ಮುಂಬೈ: ನಾಯಕ ಸಂದೀಪ್ ಸಿಂಗ್ ಎರಡು ಗೋಲು ದಾಖಲಿಸುವುದರೊಂದಿಗೆ ಮುಂಬೈ ಮೆಜಿಷಿಯನ್ ತಂಡ ಉತ್ತರಪ್ರದೇಶ ವಿಜಾರ್ಡ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 4-0 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಹಾಕಿ ಇಂಡಿಯಾ ಲೀಗ್‌ನಲ್ಲಿ ಮುಂಬೈ ಮೆಜಿಷಿಯನ್ ತಂಡಕ್ಕೆ ಇದು ಮೊದಲ ವಿಜಯವಾಗಿದೆ.
ಇದಕ್ಕೂ ಮುನ್ನ ಮುಂಬೈ ತಂಡ ನಿರಂತರವಾಗಿ ಏಳು ಪಂದ್ಯಗಳಲ್ಲಿ ಸೋಲನುಭವಿಸಿದೆ. ಹೀಗಾಗಿ 5 ತಂಡಗಳು ಭಾಗವಹಿಸಿರುವ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ನೂಕಲ್ಪಟ್ಟಿದ್ದ ಮುಂಬೈ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯವಿತ್ತು.
ಪಂದ್ಯದಲ್ಲಿ ಮೆಜಿಷಿಯನ್‌ಗೆ ಮೊದಲ ಎರಡು ಗೋಲುಗಳನ್ನು ಸಂದೀಪ್ ಸಿಂಗ್ ಅವರು ತಂದುಕೊಟ್ಟರು. ಇದರೊಂದಿಗೆ ಸಂದೀಪ್ ಪಂದ್ಯಾವಳಿಯಲ್ಲಿ ಒಟ್ಟು 11 ಗೋಲು ದಾಖಲಿಸದಂತಾಯಿತು. ಮುಂಬೈ ತಂಡದ ಪರ ಪಂದ್ಯದಲ್ಲಿ ಗೋಲ್‌ಕೀಪರ್ ಶ್ರೀಜೇಶ್ ಅವರು ಮ್ಯಾಥ್ಯೂ ಅವರೊಂದಿಗೆ ಉತ್ತಮ ಪ್ರದರ್ಶನ ತೋರುವುದರೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ವಿಜಯದೊಂದಿಗೆ 5 ಪಾಯಿಂಟ್‌ಗಳನ್ನು ಪಡೆದ ಮುಂಬೈ ತಂಡ ಒಟ್ಟು 12 ಪಾಯಿಂಟ್ ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಇದರೊಂದಿಗೆ ನಾಲ್ಕನೇ ಸೋಲನುಭವಿಸಿದ ಉತ್ತರಪ್ರದೇಶ ವಿಜಾರ್ಡ್ಸ್ ತಂಡ 17 ಪಾಯಿಂಟ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ.