ಸೆಂಟ್ ಲೂಸಿಯಾ: ವ್ಯತಿರಿಕ್ತ ಹವಾಮಾನ, ಡಕ್ವರ್ತ್/ಲೂಯಿಸ್ ವಿಧಾನ ಹಾಗೂ ಪಾಕ್ನ ಮಧ್ಯಮ ಕ್ರಮಾಂಕ ಬ್ಯಾಟ್ಸ್ಮನ್ಗಳ ಅಬ್ಬರದಿಂದ ಆತಿಥೇಯ ವೆಸ್ಟ್ ಇಂಡೀಸ್ ತಂಡ ಭಾನುವಾರ ಪಾಕಿಸ್ತಾನ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ 6 ವಿಕೆಟ್ಗಳ ಸೋಲನುಭವಿಸಿದೆ.
ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಪಂದ್ಯವನ್ನು 49 ಓವರ್ಗಳಿಗೆ ಸೀಮಿತಗೊಳಿಸಲಾಯಿತು. ಈ ವೇಳೆ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವೆಸ್ಟ್ ಇಂಡೀಸ್ ತಂಡ ಮರ್ಲಾನ್ ಸ್ಯಾಮ್ಯುಯಲ್ಸ್ ಅವರ ಶತಕದ ನೆರವಿನಿಂದಾಗಿ 49 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 261 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಈ ಪಂದ್ಯದಲ್ಲಿ ವಿಂಡೀಸ್ ತಂಡ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೊಂಚ ಬದಲಾವಣೆ ಮಾಡಿತು. ಆರಂಭಿಕರಾಗಿ ಡೆವೊನ್ ಸ್ಮಿತ್ ಹಾಗೂ ಜಾನ್ಸನ್ ಚಾರ್ಲ್ಸ್ ಕಣಕ್ಕಿಳಿದರು. ಈ ಜೋಡಿ ತಂಡಕ್ಕೆ ಕೇವಲ 20ರನ್ಗಳ ಆರಂಭ ನೀಡಲು ಮಾತ್ರ ಶಕ್ತವಾಯಿತು. ಈ ವೇಳೆ 8 ರನ್ ಗಳಿಸಿದ್ದ ಸ್ಮಿತ್, ಮಹಮದ್ ಇರ್ಫಾನ್ಗೆ ವಿಕೆಟ್ ಒಪ್ಪಿಸಿದರು.
ಸ್ಮಿತ್ ಜಾಗಕ್ಕೆ ಬಂದ ಡರೆನ್ ಬ್ರಾವೊ ಸಹ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಕೇವಲ 9 ರನ್ಗಳಿಸಿದ ಡರೆನ್, ವಹಾಬ್ ರಿಯಾಜ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.
ಡರೆನ್ ಔಟಾದ ಬೆನ್ನಲ್ಲೇ ಮತ್ತೊರ್ವ ಆರಂಭಿಕ ಚಾರ್ಲ್ಸ್ 32 ರನ್ ಗಳಿಸಿ ಜುನೈದ್ ಖಾನ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದರು. ಈ ಮೂಲಕ ವಿಂಡೀಸ್ ತಂಡ 63 ರನ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಬಂದ ಸ್ಯಾಮ್ಯುಯಲ್ಸ್ ಹಾಗೂ ಕ್ರಿಸ್ ಗೇಯ್ಲ್ ತಂಡಕ್ಕೆ ಆಸರೆಯಾಗಿ ನಿಂತರು. ಈ ಜೋಡಿ 4ನೇ ವಿಕೆಟ್ಗೆ 57 ರನ್ ಸೇರಿಸಿತು.
ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಗೇಯ್ಲ್ 30 ರನ್ ಗಳಿಸಿ ಅಫ್ರೀದಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸಿಮನ್ಸ್, ಸ್ಯಾಮ್ಯುಯಲ್ಸ್ ಜತೆಗೂಡಿ ಮತ್ತೇ ಇನಿಂಗ್ಸ್ ಕಟ್ಟಲು ಮುಂದಾದರು. ಈ ಜೋಡಿ 5ನೇ ವಿಕೆಟ್ಗೆ 95 ರನ್ಗಳ ಮಹತ್ವದ ಕಾಣಿಕೆ ನೀಡಿತು. ಅಲ್ಲದೆ ವಿಂಡೀಸ್ ತಂಡ 200ರ ಗಡಿ ದಾಟಲು ನೆರವಾಯಿತು.
