ವಿಂಬಲ್ಡನ್ ಎಂಬುದು ಟೆನಿಸಿಗನ ಪಾಲಿಗೆ ಯಾವತ್ತಿದ್ದರೂ ಪರಮೋಚ್ಚ ಗೆಲವೇ. ಆದರೆ, ಮೊನ್ನೆ ಆ್ಯಂಡಿ ಮರ್ರೆ ಪಾಲಿಗೆ ಈ ಗೆಲವು ಕೇವಲ ಸಂಭ್ರಮಾಚರಣೆಯ ವಿಷಯವಾಗಿರಲಿಲ್ಲ. ಆತ ಹಲವನ್ನು ಸಾಬೀತುಪಡಿಸಿ ತೋರಿಸಬೇಕಿತ್ತು. ಹೀಗಾಗಿ, ಸಿಕ್ಕಾಪಟ್ಟೆ ಒತ್ತಡದಲ್ಲಿ ಆಡಿದ್ದ.
ಕಳೆದ ಬಾರಿಯ ವಿಂಬಲ್ಡನ್ನಲ್ಲಿ ಫೆಡರರ್ ಎದುರು ಮುಗ್ಗರಿಸಿದ್ದ ಮರ್ರೆ ಆ ಬಳಿಕ ಕಂಡದ್ದು ಅದ್ಭುತ ಟೆನಿಸ್ ಯಾತ್ರೆ. ಆರಂಭದ ದಿನಗಳಲ್ಲಿ ರ್ಯಾಂಕಿಂಗ್ನಲ್ಲಿ ಹತ್ತರೊಂದಿಗೆ ಹನ್ನೊಂದು ಎಂದಾಗಿದ್ದವ, ಕಳೆದ ವರ್ಷ ಮೂವರೊಂದಿಗೆ ನಾಲ್ಕನೆಯವನಾದ. ಅಂದರೆ ಆತನ ಪರಿಸ್ಥಿತಿ ಮೂರಕ್ಕೇರಲಿಲ್ಲ ಆರಕ್ಕೆ ಇಳಿಯಲಿಲ್ಲ ಎಂದೇ ಆಗಿತ್ತು.
ಲೆಕ್ಕ ತಲೆಕೆಳಗಾಯ್ತು...
ವಿಂಬಲ್ಡನ್ನಲ್ಲಿ ಬ್ರಿಟಿಷರ 76 ವರ್ಷಗಳ ಕನಸು ನನಸಾಗಿಸುವುದಕ್ಕೆ ವಿಫಲವಾಗಿದ್ದ ಮರ್ರೆ, ಅದೇ ಲಂಡನ್ ಕೋರ್ಟ್ನಲ್ಲಿ ಜೋಕೊವಿಚ್ರನ್ನು ಪಕ್ಕಕ್ಕೆ ಸರಿಸಿ ಸ್ವರ್ಣ ಪದಕದೊಂದಿಗೆ ಬೀಗಿದ. ಏನೇ ಅನ್ನಿ ಸದ್ಯದ ಮೂವರು ದಿಗ್ಗಜರೊಂದಿಗೆ ಇವನನ್ನು ಹೋಲಿಸುವುದು ಅಸಾಧ್ಯ ಎಂಬ ಉತ್ತರಗಳಿಗೆ ಯುಎಸ್ ಓಪನ್ ಗೆಲ್ಲುವುದರ ಮೂಲಕ ಉತ್ತರ ಕೊಟ್ಟ. ಲಂಡನ್ ಗೆಲವು ಆಕಸ್ಮಿಕವಲ್ಲ, ನಂಬರ್ ಒನ್ ರೇಸಿನಲ್ಲಿ ಈತನೂ ಪ್ರಬಲ ಸ್ಪರ್ಧಿ ಎಂಬುದು ಸಾಬೀತಾಯಿತು.
