ಬೆಂಗಳೂರು: ಸಂತೋಷ್ ಟ್ರೋಫಿಗೆ ರಾಜ್ಯ ತಂಡವನ್ನು ಆಯ್ಕೆ ಮಾಡಲು ರಾಜ್ಯ ಫುಟ್ಬಾಲ್ ಸ್ಟೇಡಿಯಂನಲ್ಲಿ ಕಳೆದ ಒಂದು ವಾರದಿಂದ ಆಟಗಾರರಿಗೆ ಶಿಬಿರ ಆರಂಭವಾಗಿದೆ. ಆಟಗಾರರೇನು ಉತ್ಸಾಹದಿಂದಲೇ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಆದರೆ, ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯಾಗಿರುವ ಸಂತೋಷ್ ಟ್ರೋಫಿ ರಾಜ್ಯಕ್ಕೆ ಇದುವರೆಗೂ ಮರೀಚಿಕೆಯಾಗಿಯೇ ಉಳಿದಿದೆ.
1972ರಲ್ಲಿ ಏಕೀಕರಣದವಾದಾಗ ರಾಜ್ಯಗಳ ಹೆಸರಿನಲ್ಲಿ ತಂಡಗಳನ್ನು ಪ್ರಕಟಿಸಿದ ನಂತರ ಮತ್ತು 1941ರಲ್ಲಿ ಸಂತೋಷ್ ಟ್ರೋಫಿ ಎಂದು ನಾಮಕರಣ ಮಾಡಿದ ನಂತರ ರಾಷ್ಟ್ರೀಯ ಟ್ರೋಫಿ ರಾಜ್ಯಕ್ಕೆ ಮರೀಚಿಕೆಯಾಗಿಯೇ ಉಳಿದಿದೆ. ಆದರೆ, ಇದಕ್ಕೂ ಮುನ್ನ ರಾಷ್ಟ್ರೀಯ ಟ್ರೋಫಿಯನ್ನು ಮೈಸೂರು ರಾಜ್ಯ ಪ್ರತಿನಿಧಿಸಿದ್ದಾಗ, ಮೈಸೂರು ತಂಡ ಒಟ್ಟು ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಮೈಸೂರು ತಂಡ ಕರ್ನಾಟಕವಾಗಿ ಮಾರ್ಪಟ್ಟ ನಂತರ ಒಂದು ಬಾರಿ ಮಾತ್ರ 1976ರಲ್ಲಿ ಫೈನಲ್‌ಗೆ ಪ್ರವೇಶಿಸಿದೆ.
ಸೌಲಭ್ಯಗಳ ಕೊರತೆಯೂ ಇಲ್ಲ: ಸುಮಾರು ಕಳೆದ ನಾಲ್ಕು ದಶಕಗಳಿಂದ ಕರ್ನಾಟಕಕ್ಕೆ ಸಂತೋಷ್ ಟ್ರೋಫಿ ಮರೀಚಿಕೆಯಾಗಿಯೇ ಉಳಿದಿದೆ. ರಾಜಧಾನಿ ಬೆಂಗಳೂರಿನಲ್ಲಿ ಸುಂದರವಾದ ಫುಟ್ಬಾಲ್ ಸ್ಟೇಡಿಯಂ ನಿರ್ಮಿಸಲಾಗಿದೆ. ಅದರೊಂದಿಗೆ ಇಷ್ಟರಲ್ಲೇ ಆಕಾಡೆಮಿ ಸಹ ಆರಂಭವಾಗಲಿದೆ. ಹೀಗಾಗಿ ಸದ್ಯಕ್ಕಂತೂ ಆಟಗಾರರಿಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಇಷ್ಟೆಲ್ಲ ಸೌಲತ್ತುಗಳು ಲಭ್ಯವಿದ್ದರೂ, ಪ್ರಶಸ್ತಿ ಏಕೆ ಮರೀಚಿಕೆಯಾಗಿ ಉಳಿದಿದೆ ಎಂಬುದು ರಾಜ್ಯ ಫುಟ್ಬಾಲ್ ಅಭಿಮಾನಿಗಳಲ್ಲಿ ಮೂಡಿರುವ ಬೇಸರವಾಗಿದೆ.
