ಡೈರಿ ಮಿಲ್ಕಾ
ಕ್ರೀಡಾ ವಿದ್ಯಮಾನಗಳು, ಆಟಗಾರರ ಕಥೆಗಳು ಹಲವು ಬಾರಿ ಬಾಲಿವುಡ್ನ ಪರದೆ ಮೇಲೆ...
ಕ್ರೀಡಾ ವಿದ್ಯಮಾನಗಳು, ಆಟಗಾರರ ಕಥೆಗಳು ಹಲವು ಬಾರಿ ಬಾಲಿವುಡ್ನ ಪರದೆ ಮೇಲೆ ರಾರಾಜಿಸಿವೆ. 'ಚಕ್ ದೇ ಇಂಡಿಯಾ', 'ಇಕ್ಬಾಲ್', 'ಜನ್ನತ್', 'ಫೆರಾರಿ ಕಿ ಸವಾರಿ'... ಇವೇ ಮೊದಲಾದ ಚಿತ್ರಗಳು ಅಲ್ಲಿ ತೆರೆಕಂಡಿವೆ. ಈಗ, ಅದೇ ಜಾಗಕ್ಕೆ ಸೇರ್ಪಡೆಯಾಗುತ್ತಿರುವ ಮತ್ತೊಂದು ವಿಭಿನ್ನ ಸ್ಫೂರ್ತಿಯ ಚಿತ್ರ 'ಭಾಗ್ ಮಿಲ್ಕಾ ಭಾಗ್'.
'ಫ್ಲೈಯಿಂಗ್ ಸಿಖ್' ಅಂತಲೇ ಹೆಸರಾದ ಅಥ್ಲೀಟ್ ಮಿಲ್ಕಾ ಸಿಂಗ್ ಅವರ ಜೀವನಾಧಾರಿತ ಚಿತ್ರ ಇದು. ಭಾರತ- ಪಾಕ್ ವಿಭಜನೆ ವೇಳೆಯ ದಂಗೆಗಳಲ್ಲಿ ತನ್ನವರನ್ನು ಕಳೆದುಕೊಂಡು, ಭಾರತಕ್ಕೆ ಓಡಿ ಬರುವ ಮಿಲ್ಕಾ, ನಂತರ ಅಥ್ಲೀಟ್ ಆಗಿ, ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವುದೇ ಈ ಚಿತ್ರದ ಸಾರಾಂಶ. ದಂಗೆಯ ಸನ್ನಿವೇಶದಲ್ಲಿ ತಾವು ಅಪಾಯದಂಚಿಗೆ ಸಿಲುಕಿದಾಗ, ಮಿಲ್ಕಾ ಸಿಂಗ್ನ ತಂದೆ, ಮಗನಿಗೆ ಓಡಿ ಹೋಗಲು ಸೂಚಿಸಿದಾಗ 'ಭಾಗ್ ಮಿಲ್ಕಾ ಭಾಗ್' ಎಂದಿದ್ದರಂತೆ. ಅದನ್ನೇ ಚಿತ್ರದ ಟೈಟಲ್ ಆಗಿಸಲಾಗಿದೆ.
ಸರಾಗ ಸಾಗುವ ಕಥೆ
ಅದು 1960ರ ರೋಮ್ ಒಲಿಂಪಿಕ್ಸ್. ಎಲ್ಲಾ ಅಥ್ಲೀಟ್ಗಳೂ ತಮ್ಮ ಸ್ಪರ್ಧೆಗಾಗಿ ತಾಲೀಮು ನಡೆಸುತ್ತಿದ್ದರು. ಆಗ ಭಾರತದ ಕೋಚ್ ಒಬ್ಬರು, ತನ್ನ ಭರವಸೆಯ ಕ್ರೀಡಾಳುವನ್ನು ಅಭ್ಯಾಸದ ವೇಳೆ ಹುರಿದುಂಬಿಸುತ್ತಿರುತ್ತಾನೆ. ಪ್ರತಿ ಹಂತದಲ್ಲೂ 'ಭಾಗ್ ಮಿಲ್ಕಾ ಭಾಗ್' ಎಂದು ಕೂಗುತ್ತಿರುತ್ತಾನೆ. ಅಲ್ಲಿಂದ ಫ್ಲ್ಯಾಶ್ಬ್ಯಾಕ್ ಮಾದರಿಯಲ್ಲಿ, ಚಿತ್ರದ ನೈಜ ಕಥೆ ಶುರುವಾಗುತ್ತದೆ. ಪಾಕಿಸ್ತಾನದಲ್ಲಿನ ದಂಗೆಗಳಿಂದಾಗಿ ಹೆತ್ತವರನ್ನು ಕಳೆದುಕೊಳ್ಳುವ ಮಿಲ್ಕಾಸಿಂಗ್, ನೇರವಾಗಿ ದೆಹಲಿಗೆ ಓಡಿಬರುತ್ತಾನೆ. ಅಲ್ಲಿ, ದಂಗೆಯ ವೇಳೆ ದೂರವಾಗಿದ್ದ ತನ್ನ ತಂಗಿ ಸಿಗುತ್ತಾಳೆ.