ಫೆಡರರ್ ಒಬ್ಬನೇ ಟೆನಿಸ್ ರಾಜನಾಗಿದ್ದ ಕಾಲದಲ್ಲಿ ನಡಾಲ್ ಸಡ್ಡು ಹೊಡೆದಿದ್ದ. ಅನೇಕ ವರ್ಷ ಸದ್ದಿಲ್ಲದೆ ಸಣ್ಣಪುಟ್ಟ ಕಾಮಿಕ್ ಮಾಡಿ ಮೂಲೆಯಲ್ಲಿದ್ದ ಜೊಕೊವಿಚ್ ಕೊವಿಚ್ ನಂಬರ್ ಒನ್ ಪಟ್ಟಕ್ಕೇರಿದ. ಇವರೊಂದಿಗೆ ಪಳಗಿ, ಚೋಕರ್ ಅನ್ನಿಸಿಕೊಂಡಿದ್ದ ಮರ್ರೆ ಇದೀಗ ವಿನ್ನರ್ ಆಗಿ ಮೂಡಿಬರತೊಡಗಿದ.
ವಿಂಬಲ್ಡನ್ ಪ್ರತಿಷ್ಠೆ
ಎಷ್ಟೇ ಗ್ರಾನ್ ಸ್ಲ್ಯಾಮ್ಗಳನ್ನು ಗೆದ್ದರೂ ಒಂದು ವಿಂಬಲ್ಡನ್ ಮಹತ್ವವೇ ಬೇರೆ. ಅಮೆರಿಕಾದ ಅರ್ಥರ್ ಆಯಶ್ ಜೀವನವನ್ನೊಮ್ಮೆ ಕಣ್ಣಾಡಿಸಿದರೆ, ಅದರ ಮಹತ್ವ ತಿಳಿಯದೇ ಇರದು. ಆಯಶ್ ವಿಂಬಲ್ಡನ್ ಗೆದ್ದ ಏಕೈಕ ಕಪ್ಪು ವರ್ಣೀಯ. 60ರ ದಶಕದಲ್ಲಿ ಟೆನಿಸ್ ಪ್ರಪಂಚವನ್ನು ಆಳಿದ ಆಯಶ್, ಏಡ್ಸ್ ಮಾರಿಗೆ ತುತ್ತಾಗಿ ಅಸುನೀಗಿದ. ಈ ಸಂದರ್ಭದಲ್ಲಿ ವಿಪರೀತ ಬುದ್ಧಿಯ ಪತ್ರಕರ್ತನೊಬ್ಬ, 'ದೇವರು ಈ ಮಹಾಮಾರಿಗೆ ನಿಮ್ಮನ್ನೇ ಯಾಕೆ ಆಯ್ದುಕೊಂಡ ಎಂದು ಅನ್ನಿಸುತ್ತಿಲ್ಲವೇ?' ಎಂದು ಕೇಳಿದ್ದನಂತೆ. ಅದಕ್ಕೆ ಆತ 'ಅಂಥ ವಿಂಬಲ್ಡನ್ ಟ್ರೋಫಿಯನ್ನೇ ಎತ್ತಿ ಹಿಡಿದಾಗ ದೇವರೇ ನನ್ನನ್ನು ಯಾಕೆ ಆಯ್ದುಕೊಂಡೆ ಎಂದು ಪ್ರಶ್ನಿಸಲಿಲ್ಲ. ಮತ್ತೆ ಈಗ ಯಾಕೆ ಆ ಪ್ರಶ್ನೆ?' ಎಂದಿದ್ದರಂತೆ. ಈ ಉತ್ತರ ಅವರು ಬದುಕನ್ನು ಸ್ವೀಕರಿಸಿದ್ದ ರೀತಿಯ ಜತೆಗೇ ವಿಂಬಲ್ಡನ್ಗೆ ನೀಡಿದ್ದ ಮಹತ್ವವನ್ನೂ ಸಾರುತ್ತದೆ.
