ದೇಶದ ಅಗ್ರ ಟೆನಿಸ್ ತಾರೆ ಲಿಯಾಂಡರ್ ಪೇಸ್ ಕ್ವಾರ್ಟರ್‌ಫೈನಲ್ಲೂ ಬೇಡವೆಂದರು. ಮಹೇಶ್ ಭೂಪತಿ, ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ ಕ್ವಾರ್ಟರ್‌ಫೈನಲ್ಲೆಗೇ ಸಾಕು... ಸಾಕು ಎಂದರು. ಇದು ಈ ಬಾರಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಭಾರತೀಯ ಟೆನಿಸ್ ತಾರೆಗಳ ನೀರಸ... ಪ್ರದರ್ಶನ.
ಋತುವಿನ ಆರಂಭಿಕ ಮತ್ತು ಪ್ರಮುಖ ಗ್ರಾನ್ ಸ್ಲ್ಯಾಮ್ ಪಂದ್ಯಾವಳಿಯಲ್ಲಿ ಭಾರತೀಯ ಟೆನಿಸ್ ತಾರೆಗಳು ನೀಡಿದ ಪ್ರದರ್ಶನ ಅಭಿಮಾನಿಗಳಲ್ಲಿ ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಪೇಸ್ ಮತ್ತು ಭೂಪತಿ ಸಾಧನೆಯೊಂದಿಗೇ ಭಾರತದ ಟೆನಿಸ್ ಯುಗ ಅಂತ್ಯವಾಯಿತೇ? ಅಥವಾ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ವಿರುದ್ಧ ಆಟಗಾರರು ಬಂಡಾಯವೆದ್ದಿರುವುದು ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಿತೆ? ಆಟಗಾರರಲ್ಲಿರುವ ಜೊತೆಯಾಟದ ಕೊರತೆ ಬೇಗನೆ ಪಂದ್ಯಾವಳಿಯಿಂದ ನಿರ್ಗಮಿಸಲು ಕಾರಣವಾಯಿತೇ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿವೆ.
ಭೂಪತಿ, ಭೋಪಣ್ಣ ಹಾಗೂ ಸಾನಿಯಾ ಮಿಶ್ರ ಡಬಲ್ಸ್‌ನಲ್ಲಿ ತಮ್ಮ ಜತೆಯಾಟಗಾರರೊಂದಿಗೆ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರೆ, ಇತರ ವಿಭಾಗಗಳಲ್ಲಿ ಅದಕ್ಕೂ ಮುನ್ನವೇ ತಮ್ಮ ಹೋರಾಟ ಮುಗಿಸಿ ಕೈ ತೊಳೆದುಕೊಂಡಿದ್ದಾರೆ. ಇನ್ನು ಸಿಂಗಲ್ಸ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿದ್ದ, ಎಐಟಿಎ ವಿರುದ್ಧ ಬಂಡಾಯವೆದ್ದಿರುವ ಟೆನಿಸ್ ತಾರೆಗಳ ನಾಯಕತ್ವವಹಿಸಿರುವ ಸೋಮ್‌ದೇವ್ ದೇವ್‌ವರ್ಮನ್ ಪ್ರದರ್ಶನ ಸಹ ಅಷ್ಟಕ್ಕಷ್ಟೇ ಇತ್ತು. ಹೀಗಾಗಿ ಇತ್ತ ಡೇವಿಸ್ ಕಪ್‌ನಿಂದಲೂ ದೂರ ಉಳಿದಿರುವ ಪ್ರಮುಖ ಆಟಗಾರರು ಅತ್ತ ಪ್ರಮುಖ ಪಂದ್ಯಾವಳಿಗಳಲ್ಲೂ ತಕ್ಕ ಪ್ರದರ್ಶನ ನೀಡದಿರುವುದು, ಅವರ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.
ಬೇರ್ಪಟ್ಟ ಜೋಡಿಗಳು
ವಿಶ್ವದಲ್ಲೇ ಯಶಸ್ವಿ ಡಬಲ್ಸ್ ಜೋಡಿ ಎನಿಸಿಕೊಂಡಿದ್ದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ತಮ್ಮ ಜತೆಯಾಟವನ್ನು ಮುರಿದುಕೊಂಡಿತು. ನಂತರ ಒಂದಾದ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೋಡಿ ಸಹ ಒಂದು ವರ್ಷ ಮಾತ್ರ ಜತೆಯಾಗಿ ಆಡಿತು. ಇನ್ನು, ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ ಜೋಡಿ ಮಿಶ್ರ ಡಬಲ್ಸ್‌ನಲ್ಲೂ ಬೇರ್ಪಟ್ಟಿದೆ. ಹೀಗಾಗಿ ದೇಶವನ್ನು ಗಮನದಲ್ಲಿಟ್ಟುಕೊಂಡು ಜತೆಯಾಗಿ ಅಡುವುದನ್ನು ನಿಲ್ಲಿಸಿರುವುದು ಆಟಗಾರರ ಮೇಲೆ ಪರಿಣಾಮ ಬೀರಿರಬಹುದು.
