ಕ್ರೀಡೆ

ಭಾರತದ ಸ್ಥಿತಿ ಡೋಲಾಯಮಾನ

ಪೋರ್ಟ್ ಆಫ್ ಸ್ಪೇನ್: ರೋಹಿತ್ ಶರ್ಮಾ ಅವರ ತಾಳ್ಮೆಯ ಬ್ಯಾಟಿಂಗ್‌ನ ನೆರವಿನಿಂದಾಗಿ ಭಾರತ ತಂಡ, ಮಂಗಳವಾರ ನಡೆದ ತ್ರಿಕೋನ ಸರಣಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 29 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತ್ತು.
29ನೇ ಓವರ್ ಮುಗಿಯುವ ವೇಳೆಗೆ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು ಅಲ್ಲಿಗೇ ನಿಲ್ಲಿಸಲಾಗಿತ್ತು. ಭಾರತದ ಪಾಲಿಗೆ ಗೆಲ್ಲಲೇಬೇಕಿದ್ದ ಪಂದ್ಯ ಹೀಗೆ ಮಳೆಗೆ ಸಿಲುಕಿ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ, ಭಾರತ ಫೈನಲ್‌ಗೆ ಹೋಗುವುದೋ ಇಲ್ಲವೋ ಎಂಬ ಅಭಿಮಾನಿಗಳ ದುಗುಡವನ್ನು ಮತ್ತಷ್ಟು ಹೆಚ್ಚಿಸಿದೆ.
ಟಾಸ್ ಗೆದ್ದಿದ್ದ ಶ್ರೀಲಂಕಾ ತಂಡದ ನಾಯಕ ಏಂಜೆಲೋ ಮ್ಯಾಥ್ಯೂಸ್ ಅವರು ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಭಾರತದ ಪರವಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಇನಿಂಗ್ಸ್ ಆರಂಭಿಸಿದರು. ಆದರೆ, ಈ ಜೋಡಿ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮೊದಲ ವಿಕೆಟ್‌ಗೆ ಈ ಜೋಡಿ 27 ರನ್ ಸೇರಿಸುವಷ್ಟರಲ್ಲಿ ಶಿಖರ್ ಧವನ್ ಔಟಾದರು. 7ನೇ ಓವರ್‌ನಲ್ಲಿ ಮ್ಯಾಥ್ಯೂಸ್ ಬೌಲಿಂಗ್‌ನಲ್ಲಿ ಜಯವರ್ಧನೆಗೆ ಕ್ಯಾಚಿತ್ತ ಧವನ್ ವೈಯಕ್ತಿಕವಾಗಿ ಕೇವಲ 15 ರನ್ ಗಳಿಸಿ ಔಟಾದರು.
ಅವರ ನಂತರ, ಕ್ರೀಸ್‌ಗೆ ಕಾಲಿಟ್ಟಿದ್ದು ವಿರಾಟ್ ಕೊಹ್ಲಿ. ಆನಂತರ, ರೋಹಿತ್- ವಿರಾಟ್ ಜೋಡಿ, 2ನೇ ವಿಕೆಟ್‌ಗೆ 49 ರನ್ ಸೇರಿಸಿತು.
ಈ ಹಂತದಲ್ಲಿ, ಹೆರಾತ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂಗೆ ಒಳಗಾದ ಕೊಹ್ಲಿ ಕೇವಲ 31 ರನ್ ಗಳಿಸಿ ಔಟಾದರು.
ಅವರ ನಂತರ ಬಂದಿದ್ದು, ದಿನೇಶ್ ಕಾರ್ತಿಕ್. ಆದರೆ, ಈ ಜೋಡಿಯೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ತಳವೂರಲಿಲ್ಲ. ಮೂರನೇ ವಿಕೆಟ್‌ಗೆ ಕೇವಲ 35 ರನ್ ಪೇರಿಸುವಷ್ಟರಲ್ಲಿ ಕಾರ್ತಿಕ್ ಔಟಾದರು. ಇವರನ್ನು ಪೆವಿಲಿಯನ್‌ಗೆ ಅಟ್ಟಿದ್ದು ಮ್ಯಾಥ್ಯೂಸ್ ಅವರೇ. 27ನೇ ಓವರ್‌ನಲ್ಲಿ, ವೈಯಕ್ತಿಕವಾಗಿ 12 ರನ್ ಗಳಿಸಿ ಆಡುತ್ತಿದ್ದ ಕಾರ್ತಿಕ್ ಅವರನ್ನು ಬೌಲ್ಡ್ ಮಾಡಿ, ಕ್ರೀಸ್‌ನಿಂದ ಆಚೆ ಕಳುಹಿಸಿದರು.
ಆಗ, ರೋಹಿತ್‌ಗೆ ಜೋಡಿಯಾಗಿದ್ದು ಸುರೇಶ್ ರೈನಾ. ಇವರಿಬ್ಬರೂ ಕೇವಲ 8 ರನ್‌ಗಳ ಜೊತೆಯಾಟವಾಡುವಷ್ಟರಲ್ಲಿ, ಮಳೆ ಆಟಕ್ಕೆ ಅಡ್ಡಿಪಡಿಸಿತು. 29 ಓವರ್‌ಗಳ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದ್ದಾಗ, ಪಂದ್ಯವನ್ನು ಅಲ್ಲಿಗೇ ನಿಲ್ಲಿಸಲಾಗಿತ್ತು.  
ಪತ್ರಿಕೆ ಮುದ್ರಣಕ್ಕೆ ಹೋಗುವವರೆಗೂ ಪಂದ್ಯ ಪುನರಾರಂಭವಾಗಿರಲಿಲ್ಲ.

ಸ್ಕೋರ್ ಬೋರ್ಡ್ (ಅಪೂರ್ಣ)

ಭಾರತ: 119/3 (29 ಓವರ್)
ರೋಹಿತ್ ಶರ್ಮಾ ಅಜೇಯ 48 (83), ಶಿಖರ್ ಧವನ್ ಸಿ ಜಯವರ್ಧನೆ ಬಿ ಮ್ಯಾಥ್ಯೂಸ್ 15 (16), ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯೂ ಬಿ ಹೆರಾತ್ 31 (52), ದಿನೇಶ್ ಕಾರ್ತಿಕ್ ಬಿ ಹೆರಾತ್ 12 (18), ಸುರೇಶ್ ರೈನಾ ಅಜೇಯ 4 (7). ಇತರೆ 9.
ವಿಕೆಟ್ ಪತನ: 1-27, 2-76, 3-111.
ಬೌಲಿಂಗ್: ಎರಂಗಾ 6-0-27-0, ದಿಲ್ಹಾರಾ 8-0-40-0, ಮ್ಯಾಥ್ಯೂಸ್ 5-1-5-1, ಮಾಲಿಂಗಾ 3-1-7-0, ಹೆರಾತ್ 6-0-32-2, ಮೆಂಡಿಸ್ 1-0-4-0.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!