ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ತೆರೆ ಮೇಲೆ ಮೇರಿ

ತನ್ನ ಝಗಮಗಿಸುವ ಗ್ಲಾಮರ್ ನಡುವೆಯೂ ಸದಾ ಪ್ರಯೋಗಶೀಲತೆಯತ್ತ ಮುಖ ಮಾಡಿ ನಿಲ್ಲುವ ಬಾಲಿವುಡ್ ಈಗ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದೆ. ಭಾರತೀಯ ...

Rashmi Kasaragodu
Updated On : 30 Jul 2013, 7:27 am

ತನ್ನ ಝಗಮಗಿಸುವ ಗ್ಲಾಮರ್ ನಡುವೆಯೂ ಸದಾ ಪ್ರಯೋಗಶೀಲತೆಯತ್ತ ಮುಖ ಮಾಡಿ ನಿಲ್ಲುವ ಬಾಲಿವುಡ್ ಈಗ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದೆ. ಭಾರತೀಯ ಬಾಕ್ಸಿಂಗ್‌ನಲ್ಲಿ ತಮ್ಮದೇ ಸಾಧನೆ ಮಾಡಿರುವ ಮೇರಿ ಕೋಮ್ ಅವರ ಬಗ್ಗೆ ಹೊಸತೊಂದು ಚಿತ್ರ ನಿರ್ಮಾಣವಾಗುತ್ತಿದ್ದು, ಈ ಚಿತ್ರ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಬಾಲಿವುಡ್‌ನ ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ ಇಲ್ಲಿ ಮೇರಿ ಕೋಮ್ ಅವರ ಪಾತ್ರವನ್ನು ಮಾಡುತ್ತಿದ್ದಾರೆ.

ಮಿಲ್ಖಾ ನಂತರ ಮೇರಿ...
ಇತ್ತೀಚೆಗೆ ತೆರೆ ಕಂಡ ಭಾರತದ ಮಾಜಿ ಓಟಗಾರ ಮಿಲ್ಖಾ ಸಿಂಗ್ ಕುರಿತ ಚಿತ್ರ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದು, ಈಗ ಯುವ ಓಲಿಂಪಿಕ್ಸ್ ತಾರೆ ಮೇರಿ ಕೋಮ್ ಕುರಿತಾದ ಚಿತ್ರ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ಈಶಾನ್ಯ ಭಾರತದಿಂದ ಹೊರಬಂದ ಪ್ರತಿಭೆ ಮೇರಿ ಕೋಮ್, ಒಲಿಂಪಿಕ್ಸ್‌ವರೆಗೆ ಸಾಗಿಬಂದ ಹಾದಿಯೇ ಒಂದು ದೊಡ್ಡ ಸಾಧನೆ. ಅಷ್ಟೇ ಅಲ್ಲ, ಬಾಕ್ಸಿಂಗ್‌ನಲ್ಲಿ ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದಂತೂ ಒಂದು ರೋಮಾಂಚಕ ಅನುಭವ. ಕ್ರೀಡೆ ಹಾಗೂ ಮಹಿಳೆ - ಇಬ್ಬರೂ ಅಷ್ಟಕ್ಕಷ್ಟೇ ಎನ್ನುವಂಥಾ ದೇಶದಲ್ಲಿ ಆಕೆ ಮಾಡಿದ ಸಾಧನೆ ಅಪ್ರತಿಮವಾದದ್ದು. ಇದೇ ಈಗ ಬಾಲಿವುಡ್ ಮಂದಿಗೆ ಸಿನಿಮಾ ಸಬ್ಜೆಕ್ಟ್ ಆಗಿದೆ.
ಆದರೆ, ಮೇರಿ ಕೋಮ್ ಬಗ್ಗೆ ಸಿನಿಮಾ ಮಾಡೋದು ಅಷ್ಟು ಸುಲಭವಲ್ಲ. ಮೇರಿ ಕೋಮ್ ಮಾತ್ರವಲ್ಲ, ಯಾವುದೇ ಸಾಧಕರ ಬಗ್ಗೆ ಸಿನಿಮಾ ಮಾಡೋದು ಅಂದ್ರೆ ಅದೊಂದು ಚಾಲೆಂಜಿಂಗ್ ಆಗಿರುತ್ತೆ. ಏಕೆಂದರೆ, ಕಮರ್ಷಿಯಲ್ ಚೌಕಟ್ಟಿನಲ್ಲೇ ಮಾಡಬೇಕಾದ ಚಿತ್ರ ಸ್ವಲ್ಪ ಯಾಮಾರಿದರೂ ಸಾಕ್ಷ್ಯಚಿತ್ರವಾಗಿ ಬಿಡುವ ಅಪಾಯವಿರುತ್ತದೆ. ಹಾಗಾಗಿ, ಸಿನಿಮಾವನ್ನು ಅಚ್ಚುಕಟ್ಟಾಗಿಸಬೇಕು. ಹಾಗೆಂದು ಚಿತ್ರವನ್ನು ಸಿಕ್ಕಾಪಟ್ಟೆ ಕಮರ್ಷಿಯಲ್ ಮಾಡಲು ಮುಂದಾದರೂ, ಅದು ಚಿತ್ರದ ನೈಜ ಉದ್ದೇಶವನ್ನೇ ಹಾಳುಗೆಡವಬಹುದು. ಈ ಎಲ್ಲಾ ದೃಷ್ಟಿಕೋನಗಳಿಂದ ಚಿತ್ರವನ್ನು ಮುತುವರ್ಜಿಯಿಂದ ಗಮನಿಸಿ ಕೆಲಸ ಮಾಡಲು ಬುದ್ಧಿವಂತ ನಿರ್ದೇಶಕನೇ ಬೇಕು. ಈಗ ಮೇರಿ ಕೋಮ್ ಚಿತ್ರಕ್ಕೂ ಅಂಥಾ ಬುದ್ಧಿವಂತ ನಿರ್ದೇಶನೊಬ್ಬರ ಸಾರಥ್ಯ ಸಿಕ್ಕಿದೆ. ಅದು ಸಂಜಯ್ ಲೀಲಾ ಬನ್ಸಾಲಿ.
2005ರಲ್ಲಿ ಹೊರಬಂದ ಚಿತ್ರಗಳಲ್ಲಿ ವಿಶ್ವದ ಟಾಪ್ 10 ಮೂವಿಗಳಲ್ಲಿ ಐದನೇ ಸ್ಥಾನ ಪಡೆದಿದ್ದ 'ಬ್ಲ್ಯಾಕ್‌' ಚಿತ್ರವನ್ನು ನೀಡಿದ್ದ ಬನ್ಸಾಲಿ, ಈಗ ಮೇರಿ ಕಥೆಗೆ ಸಾಣೆ ಹಿಡಿಯಲು ಹೊರಟಿದ್ದಾರೆ. ಮೇರಿ ಎಂಬ ಈ ರಿಯಲ್ ಲೈಫ್ ಸಾಧಕಿಯನ್ನು ಸೆಲ್ಯೂಲಾಯ್ಡ್‌ನಲ್ಲಿ ಹೇಗೆ ತೋರಿಸ್ತಾರೋ ಎಂಬ ಕುತೂಹಲ ಸಿನಿ ರಸಿಕರಿಗೆ ಇದ್ದೇ ಇದೆ.

- ಚೇತನ್ ಓ.ಆರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement