್ 10-1-25-2, ಜೊ ರೂಟ್ 5-0-34-0, ಸಮಿತ್ ಪಟೇಲ್ 6-0-46-1.
ಇಂಗ್ಲೆಂಡ್: 227/3 (47.2 ಓವರ್)
ಕುಕ್ ಬೌಲ್ಡ್ ಬಿ ಇಶಾಂತ್ ಶರ್ಮಾ 22 (40), ಬೆಲ್ ಅಜೇಯ 113 (143), ಪೀಟರ್ಸನ್ ಸಿ ಜಡೇಜಾ ಬಿ ಶಮಿ ಅಹ್ಮದ್ 6 (12), ರೂಟ್ ಬೌಲ್ಡ್ ಬಿ ಜಡೇಜಾ 31 (49), ಮಾರ್ಗನ್ ಅಜೇಯ 40, ಇತರೆ 15
ವಿಕೆಟ್ ಪತನ: 1-53, 2-64, 3-143.
ಬೌಲಿಂಗ್: ಭುವನೇಶ್ವರ 9-1-45-0, ಶಮಿ ಅಹ್ಮದ್ 9-1-46-1, ಇಶಾಂತ್ ಶರ್ಮಾ 10-3-37-1, ಆರ್. ಅಶ್ವಿನ್ 10-0-50-0, ಯುವರಾಜ್ 2-0-15-0, ರವೀಂದ್ರ ಜಡೇಜಾ 7.2-0-26-1.
ಪಂದ್ಯಶ್ರೇಷ್ಠ: ಇಯಾನ್ ಬೆಲ್ ಸರಣಿ ಶ್ರೇಷ್ಠ: ಸುರೇಶ್ ರೈನಾ