ಇಂಡಿಯನ್ ಬ್ಯಾಡ್ ಮಿಂಟನ್ ಲೀಗ್?
ಕ್ರಿಕೆಟ್ನಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ಯಶಸ್ಸು ಕಂಡ ನಂತರ, ಎಲ್ಲ ಕ್ರೀಡೆಗಳೂ ಅದೇ ಮಾದರಿಯಲ್ಲಿ ಹೆಜ್ಜೆ ಹಾಕಲು ಯತ್ನಿಸುತ್ತಿರುವುದು, ದೇಶದ ಕ್ರೀಡಾಭಿವೃದ್ಧಿ ದೃಷ್ಟಿಯಿಂದ...
ಕ್ರಿಕೆಟ್ನಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ಯಶಸ್ಸು ಕಂಡ ನಂತರ, ಎಲ್ಲ ಕ್ರೀಡೆಗಳೂ ಅದೇ ಮಾದರಿಯಲ್ಲಿ ಹೆಜ್ಜೆ ಹಾಕಲು ಯತ್ನಿಸುತ್ತಿರುವುದು, ದೇಶದ ಕ್ರೀಡಾಭಿವೃದ್ಧಿ ದೃಷ್ಟಿಯಿಂದ ಉತ್ತಮ ಬೆಳವಣಿಗೆಯೇ ಸರಿ. ಅದರಿಂದ ಕ್ರೀಡಾಪಟುಗಳಿಗೆ ನೆರವಾಗಬೇಕೇ ಹೊರತು, ಅವರ ಸ್ಫೂರ್ತಿಗೆ ಧಕ್ಕೆ ತರಬಾರದು. ಆದರೆ ಇತ್ತೀಚೆಗೆ ನಡೆದ ಐಬಿಎಲ್ ಹರಾಜು ಪ್ರಕ್ರಿಯೆಯಿಂದ ಉಂಟಾಗಿರುವ ಪ್ರಮಾದಗಳು ಆಟಗಾರರು ಆಕ್ರೋಶಗೊಳ್ಳುವಂತೆ ಮಾಡಿವೆ.
ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ಆರಂಭವಾಗಲು ವೇದಿಕೆ ಸಿದ್ಧವಾಗಿದೆ. ಆದರೆ, ಹರಾಜು ಪ್ರಕ್ರಿಯೆಯಲ್ಲಿ ಐಕಾನ್ ಆಟಗಾರರು ಸೇರಿದಂತೆ ಕೆಲವರನ್ನು ಹರಾಜಿನಲ್ಲಿ ಕಡೆಗಣಿಸಿರುವುದು, ಆ ಎಲ್ಲ ಆಟಗಾರರು ಕೋಪಕ್ಕೆ ಕಾರಣವಾಗಿದ್ದು, ಐಬಿಎಲ್ಗೆ ಆರಂಭದಲ್ಲೇ ಅಪಸ್ವರ ಕೇಳಿಬಂದಂತಾಗಿದೆ.