ಅವರಿವರ ಸ್ನೇಹ ಸಂಪಾದಿಸುವ ಮಿಲ್ಕಾ, ಮುಂದೆ ಭಾರತೀಯ ಸೇನೆಯಲ್ಲಿ ಹವಾಲ್ದಾರನಾಗುತ್ತಾನೆ. ಅಲ್ಲಿಯೇ ಅದ್ಭುತ ಅಥ್ಲೀಟ್ ಆಗಿ ಅರಳುತ್ತಾನೆ. ಸೇನೆ ಈತನ ಪ್ರತಿಭೆಯನ್ನು ಗುರುತಿಸುತ್ತದೆ. ಮಿಲ್ಕಾ ವೇಗದ ಓಟಗಾರನೆಂಬ ಖ್ಯಾತಿ ಪಡೆಯುತ್ತಾನೆ. ಮುಂದೆ ಮಿಲ್ಕಾ, ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನೂ ನಿರ್ಮಿಸುತ್ತಾನೆ. ಕಾಮನ್ವೆಲ್ತ್ ಗೇಮ್ಸ್ ಸೇರಿದಂತೆ ಏಷ್ಯನ್ ಗೇಮ್ಸ್ನಲ್ಲೂ ಪದಕಗಳನ್ನು ಗೆಲ್ಲುತ್ತಾನೆ. ಆದರೆ, 1960ರ ರೋಮ್ ಒಲಿಂಪಿಕ್ಸ್ನಲ್ಲಿ ಕೂದಲೆಳೆಯ ಅಂತರದಲ್ಲಿ ಪದಕ ಗೆಲ್ಲುವುದರಿಂದ ವಂಚಿತನಾಗುತ್ತಾನೆ. ಹೀಗೆ, ಕೆಲವೇ ವಾಕ್ಯಗಳಲ್ಲಿ ಕಥೆಯನ್ನು ಹೇಳಬಹುದಾದರೂ, ಪದಗಳಲ್ಲಿ ಹಿಡಿದಿಡಲು ಸಾಧ್ಯವಾಗದ ಹಲವು ಮೆಚ್ಚುಗೆಯ ಅಂಶಗಳು ಚಿತ್ರದಲ್ಲಿವೆ. ಆಟಗಾರನೊಬ್ಬನ ಮಾನಸಿಕ ಏರಿಳಿತ, ಎಲ್ಲರಿಗಿರುವಂತೆ ಸಹಜವಾಗಿ ಒಬ್ಬ ಅಥ್ಲೀಟ್ಗೂ ಕಾಡುವ ಅಹಂಕಾರ, ಮಮಕಾರ, ಯಶಸ್ಸಿನ ಹುಚ್ಚು, ಸಾಧಿಸಲೇಬೇಕೆನ್ನುವ ಛಲ... ಇವೆಲ್ಲವನ್ನೂ ಒಳಗೊಂಡ ಮಿಲ್ಕಾ ಸಿಂಗ್ ಚಿತ್ರ ಪ್ರೇಕ್ಷಕರ ಮನಮುಟ್ಟುತ್ತದೆ. ಯಶಸ್ಸಿನ ಗುಂಗಿನಲ್ಲಿ, ಹರೆಯದ ಉನ್ಮಾದದಲ್ಲಿ ತೇಲಿ, ಪ್ರಮುಖ ರೇಸ್ನಲ್ಲಿ ಮೈಮರೆತು ಸೋಲುವ ಮಿಲ್ಖಾ ಸಿಂಗ್, ಆ ವೈಫಲ್ಯಕ್ಕೆ ಮನನೊಂದು ಪುನಃ ಫೀನಿಕ್ಸ್ನಂತೆ ಎದ್ದು, ಕಠಿಣ ಪರಿಶ್ರಮದೊಂದಿಗೆ ಯಶಸ್ಸಿನ ಶಿಖರ ಮುಟ್ಟುವ ಸನ್ನಿವೇಶಗಳು ಇಂದಿನ ಯುವ ಜನತೆಗೆ ಸ್ಫೂರ್ತಿ. ದೇಶಪ್ರೇಮ, ವಯೋ ಸಹಜ ಪ್ರೇಮ, ಕಾಮ, ಸಾಧನೆ, ಮಾನವನ ದೌರ್ಬಲ್ಯಗಳು, ಆಂತರಿಕ ಮನೋ ಸಂಘರ್ಷಗಳು, ಸೆಂಟಿಮೆಂಟ್- ಹೀಗೆ ಎಲ್ಲವನ್ನೂ ಹದವಾಗಿ ಮಿಶ್ರಣ ಮಾಡಿ ಚಿತ್ರವನ್ನು ತೆರೆಗೆ ತಂದಿದ್ದಾರೆ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಹಾಗೂ ಚಿತ್ರಕಥೆ ಬರೆದಿರುವ ಪ್ರಸೂನ್ ಜೋಶಿ. ಮಿಲ್ಕಾ ಸಿಂಗ್ ಅವರ ಅಪರಾವತಾರದಂತೆ ಕಾಣಿಸುವ ಫರ್ಹಾನ್ ಅಖ್ತರ್, ಪ್ರೇಕ್ಷಕರಿಗೆ ಮೋಡಿ ಮಾಡುತ್ತಾರೆ.