ಡೇವಿಸ್ ಕಪ್‌ನಿಂದ ದೂರ
ಭಾರತೀಯ ಟೆನಿಸ್ ಆಟಗಾರರ ನೈಜ ಜಿದ್ದಿನ ಹೋರಾಟ ನೋಡಬೇಕೆಂದರೆ, ಅದು ಡೇವಿಸ್ ಕಪ್ ಪಂದ್ಯಾವಳಿಯಲ್ಲೇ. ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿ ಬಂದರೆ ಸಾಕು, ವಿಶ್ವ ರ್ಯಾಂಕಿಂಗ್‌ನಲ್ಲಿ ಯಾವುದೇ ಸ್ಥಾನ ಹೊಂದಿರಲಿ, ತಮ್ಮ ಎದುರಾಳಿ ಎಷ್ಟೇ ಬಲಿಷ್ಠವಾಗಿರಲಿ, ಅದನ್ನು ಲೆಕ್ಕಿಸದೇ ಹೋರಾಟ ನಡೆಸುತ್ತಾರೆ. ಆದರೆ, ಬರುವ ತಿಂಗಳು ಫೆಬ್ರುವರಿ 1ರಿಂದ ಮೂರರವರೆಗೆ ದಕ್ಷಿಣ ಕೊರಿಯಾ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಪಂದ್ಯಕ್ಕೆ ಆಟಗಾರರು ಬಹಿಷ್ಕಾರ ಹಾಕಿದ್ದಾರೆ. ಅಲ್ಲದೆ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಡೇವಿಸ್ ಕಪ್ ಪಂದಾವಳಿಯಲ್ಲಿ ದೇಶವನ್ನು ಪ್ರತಿನಿಧಿಸುವುದಿಲ್ಲ ಎಂದು ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ (ಎಐಟಿಎ) ವಿರುದ್ಧ ತಿರುಗಿ ಬಿದ್ದಿದ್ದಾರೆ.
'ಅದಾಗ್ಯೂ ಬಂಡಾಯವೆದ್ದ ಆಟಗಾರರ ಮೇಲೆ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸದಂತೆ ನಾವು ನಿಷೇಧ ಹೇರಿಲ್ಲ. ಈಗಲೂ ಆಟಗಾರರು ಮಾತುಕತೆಗೆ ಮುಂದಾದಲ್ಲಿ ಅವರನ್ನು ಸ್ವಾಗತಿಸುತ್ತೇವೆ. ಆದರೆ, ಆಟಗಾರರು ಮಿತಿ ಮೀರಿ ಒರ್ತಿಸುತ್ತಿದ್ದಾರೆ. ಅವರು ಬಂಡಾಯ ಬಿಟ್ಟು ಮಾತುಕತೆಗೆ ಮುಂದಾಗಬೇಕು. ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಮುಂದಾಗಿದ್ದೇವೆ' ಎನ್ನುತ್ತಾರೆ ಎಐಟಿಎ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಿರೋಮನಿ ಚಟರ್ಜಿ.
ಬೇಡಿಕೆಗಳೇನು?
ಡೇವಿಸ್ ಕಪ್ ಬಹುಮಾನ ಮೊತ್ತವನ್ನು ಆಟಗಾರರಿಗೆ ಹಂಚಬೇಕು. ಸ್ವದೇಶದಲ್ಲಿ ಡೇವಿಸ್ ಕಪ್ ಪಂದ್ಯ ನಡೆಯುವ ಸ್ಥಳದ ಆಯ್ಕೆ ತೀರ್ಮಾವನ್ನು ಆಟಗಾರರಿಗೆ ಬಿಡಬೇಕು. ತಂಡದ ಸಹಾಯಕ ಸಿಬ್ಬಂದಿಯಲ್ಲಿ ಬದಲಾವಣೆ ಮಾಡಬೇಕು. ಅಭ್ಯಾಸ ನಡೆಸಲು ಅನುಕೂಲವಾಗುವಂತೆ ಡೇವಿಸ್ ಕಪ್ ತಂಡದಲ್ಲಿ ಆರು ಆಟಗಾರರಿಗೆ ಸ್ಥಾನ ನೀಡಬೇಕು.
ಆಟಗಾರರು ಏನೆನ್ನುತ್ತಾರೆ ?
ಭವಿಷ್ಯದಲ್ಲಿ ಭಾರತ ಟೆನಿಸ್ ಉದ್ಧಾರವಾಗುವ ನಿಟ್ಟಿನಲ್ಲಿ ನಾವು ಬೇಡಿಕೆಗಳನ್ನು ಇಟ್ಟಿದ್ದೇವೆ. ಆದರೆ, ಎಐಟಿಎ ನಮ್ಮ ಬೇಡಿಕೆಗಳನ್ನು ಸಮ್ಮತಿಸುತ್ತಿಲ್ಲ. ಅಲ್ಲದೆ ನಮ್ಮ ಬೇಡಿಕೆಗಳು ನ್ಯಾಯಸಮ್ಮತವಾಗಿಲ್ಲ ಎಂದು ಹೇಳುತ್ತಿದೆ. ಹೀಗಾಗಿ ಎಐಟಿಎ ನಮ್ಮ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವವರೆಗೂ ನಾವು ನಮ್ಮ ಹೋರಾಟ ಮುಂದುವರೆಸುತ್ತೇವೆ ಎನ್ನುತ್ತಾರೆ ಆಟಗಾರರು.
= ಮಲ್ಲಿಕಾರ್ಜುನ ಕರಿಯಪ್ಪನವರ