ಕಳೆದ ಬಾರಿ ಕಳಪೆ ಆಯ್ಕೆ? ಕಳೆದ ವರ್ಷ ಒಡಿಶಾದಲ್ಲಿ ನಡೆದ ಪಂದ್ಯಾವಳಿಯ ಅರ್ಹತಾ ಸುತ್ತಿನಲ್ಲೇ ಕೈಚೆಲ್ಲಿದ ಕರ್ನಾಟಕ ತಂಡದ ಬಗ್ಗೆ ಹಲವಾರು ಅಪಸ್ವರಗಳು ಕೇಳಿಬಂದಿವೆ. ಸ್ಥಳೀಯ ಪಂದ್ಯಗಳನ್ನೂ ಗೆಲ್ಲಲಾಗದ ಎಂಇಜಿ ಕ್ಲಬ್ ತಂಡದ 9 ಆಟಗಾರರನ್ನು ಪ್ರತಿಷ್ಠಿತ ಪಂದ್ಯಾವಳಿಗೆ ಆಯ್ಕೆ ಮಾಡಿದ್ದೇ ತಂಡ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯದಿರಲು ಕಾರಣವಾಯಿತು ಎನ್ನುತ್ತವೆ ರಾಜ್ಯ ಫುಟ್ಬಾಲ್ ಸಂಸ್ಥೆಯ ಮೂಲಗಳು.
ಅರ್ಹತಾ ಸುತ್ತಿನಲ್ಲಿ ಉತ್ತರಪ್ರದೇಶದಂತಹ ದುರ್ಬಲ ತಂಡದ ವಿರುದ್ಧ ಸೋತಿದ್ದು, ಕಳಪೆ ತಂಡ ಆಯ್ಕೆ ಮಾಡಿದ್ದಕ್ಕೆ ಸಾಕ್ಷಿಯಾಗಿತ್ತು ಎನ್ನುತ್ತವೇ ಮೂಲಗಳು.
ಆಯ್ಕೆಯಲ್ಲೇ ಸಮಸ್ಯೆ ಎದುರಾಗುತ್ತಿದೆಯೇ?: ಕಳೆದ ಬಾರಿ ಎಂಇಜಿ ಕ್ಲಬ್ ಒಂದರಿಂದಲೇ 9 ಆಟಗಾರರನ್ನು ಆಯ್ಕೆ ಮಾಡಿದ್ದಾರೆಂದರೆ, ಆಯ್ಕೆಯಲ್ಲೇ ಎಡವಟ್ಟಾಗುತ್ತಿದೆ. ಹೀಗಾಗಿ ಪ್ರತಿಷ್ಠಿತ ರಾಷ್ಟ್ರೀಯ ಪಂದ್ಯಾವಳಿಗೆ ಪಾರದರ್ಶಕವಾಗಿ ತಂಡವನ್ನು ಆಯ್ಕೆ ಮಾಡಲಾಗುತ್ತಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಎಲ್ಲ ಕ್ಲಬ್‌ಗಳ ಆಟಗಾರರನ್ನು ಪರಿಗಣಿಸಿ ಶ್ರೇಷ್ಠ ಆಟಗಾರರಿಗೆ ಮಣೆ ಹಾಕಬೇಕು ಎಂದು ಫುಟ್ಬಾಲ್ ಸಂಸ್ಥೆಯ ಮೂಲಗಳು ಹೇಳುತ್ತಿವೆ.
ಫೆಬ್ರುವರಿ 1ರಿಂದ ಪಂದ್ಯಾವಳಿ: ಈ ಬಾರಿ ಉತ್ತರಪ್ರದೇಶ ಮತ್ತು ಕೇರಳದಲ್ಲಿ ಫೆಬ್ರವರಿ 1ರಿಂದ ಮಾರ್ಚ್ 03ರವರೆಗೆ ಪಂದ್ಯಾವಳಿ ನಡೆಯಲಿದೆ. ಅರ್ಹತಾ ಸುತ್ತಿನಲ್ಲಿ ಬಿ ಗುಂಪಿನಲ್ಲಿರುವ ಕರ್ನಾಟಕ ತಂಡ ಹಿಮಾಚಲಪ್ರದೇಶ, ಅರುಣಾಚಲಪ್ರದೇಶ, ಬಿಹಾರ ತಂಡಗಳ ಜತೆ ಸೆಣಸಲಿದೆ. ಹೆಚ್ಚು ಕಡಿಮೆ ಸೋಮವಾರ ರಾಜ್ಯ ತಂಡವನ್ನು ಆಯ್ಕೆ ಮಾಡಲಿದ್ದು, ಉತ್ತಮ ತಂಡವನ್ನು ಆಯ್ಕೆ ಮಾಡುವ ಮೂಲಕ ಪ್ರಶಸ್ತಿ ಗೆಲ್ಲುವಂತಾಗಲಿ ಎಂಬುದು ರಾಜ್ಯ ಫುಟ್ಬಾಲ್ ಅಭಿಮಾನಿಗಳ ಆಶಯವಾಗಿದೆ.
-ಮಲ್ಲಿಕಾರ್ಜುನ ಕರಿಯಪ್ಪನವರ