ಗುಟ್ಟಾ-ಪೊನ್ನಪ್ಪ ಕಡೆಗಣನೆ
ಭಾರತದ ಪ್ರಮುಖ ಮಹಿಳಾ ಡಬಲ್ಸ್ ಆಟಗಾರ್ತಿಯರಾದ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಹೈದರಾಬಾದ್ನ ಜ್ವಾಲಾ ಗುಟ್ಟಾ ಅವರನ್ನು ಹರಾಜು ಪ್ರಕ್ರಿಯೆಯಲ್ಲಿ ಅವರ ಮೂಲ ಬೆಲೆಯನ್ನು ಕಡಿತಗೊಳಿಸಿ, ಕಡಿಮೆ ಬೆಲೆಗೆ ಹರಾಜಿನಲ್ಲಿ ಖರೀದಿಸಲಾಗಿತ್ತು. ಇದೇ ಪ್ರಕ್ರಿಯೆ ವಿವಾದದ ಹುಟ್ಟಿಗೆ ಕಾರಣವಾಯಿತು. ಐಕಾನ್ ಆಟಗಾರ್ತಿಯರು ಎಂದು ಗುರುತಿಸಲಾಗಿದ್ದರೂ ಫ್ರಾಂಚೈಸಿಗಳು ನಮ್ಮನ್ನು ಕಡಿಮೆ ಬೆಲೆಗೆ ಖರೀದಿಸಿದವು. ಇದು ನಮಗೆ ಮಾಡಿದ ಅವಮಾನ ಎಂದು ಆಟಗಾರ್ತಿಯರು ಐಬಿಎಲ್ ವಿರುದ್ಧ ಕಿಡಿಕಾರಿದ್ದರು. ಆದರೆ, ಪಂದ್ಯಾವಳಿಯಲ್ಲಿ ಮಹಿಳಾ ಡಬಲ್ಸ್ ಪಂದ್ಯಗಳು ನಡೆಯುವುದಿಲ್ಲ. ಹೀಗಾಗಿ ಆಟಗಾರ್ತಿಯರನ್ನು ಖರೀದಿಸುವವರೇ ಇರಲಿಲ್ಲ. ಆದರೆ, ಮೂಲ ಬೆಲೆಯನ್ನು ಕಡಿಮೆ ಮಾಡಿದ ನಂತರ ಅವರನ್ನು ಖರೀದಿಸಲು ಫ್ರಾಂಚೈಸಿಗಳು ಮುಂದೆ ಬಂದವು ಎಂದು ಸಂಘಟಕರು ಕತೆ ಹೇಳಿದರು.
ಪಂದ್ಯಾವಳಿಯಲ್ಲಿ ಮಹಿಳೆಯರ ಡಬಲ್ಸ್ ವಿಭಾಗಕ್ಕೆ ಅವಕಾಶ ನೀಡದಿರುವುದು ಇನ್ನೊಂದು ವಿವಾದಕ್ಕೆ ಕಾರಣವಾಗಿದೆ. ಆದರೆ, ಭಾರತದಲ್ಲಿ ಮಹಿಳಾ ಬ್ಯಾಡ್ಮಿಂಟನ್ ಡಬಲ್ಸ್ ಸ್ಪರ್ಧೆಗೆ ಅಷ್ಟೊಂದು ಮಹತ್ವ ನೀಡಲಾಗಿಲ್ಲ. ಹೀಗಾಗಿ ಈ ಸ್ಪರ್ಧೆಯನ್ನು ತೆಗೆಯಲಾಗಿದೆ. ಬದಲಾಗಿ ಪುರುಷರ ಸಿಂಗಲ್ಸ್ ಸ್ಪರ್ಧೆಗಳಿಗೆ ಮಹತ್ವ ನೀಡಲಾಗಿದೆ ಎಂದು ಸಂಘಟಕರು ಸಮರ್ಥನೆ ಮಾಡಿಕೊಂಡಿದ್ದಾರೆ.
ಪ್ರದ್ನ್ಯಾಗ್ಯಾಕೆ ದೊಡ್ಡ ಮೊತ್ತ?
ಹೀಗೆ ಸಂಘಟಕರು ಹೇಳಿಕೆ ನೀಡುತ್ತಿದ್ದಂತೆ ಹುಟ್ಟಿಕೊಂಡ ಹೊಸ ಪ್ರಶ್ನೆ ಎಂದರೆ, ಐಕಾನ್ ಆಟಗಾರ್ತಿಯರಿಗಿಂತ ಕಡಿಮೆ ಸಾಧನೆ ಮತ್ತು ಜನಪ್ರಿಯತೆ ಹೊಂದಿದ ಪ್ರದ್ನ್ಯಾ ಗಾದ್ರೆಗೆ ಎರಡರಷ್ಟು ಮೊತ್ತ ನೀಡಿದ್ದು. ಹೌದು, ಹರಾಜಿನಲ್ಲಿ ಪ್ರದ್ನ್ಯಾ ಗಾದ್ರೆ ಹೆಸರಿನ ಕೆಳಗೆ ಅಶ್ವಿನಿ ಪೊನ್ನಪ್ಪ ಅವರ ಸಾಧನೆಯ ಪಟ್ಟಿಯನ್ನು ಸೇರಿಸಲಾಗಿದೆ. ಈ ಪ್ರಮಾದ ಹೇಗಾಯಿತು ಎಂಬುದು ಇದುವರೆಗೂ ಬಹಿರಂಗವಾಗಿಲ್ಲ.
