ಮುಂಬೈ: ಈ ಬಾರಿಯ ರಣಜಿ ಕಪ್ ಗೆದ್ದ ಮುಂಬೈ ತಂಡ, ತನ್ನ ಆಡಳಿತ ಮಂಡಳಿಯಿಂದಲೂ ರು. 3 ಕೋಟಿ ಬಹುಮಾನ ಪಡೆಯಲಿದೆ. ಪಂದ್ಯಾವಳಿ ಜಯದಿಂದ ರು. 2 ಕೋಟಿ ಮೊತ್ತವನ್ನು ಪಡೆದ ತಂಡಕ್ಕೆ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ವತಿಯಿಂದ ರು. 3 ಕೋಟಿ ಹೆಚ್ಚುವರಿಯಾಗಿ ಲಭಿಸಲಿದೆ.
ಸೋಮವಾರ ಈ ವಿಷಯವನ್ನು ಪ್ರಕಟಿಸಿದ ಎಂಸಿಎ ಸಹ ಕಾರ್ಯದರ್ಶಿ ನಿತಿನ್ ದಲಾಲ್, 'ಈ ಬಾರಿಯ ರಣಜಿ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಶ್ಲಾಘನೀಯ ಸಾಧನೆ ಮಾಡಿರುವ ಮುಂಬೈ ರಣಜಿ ಕ್ರಿಕೆಟ್ ತಂಡಕ್ಕೆ ಎಂಸಿಎ, ರು. 3 ಕೋಟಿ ಬಹುಮಾನವನ್ನು ನೀಡಲಿದೆ. ಬಿಸಿಸಿಐ ವತಿಯಿಂದ ಪಂದ್ಯಾವಳಿ ವಿಜೇತ ತಂಡಕ್ಕೆ ನೀಡಲಾಗುವ ರು. 2 ಕೋಟಿ ಹಣದ ಜೊತೆಗೆ ಎಂಸಿಎ ಕೂಡ ಬಹುಮಾನ ನೀಡುತ್ತಿದೆ' ಎಂದು ಅವರು ತಿಳಿಸಿದರು.