ಕ್ರೀಡೆ

ಕೂಲ್ ಮಗಾ

ಮೂರನೇ ಕ್ರಮಾಂಕದಲ್ಲಿ ಕಣ್ಣರಳಿಸುವಂತೆ ಬ್ಯಾಟ್ ಬೀಸಬಲ್ಲ ಪ್ರತಿಭಾವಂತ ಹುಡುಗನನ್ನು ಭಾರತಕ್ಕೆ ಭಾರತವೇ ಮೂಗಿನ ಮೇಲೆ ಬೆರಳಿಟ್ಟು ನೋಡಿತ್ತು. ..

ಮೂರನೇ ಕ್ರಮಾಂಕದಲ್ಲಿ ಕಣ್ಣರಳಿಸುವಂತೆ ಬ್ಯಾಟ್ ಬೀಸಬಲ್ಲ ಪ್ರತಿಭಾವಂತ ಹುಡುಗನನ್ನು ಭಾರತಕ್ಕೆ ಭಾರತವೇ ಮೂಗಿನ ಮೇಲೆ ಬೆರಳಿಟ್ಟು ನೋಡಿತ್ತು. ನೋಡುನೋಡುತ್ತಿರುವಂತೆಯೇ  ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ನಾಯಕನ ಪಟ್ಟವೇರಿ ಕುಳಿತ ಈ ಚಿಗುರು ಮೀಸೆಯ ಯುವಕ ಇಂದು ಟೀಂ ಇಂಡಿಯಾ ಉಪನಾಯಕ. ಆತನ ಪ್ರತಿಭೆಯನ್ನು ತೂಗಿ ಅಳೆದಿರುವ ಭಾರತೀಯರಿಗೆ ಇದೇನೂ ಅನಿರೀಕ್ಷಿತವಲ್ಲ. ಆದರೆ ಆತನಿಂದ ದೀರ್ಘ ಕಾಲೀನ ಕ್ರಿಕೆಟ್ ನಿರೀಕ್ಷಿಸುತ್ತಿರುವವರಿಗೆ ಮೈದಾನದಲ್ಲಿ ಆತನ ಕೋಪತಾಪಗಳು ಮಾತ್ರ ಅಚ್ಚರಿ ಮೂಡಿಸಿವೆ.

