ಮೈಸೂರು: ತೀವ್ರ ಕುತೂಹಲ ಮತ್ತು ರೋಚಕವನ್ನುಂಟು ಮಾಡಿದ್ದ ಹಾಕಿ ಪಂದ್ಯಾವಳಿಯಲ್ಲಿ ಗೋಲ್ ಕೀಪರ್ ಎಂ.ಪಿ. ರೋಹಿಣಿ ನೆರವಿನಿಂದಾಗಿ ಮೈಸೂರು ಡಿವೈಎಸ್‌ಎಸ್ ತಂಡ ಧ್ಯಾನ್‌ಚಂದ್ ಆಹ್ವಾನಿತ ಮಹಿಳೆಯರ ಹಾಕಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ, ಭೂಪಾಲ್‌ನ ಎಸ್‌ಎಐ ಸ್ಪೋರ್ಟ್ಸ್ ಶಾಲೆ ತಂಡವನ್ನು 6-5 ಅಂತರದಲ್ಲಿ ಮಣಿಸಿದೆ.
ಇಲ್ಲಿನ ಮೈಸೂರು ವಿವಿ ಸ್ಫೋರ್ಟ್ಸ್ ಪೆವಿಲಿಯನ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ರೋಹಿಣಿ ಪಾತ್ರ ಬಹಳ ಮುಖ್ಯವಾಯಿತು. ಎರಡೂ ತಂಡಗಳು ಸಮಬಲ ಸಾಧಿಸಿದ್ದ ಸಂದರ್ಭ ಇನ್ನೇನು ವಿಜಯಲಕ್ಷ್ಮಿ ಭೂಪಾಲ್ ಕಡೆ ವಾಲುತ್ತಾಳೆ ಎನ್ನುವ ಸಂದರ್ಭ ರೋಹಿಣಿಯ ಸಮಯ ಪ್ರಜ್ಞೆ ಮೆಚ್ಚಬೇಕು. ಭೂಪಾಲ್ ತಂಡ ಬಾರಿಸಲು ಯತ್ನಿಸಿದ ಐದು ಗೋಲ್‌ಗಳನ್ನು ತಡೆಯುವಲ್ಲಿ ಆಕೆ ಯಶಸ್ವಿಯಾದರು. ಆ ಮೂಲಕ ಡಿವೈಎಸ್‌ಎಸ್ ತಂಡ ವಿಜಯ ಪತಾಕೆ ಮೊಳಗಿಸಿತು.
ತಂಡದ ಪರ ಎ.ಕೆ.ರಂಜಿತಾ, ಪಿ.ಸಿ. ಮುತ್ತಮ್ಮ, ಬಿ.ಪಿ. ಕಾವ್ಯಶ್ರೀ, ಐ.ಎಲ್. ಸಾನ ಮತ್ತು ಮಾನಸ ಅವರು ಉತ್ತಮ ಗೋಲ್ ಬಾರಿಸುವ ಮೂಲಕ ತಂಡವನ್ನು ಸುಸ್ಥಿತಿಗೆ ಕೊಂಡೊಯ್ದರು.