ಗೆದ್ದರೆ ಬ್ರಿಟಿಷ್, ಸೋತರೆ ಸ್ಕಾಟಿಷ್
ಇದು ಈವರೆಗೂ ಮರ್ರೆಯ ಬಗ್ಗೆ ಪ್ರಚಲಿತವಿದ್ದ ಜೋಕ್! ಇದಕ್ಕೆ ಕಾರಣ ಇಲ್ಲದಿಲ್ಲ. ಇಂದು ಮರ್ರೆ ಬ್ರಿಟನ್ ಪರ ಆಡುತ್ತಿದ್ದರೂ ಆತನ ಮೂಲ ಸ್ಕಾಟ್ಲೆಂಡ್. ಹೀಗಾಗಿ ಬಹಳಷ್ಟು ಇಂಗ್ಲೆಂಡಿಗರು ವಿಂಬಲ್ಡನ್ನಲ್ಲಿ ಈತ ನಮ್ಮ ದೇಶದ ಅಧಿಕೃತ ಪ್ರತಿನಿಧಿ ಎಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಒಂದೆಡೆ ತಾನು ಸಮರ್ಥ ಟೆನಿಸಿಗ ಎಂದೆನ್ನಿಸಿಕೊಳ್ಳುವ ಒತ್ತಡದೊಂದಿಗೆ, ತಾನೊಬ್ಬ ಸಮರ್ಥ ಬ್ರಿಟಿಷ್ ಆಟಗಾರ ಎಂಬುದನ್ನು ಸಾಧಿಸಿ ತೋರಬೇಕಾದ ಒತ್ತಡ ಮರ್ರೆ ಮೇಲಿತ್ತು.
ಪಂದ್ಯಾವಳಿಯ ಆರಂಭದಲ್ಲೇ ಘಟಾನುಘಟಿಗಳಾದ ಫೆಡರರ್, ನಡಾಲ್ ಮನೆ ದಾರಿ ಹಿಡಿದರು. ಹೀಗಾಗಿಯೂ ಮರ್ರೆಗೆ ಫೈನಲ್ ಹಾದಿ ಸುಗಮವಾಗಿದ್ದಿರಬಹುದು. ಆದರೆ ಫೈನಲ್ ಸುಲಭವಿರಲಿಲ್ಲ. ಯಾಕೆಂದರೆ ಅಲ್ಲಿ ಸಿಕ್ಕಿದ್ದಾತ ನಂಬರ್ ಒನ್ ಜಿಗುಟು ಆಟಗಾರ ಜೋಕೊವಿಚ್. ಆತ ಕಳೆದ ಬಾರಿಯ ಒಲಿಂಪಿಕ್ಸ್ ಸೋಲಿನ ಸೇಡು ತೀರಿಸುವನೆಂಬ ಲೆಕ್ಕಾಚಾರ ಎಲ್ಲರದಾಗಿತ್ತು. ಆದರೆ, ಅವಕಾಶವನ್ನೂ ಬಿಟ್ಟುಕೊಡಲೊಲ್ಲದ ಮರ್ರೆ ನಿರ್ಮಿಸಿದ್ದು ಇತಿಹಾಸ.
ಇವೆಲ್ಲದ್ದಕ್ಕಿಂತ ಹೆಚ್ಚಾಗಿ...
ಮರ್ರೆ ವಿಂಬಲ್ಡನ್ ಆಡುತ್ತಿದ್ದಾಗ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಮಹಿಳೆಯರು ಮರ್ರೆಯನ್ನು ಹುರಿದುಂಬಿಸುತ್ತಿದ್ದ ದೃಶ್ಯ ಕಣ್ಣಿಗೆ ಕಟ್ಟುವಂತಿತ್ತು. ಒಬ್ಬಾಕೆ ಏಳು ವರ್ಷದಿಂದ ಮರ್ರೆಯ ಮನದನ್ನೆಯಾಗಿರುವ ಕಿಮ್ ಸಿಯರ್ಸ್. ಮತ್ತೊಬ್ಬಾಕೆ ಆತನ ತಾಯಿ ಜೂಡಿ. ಆಕೆಯ ಪಕ್ಕದಲ್ಲೇ ಮರ್ರೆಯ ತಂದೆ ವಿಲಿಯಂ ಕೂಡ ಇದ್ದರು ಎಂಬುದೇ ವಿಶೇಷ. ವಿಚ್ಛೇದನ ಪಡೆದಿದ್ದ ಅಪ್ಪ ಮತ್ತು ಅಮ್ಮ, ಮಗನ ಮಹತ್ವದ ಗೆಲವನ್ನು ಸವಿಯಲೋಸುಗ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಜೊತೆಗೆ ನಿಂತಿದ್ದರು. ಒಬ್ಬ ಮಗನಿಗೆ ಇದಕ್ಕಿಂತ ದೊಡ್ಡ ಗೆಲವು ಇನ್ನೇನು ಬೇಕು, ಅಲ್ಲವೇ?
- ಗಣೇಶ್ ಪ್ರಸಾದ್ ಕುಂಬ್ಳೆ