ಇದೇ ಮೊದಲಲ್ಲ...
19 ವರ್ಷದೊಳಗಿನವರ ತಂಡದಿಂದಲೇ ಭವಿಷ್ಯದ ತಾರೆ ಎಂದು ಗುರುತಿಸಿಕೊಂಡ ಕೊಹ್ಲಿಗೆ ಅದನ್ನು ಸಾಬೀತು ಪಡಿಸಲು ಹೆಚ್ಚು ಸಮಯ ಬೇಕಾಗಲಿಲ್ಲ. ಶತಕಗಳ ಮೇಲೆ ಶತಕ ಬಾರಿಸಿದ ಈ ಬಿಸಿ ರಕ್ತದ ತರುಣ ಮೈದಾನದಲ್ಲಿ ಬಿಸಿ ಮಾತುಗಳಿಂದಲೇ ಸುದ್ದಿಯಾದದ್ದು ಮಾತ್ರ ಕ್ರಿಕೆಟ್ ಪ್ರಿಯರು ಮೆಚ್ಚುವಂಥಾದ್ದಲ್ಲ.
ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡುವುದೆಂದರೆ ಯಾರಿಗೂ ಸುಲಭದ ಮಾತಲ್ಲ. ಅಲ್ಲಿನ ಕ್ರಿಕೆಟಿಗರೊಂದಿಗೆ, ಮಾಧ್ಯಮಗಳು, ಪ್ರೇಕ್ಷಕರೂ ಮೈಂಡ್ ಗೇಮ್‌ನಲ್ಲಿ ಭಾಗಿಯಾಗುತ್ತಾರೆ. ಸಚಿನ್, ದ್ರಾವಿಡ್, ಲಕ್ಷ್ಮಣ್ ಇಂತಹ ಸಂದರ್ಭಗಳನ್ನು ಎದುರಿಸಿದ್ದು, ಆದರೆ ಅವರೆಲ್ಲರೂ ಬ್ಯಾಟ್‌ನಿಂದಲೇ ಉತ್ತರ ನೀಡಿದರು. ಕಾಂಗರೂಗಳು ಇವರ ಸಹನೆಯನ್ನು ಕೆಣಕಿದರೂ ಇವರು ಸಹಿಸುತ್ತಲೇ ಅವರ ನಿದ್ದೆಗೆಡಿಸಿದರು.
ಹರ್ಭಜನ್‌ನಂಥಾ ಕೆಲವು ಆಟಗಾರರು ಮಾತ್ರ ಬಾಯಿ ಮಾತಿನಿಂದ ಉತ್ತರಿಸಲು ಹೋಗಿ ವಿವಾದಗಳಲ್ಲಿ ಸಿಲುಕಿಕೊಂಡರು. ಕೊಹ್ಲಿಯೂ ಆಸ್ಟ್ರೇಲಿಯಾದ ಸಿಡ್ನಿ ಟೆಸ್ಟ್‌ನಲ್ಲಿ ಪ್ರೇಕ್ಷಕರ ವಿರುದ್ಧ ಮಾತನಾಡಲು ಹೋಗಿ ದಂಡ ತೆತ್ತಿದ್ದ.  ಇದು ಇಲ್ಲಿಗೇ ನಿಲ್ಲಲಿಲ್ಲ. ಐಪಿಎಲ್ ಮ್ಯಾಚ್‌ನಲ್ಲಿ ಕೋಲ್ಕತಾ ತಂಡದ ಗಂಭೀರ್ ವಿರುದ್ಧವೂ ಕಿಡಿಕಾರಿದ. ನೆನಪಿಡಿ, ಗಂಭೀರ್ ಸಹ ಟೀಂ ಇಂಡಿಯಾ ಕಂಡ ಪ್ರತಿಭಾವಂತ ಮಾತ್ರವಲ್ಲ ವಿರಾಟ್‌ಗಿಂತ ಹಿರಿಯ ಆಟಗಾರನೂ ಹೌದು. ಮುಂಬೈ ಪ್ರೇಕ್ಷಕರ ಜೊತೆಗೂ ಮುನಿಸಿಕೊಂಡ. ಇದೀಗ ಜಿಂಬಾಬ್ವೆಯಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಸೆಟೆದು ನಿಂತು ಅನವಶ್ಯಕ ವಿವಾದಕ್ಕೊಳಗಾಗಿದ್ದಾನೆ.
ಕೊಹ್ಲಿ ಚೆನ್ನಾಗಿ ಆಡುತ್ತಾನೆ. ಆದರೆ ಅನವಶ್ಯಕವಾಗಿ ಕೋಪಿಸಿಕೊಳ್ಳುತ್ತಾನೆ. ಗೆದ್ದಾಗ ಅತಿಯಾಗಿ ಸಂಭ್ರಮಿಸುತ್ತಾನೆ. ಸೋತಾಗ ಸ್ಥಿತಪ್ರಜ್ಞನಾಗಿರುವುದು ಬಿಟ್ಟು ಅನಗತ್ಯ ನಿರಾಸೆ ತೋರ್ಪಡಿಸುತ್ತಾನೆ. ಅನಗತ್ಯ ಜಗಳ ತೆಗೆಯುತ್ತಾನೆ. ಈ ಕೋಪ, ಈ ತಾಪ, ಸಿಟ್ಟು, ಸೆಡವು ಒಂದು ಹಂತದಲ್ಲಿದ್ದರೆ ಚೆನ್ನ. ಅದು ಮಿತಿಮೀರಿತೆಂದರೆ ಮನುಷ್ಯನ ಅಷ್ಟೂ ಸಾಧನೆಗಳನ್ನು ನಿಮಿಷಾರ್ಧದಲ್ಲಿ ಮೆಟ್ಟಿ ಹಾಕುತ್ತದೆ. ಸಿಟ್ಟಿನ ದುಷ್ಪರಿಣಾಮಗಳೇನು ಎಂದು ತಿಳಿಯಬೇಕಾದರೆ, ನವಜ್ಯೋತ್ ಸಿಂಗ್ ಸಿದ್ದು ಅವರ ಜೀವನ ಚರಿತ್ರೆಯನ್ನು ತೆಗೆದು ನೋಡಿದರೆ ಸಾಕು. ತನ್ನ ಮಾರಕ ಹೊಡೆತಗಳೊಂದಿಗೆ ವಿಶಿಷ್ಟ ತಾಂತ್ರಿಕತೆಗೆ ಹೆಸರಾಗಿದ್ದ ಸಿಕ್ಸರ್ ಸಿದ್ದು ಸಿಟ್ಟಿನಿಂದಾಗಿಯೇ ಬಹಳಷ್ಟನ್ನು ಕಳೆದುಕೊಂಡರು.
ಕೊಹ್ಲಿ ಇದೇ ರೀತಿ ಬ್ಯಾಟ್ ಬೀಸುತ್ತಿದ್ದರೆ, ಸಚಿನ್ ಅವರ ಎಲ್ಲಾ ದಾಖಲೆಗಳನ್ನು ಅಳಿಸುವ ಸಾಮರ್ಥ್ಯ ಇದೆ. ಸಿಟ್ಟಿನಿಂದ ಏನೂ ಮಾಡಲಾಗದು. ಕೂಲಾಗಿದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ಕಲಿಯಲು ಧೋನಿಗಿಂತ ಉತ್ತಮ ಉದಾಹರಣೆ ಬೇಕೆ? ಸ್ಥಿತಪ್ರಜ್ಞೆ, ಕೂಲ್ ಕ್ಯಾಪ್ಟನ್ ಧೋನಿಯಿಂದ ಎಳೆಯ ಕೊಹ್ಲಿ ಕಲಿಯಬೇಕಾದ್ದು ಬಹಳಷ್ಟಿದೆ. ಉಪ ಕಪ್ತಾನ ಪಟ್ಟಕ್ಕೇರಿರುವ ಕೊಹ್ಲಿಯಿಂದ ಭಾರತೀಯರು ನಿರೀಕ್ಷಿಸುತ್ತಿರುವುದು ಅದನ್ನೇ.

ಸಿಟ್ಯಾಕೊ ಸಿಡುಕ್ಯಾಕೊ ಹುಡುಗಾ?
ಜಿಂಬಾವ್ವೆ ವಿರುದ್ಧದ ಸರಣಿಯ ಎರಡನೇ ಏಕದಿನ ಪಂದ್ಯಗಳಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಭಾರತೀಯ ಕಪ್ತಾನ ವಿರಾಟ್ ಕೊಹ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು ದೊಡ್ಜ ಸುದ್ದಿಯಾಗಿದೆ. ಆಕರ್ಷಕ ಆಟದಷ್ಟೇ ಮೈದಾನದಲ್ಲಿನ ಜಗಳಗಳಿಗೂ ಕೊಹ್ಲಿ ಹೆಸರಾಗುತ್ತಿದ್ದಾರೆ.

- ಗಣೇಶ್ ಪ್ರಸಾದ್ ಕುಂಬ್ಳೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!