'ರಂಗ್ ದೇ ಬಸಂತಿ'ಯಂಥ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ರಾಕೇಶ್ ಓಂಪ್ರಕಾಶ್ ಮೆಹ್ರಾ ಈ ಬಾರಿ ಮತ್ತೊಮ್ಮೆ ಕಮಾಲ್ ಮೆರೆದಿದ್ದಾರೆ. ನಮ್ಮಲ್ಲಿ ಕ್ರೀಡೆ, ಕ್ರೀಡಾಳುಗಳನ್ನಾಧರಿಸಿದ ಚಿತ್ರಗಳು ಬರುವುದು ಅಪರೂಪ. ಹಾಗೆ, ಅಪರೂಪ ಎನಿಸುವ ಚಿತ್ರಗಳೂ ನೆನಪಿನಂಗಳದಲ್ಲಿ ಸದಾಕಾಲ ಉಳಿಯುಂಥ ಚಿತ್ರ 'ಭಾಗ್ ಮಿಲ್ಕಾ ಭಾಗ್'.
ಒಂದು ರುಪಾಯಿಗೆ ಕಥೆ
ಅಂದಹಾಗೆ, ಮಿಲ್ಕಾ ಸಿಂಗ್ ಅವರ ಜೀವಮಾನದ ಕಥೆಯನ್ನು ಸಿನಿಮಾ ಮಾಡಲು ಈ ಹಿಂದೆ ಹಲವು ನಿರ್ಮಾಪಕರು ಮುಂದೆ ಬಂದಿದ್ದರಂತೆ. ಅವರ ಜೀವನದ ಮಹತ್ವದ ಘಟನೆಗಳನ್ನು ವಿವರಿಸಿದಲ್ಲಿ, ಕೋಟಿಗಟ್ಟಲೆ ನೀಡಲೂ ಅವರು ಸಿದ್ಧರಿದ್ದರಂತೆ. ಆದರೆ, ಹಣದಾಸೆಗೆ ಒಳಗಾಗದೇ, ಔಪಚಾರಿಕವಾಗಿ ಒಂದು ರುಪಾಯಿ ಮಾತ್ರ ತೆಗೆದುಕೊಂಡು ಚಿತ್ರಕ್ಕೆ ಬೇಕಾದ ಎಲ್ಲಾ ಮಾಹಿತಿಗಳನ್ನು ಒದಗಿಸಿಕೊಟ್ಟಿದ್ದಾರೆ. ಇದು, ಕಲಾ ಚಿತ್ರವೊಂದಕ್ಕಾಗಿ ಪ್ರಕಾಶ್ ರೈ ಕೇವಲ ರು. 1 ತೆಗೆದುಕೊಂಡಿದ್ದು ಹಾಗೂ ತಮ್ಮ ಗುರು ಬಾಲಚಂದರ್ಗಾಗಿ ನಿರ್ಮಿಸಲಾದ ಚಿತ್ರಕ್ಕೆ ರಜನೀಕಾಂತ್ ಸಹ ಕೇವಲ ರು. 1 ಸಂಭಾವನೆ ತೆಗೆದುಕೊಂಡಿದ್ದು ನೆನಪಿಗೆ ತರುತ್ತೆ. ಭಾರತ- ಪಾಕ್ ನಡುವಿನ ಬಾಂಧವ್ಯ ಸುಧಾರಣೆಗೆ ಈ ಚಿತ್ರ ಪ್ರೇರಣೆಯಾಗಲಿ ಎಂಬ ಸದುದ್ದೇಶದಿಂದ ಮಿಲ್ಕಾ ಸಿಂಗ್ ಅವರು, ಈ ಚಿತ್ರಕ್ಕಾಗಿ ಯಾವುದೇ ಸಂಭಾವನೆ ತೆಗೆದುಕೊಂಡಿಲ್ಲ. ಅತ್ತ ಚಿತ್ರ ತಂಡವೂ, ಈ ಚಿತ್ರದಲ್ಲಿ ಬರುವ ಲಾಭವನ್ನು ಆರ್ಥಿಕ ಸಹಾಯ ಬೇಡುವ ಯೋಗ್ಯ ಅಥ್ಲೀಟ್ಗಳಿಗೆ ನೀಡುವುದಾಗಿ ತಿಳಿಸಿದೆ. ಅಂತೂ, ಒಂದು ಸದುದ್ದೇಶದಿಂದ ಚಿತ್ರ ನಿರ್ಮಾಣವಾಗಿರುವುದೇ ಚಿತ್ರದ ವಿಶೇಷತೆಗಳಲ್ಲೊಂದು.
- ಚೇತನ್ ಓ.ಆರ್.