ಮುಂದೂಡಲಾಗಿದ್ದ ಹರಾಜು ಪ್ರಕ್ರಿಯೆ
ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾವಳಿಯ ಹರಾಜು ಪ್ರಕ್ರಿಯೆ ಮೊದಲು ಜೂನ್ 30ಕ್ಕೆ ನಿಗದಿಯಾಗಿತ್ತು. ಕಾರಣಾಂತರಗಳಿಂದ ಜುಲೈ 19ಕ್ಕೆ ಮುಂದೂಡಲಾಯಿತು. ನಂತರ ಸಿದ್ಧತೆ ಮಾಡಿಕೊಳ್ಳಲು ಸಮಯ ಬೇಕಾಗಿರುವುದರಿಂದ ಹರಾಜು ಪ್ರಕ್ರಿಯೆಯನ್ನು ಮತ್ತೆ ಎರಡು ದಿನಗಳ ಕಾಲ ಮುಂದೂಡಲು ಕೆಲ ಫ್ರಾಂಚೈಸಿಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜುಲೈ 22ಕ್ಕೆ ಮುಂದೂಡಲಾಗಿತ್ತು. ಎರಡು ಬಾರಿ ಹರಾಜು ಪ್ರಕ್ರಿಯೆ ಮುಂದೂಡಿದರೂ ಇಷ್ಟೊಂದು ಗೊಂದಲಗಳು ಪಂದ್ಯಾಳಿಗೆ ಕಪ್ಪು ಚುಕ್ಕೆ ಮೂಡಿಸಿವೆ.
ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಅವರ ಮೂಲ ಬೆಲೆಯನ್ನು ಮಾತ್ರ ಕಡಿಮೆ ಮಾಡಿಲ್ಲ. ಸಾನವೆ ಥಾಮಸ್, ಅಜಯ್ ಜಯರಾಮ್, ರೂಪೇಶ್ ಕುಮಾರ್ ಹಾಗೂ ಅನೂಪ್ ಶ್ರೀಧರ್ ಅವರ ಮೂಲ ಬೆಲೆಯನ್ನು ಕಡಿ ಮಾಡಿರುವುದು ಆ ಎಲ್ಲ ಆಟಗಾರರ ಕಂಗೆಣ್ಣಿಗೆ ಗುರಿಯಾಗಿದೆ.
ಐಪಿಎಲ್ ಜನಪ್ರಿಯವಾದ ನಂತರ ಅದೇ ಮಾದರಿಯ ಪಂದ್ಯಾವಳಿಗಳೂ ದೇಶದ ಎಲ್ಲ ಕ್ರೀಡೆಗಳಲ್ಲೂ ಹುಟ್ಟಿಕೊಳ್ಳುತ್ತಿವೆ. ಆದರೆ, ಐಪಿಎಲ್ಗೆ ದೊರತೆಷ್ಟು ಯಶಸ್ಸು ಉಳಿದ ಕ್ರೀಡೆಗಳಿಗೆ ದೊರೆಯುವುದೇ ಎಂಬ ಅನುಮಾನ ಕ್ರೀಡಾ ಅಭಿಮಾನಿಗಳನ್ನು ಕಾಡುತ್ತಿದೆ. ಐಪಿಎಲ್ಗೆ ಸಿಕ್ಕ ಅರ್ಧ ಯಶಸ್ಸಾದರೂ ಇತರ ಕ್ರೀಡೆಗಳಿಗೆ ದೊರಕುವುದೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
- ಎಂಬಿಕೆ