44 ಎಸೆತಗಳಲ್ಲಿ 46 ರನ್ ಗಳಿಸಿದ್ದ ಸಿಮನ್ಸ್, ಅಜ್ಮಲ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ನಂತರ ಬಂದ ಸಾಮಿ 7, ನಾಯಕ ಡ್ವೈನ್ ಬ್ರಾವೊ 6 ರನ್ ಗಳಿಸಿ ನಿರ್ಗಮಿಸಿದರು. ಆದರೆ ಇನಿಂಗ್ಸ್ ಉದ್ದಕ್ಕೂ ಉತ್ತಮ ಬ್ಯಾಟಿಂಗ್ ಮುಂದುವರಿಸಿದ ಮರ್ಲಾನ್ ಸ್ಯಾಮ್ಯುಯಲ್ಸ್, ಇನಿಂಗ್ಸ್ನ ಕೊನೆ ಓವರ್ನಲ್ಲಿ ಶತಕ ದಾಖಲಿಸಿದರು. ಈ ಮೂಲಕ ಸ್ಯಾಮ್ಯುಯಲ್ಸ್ ತಮ್ಮ ಏಕದಿನ ಕ್ರಿಕೆಟ್ನ 5ನೇ ಶತಕ ದಾಖಲಿಸಿದರಲ್ಲದೇ, ಪಂದ್ಯದಲ್ಲಿ ವಿಂಡೀಸ್ ತಂಡ 261 ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಲು ನೆರವಾದರು. ವಿಂಡೀಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ನಿರೀಕ್ಷಿತ ಆರಂಭ ದೊರೆಯಲಿಲ್ಲ. ಪಾಕ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಸಿರ್ ಜೆಮ್ಷೆಡ್ ಹಾಗೂ ಅಹ್ಮದ್ ಶೆಹಜಾದ್ ತಂಡಕ್ಕೆ ಕೇವಲ 20ರನ್ ಕಲೆ ಹಾಕಿದರು.
ಈ ವೇಳೆ 14 ರನ್ ಗಳಿಸಿದ ಶೆಹಜಾದ್, ಹೊಲ್ಡರ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದರು. ನಂತರ ಮತ್ತೊರ್ವ ಆರಂಭಿಕ ಜೆಮ್ಷೆಡ್ 22 ರನ್ ಗಳಿಸಿದ್ದಾಗ ಚಾರ್ಲ್ಸ್ ಹಾಗೂ ನಾರಾಯಣ್ ಅವರ ಕ್ಷೇತ್ರ ರಕ್ಷಣೆಯಲ್ಲಿ ರನೌಟ್ ಆದರು. ಹೀಗಾಗಿ ಪಾಕಿಸ್ತಾನ ತಂಡ 60 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು.
ಈ ಸಮಯದಲ್ಲಿ ಮತ್ತೆ ಮಳೆ ಸುರಿದ ಪರಿಣಾಮ ಪಂದ್ಯವನ್ನು ಕೆಲವು ಸಮಯದವರೆಗೂ ನಿಲ್ಲಿಸಲಾಗಿತ್ತು. ನಂತರ ಪಂದ್ಯ ಆರಂಭವಾದಾಗ ಪಾಕಿಸ್ತಾನಕ್ಕೆ 31 ಓವರ್ಗಳಲ್ಲಿ 189 ರನ್ ಗಳಿಸಬೇಕಾಯಿತು.
ನಂತರ ಜತೆಯಾದ ಮಹ್ಮದ್ ಹಫೀಜ್ ಹಾಗೂ ಮಿಸ್ಬಾ ಉಲ್ ಹಕ್ ತಂಡಕ್ಕೆ 72 ರನ್ಗಳ ಜತೆಯಾಟ ನೀಡಿದರು. 59 ರನ್ಗಳಿಸಿದ್ದ ಹಫೀಜ್, ರೋಚ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಫ್ರೀದಿ 7 ರನ್ ಗಳಿಸಿ ಔಟಾದರು. ನಂತರ ಬಂದ ಉಮರ್ ಅಕ್ಮಲ್ ಅಜೇಯ 29 ರನ್ ಗಳಿಸಿದರೆ, ನಾಯಕ ಮಿಸ್ಬಾ ಉಲ್ ಹಕ್ ಅಜೇಯ 53 ರನ್ ಗಳಿಸಿದರು. ಈ ಮೂಲಕ ಪಾಕ್ ತಂಡ 30 ಓವರ್ಗಳಲ್ಲಿ 189 ರನ್ ಪೇರಿಸಿ ಇನ್ನು 1 ಓವರ್ ಬಾಕಿ ಇರುವಂತೆಯೇ ಜಯದ ದಡ ಸೇರಿತು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ 261/7 (49 ಓವರ್)
ಸ್ಯಾಮ್ಯುಯಲ್ಸ್ ಅಜೇಯ 106(104)
ಸಿಮನ್ಸ್ 46(44)
ಬೌಲಿಂಗ್: ಇರ್ಫಾನ್ 60/2, ಜುನೈದ್ 39/1
ಪಾಕಿಸ್ತಾನ 189/4 (30 ಓವರ್)
ಹಫೀಜ್ 59(62)
ಮಿಸ್ಬಾ ಅಜೇಯ 53(43)
ಬೌಲಿಂಗ್: ರೋಚ್ 33/1, ಹೊಲ್ಡರ್ 41/1