ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕುಮಾರ ಪರ್ವ

ಬೌಲಿಂಗ್‌ನಲ್ಲಿ ವೆಂಕಟೇಶ್ ಪ್ರಸಾದ್‌ರ ಶೈಲಿಯನ್ನೇ ಹೋಲುವ ವಿನಯಕುಮಾರದ್ದು...

Mainashree
Updated On : 5 Jun 2013, 11:44 am

ಅದೊಂದು ಕಾಲವಿತ್ತು. ಭಾರತೀಯ ಕ್ರಿಕೆಟ್ ಟೀಮ್‌ನಲ್ಲಿ ಅರ್ಧದಷ್ಟು ಆಟಗಾರರು ಕರ್ನಾಟಕದವರೇ ಇರುತ್ತಿದ್ದರು! ಆದರೆ ಈಗ ಒಬ್ಬರೂ ಆಯ್ಕೆಯಾಗುವುದು ಕಷ್ಟವಾಗಿದೆ. ಇಂಥ ಪರಿಸ್ಥಿತಿ ಇರುವಾಗ 'ದಾವಣಗೆರೆ ಎಕ್ಸ್‌ಪ್ರೆಸ್‌' ವಿನಯಕುಮಾರ್ ತಂಡಕ್ಕೆ ಆಯ್ಕೆಯಾದರು. ಆಗ ಕನ್ನಡಿಗರಿಗೆ ತುಸು ಹೆಮ್ಮೆಯ ಭಾವ. ಹಾಗೆ ನೋಡಿದರೆ, ವಿನಯಕುಮಾರ್ ಅಬ್ಬಬ್ಬಾ ಎನಿಸುವಂಥ ವೇಗದ ಬೌಲರೇನೂ ಅಲ್ಲ. ಆದರೆ, ತೀರಾ ನಿಧಾನಗತಿಯ ದಾಳಿಕಾರನೂ ಅಲ್ಲ. ಬೌಲಿಂಗ್‌ನಲ್ಲಿ ಕರ್ನಾಟಕದವರೇ ಆದ ವೆಂಕಟೇಶ್ ಪ್ರಸಾದ್‌ರ ಶೈಲಿಯನ್ನೇ ಹೋಲುವ ವಿನಯಕುಮಾರದ್ದು ಯಾವಾಗಲೂ ವಿಕೆಟ್ ಮೇಲೆ ಕಣ್ಣು.
2010 ಜಿಂಬಾಬ್ವೆ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ ವಿನಯ್, ತಾವಾಡಿದ ಪಂದ್ಯದಲ್ಲಿ 2 ವಿಕೆಟ್ ಪಡೆದು ಗಮನ ಸೆಳೆದರು. ಆದರೆ, ಅದೃಷ್ಟ ಕೈಕೊಟ್ಟಿತು. ಗಾಯಾಳುವಾಗಿ ತಂಡದಿಂದ ಹೊರಗುಳಿಯಬೇಕಾಯಿತು. ಮುಂದೆ ಭಾರತೀಯ ತಂಡ ಏಕದಿನ ಕ್ರಿಕೆಟ್ ಪಂದ್ಯಾವಳಿಗೆ ಶ್ರೀಲಂಕಾಗೆ ಪ್ರಯಾಣ ಬೆಳೆಸಿದಾಗ ವಿನಯಕುಮಾರ್ ತಂಡದಲ್ಲಿದ್ದರು. ಆದರೆ, ಆ ಪ್ರವಾಸ ಅವರಿಗೆ ಅಷ್ಟೊಂದು ಯಶಸ್ಸು ತರಲಿಲ್ಲ. ಹಾಗಾಗಿ, ವಿನಯಕುಮಾರ್ ಮತ್ತೆ ತೆರೆಮರೆಗೆ ಸರಿಯಬೇಕಾಯಿತು.
2011ರಲ್ಲಿ ಐಪಿಎಲ್‌ನ ಕೊಚ್ಚಿ ಟಸ್ಕರ್ ತಂಡ ಸೇರಿ ಆಡಿದರು. ಇದಕ್ಕೂ ಮೊದಲು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ಆಡಿದ್ದರು. ಇದೇ ಸಮಯದಲ್ಲಿ ವೆಸ್ಟ್‌ಇಂಡೀಸ್ ಹಾಗೂ ಇಂಗ್ಲೆಂಡ್‌ಗೆ ಏಕದಿನ ಪಂದ್ಯಾವಳಿ ಆಡಲು ತೆರಳಿದ್ದ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದರು. ಈ ಎರಡೂ ಪ್ರವಾಸದಲ್ಲಿ ಸಮಾಧಾನಕರ ಪ್ರದರ್ಶನ ನೀಡಿದ ವಿನಯಕುಮಾರ್ ಆಸ್ಟ್ರೆಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ ಆಡಲು ಭಾರತೀಯ ತಂಡಕ್ಕೆ ಆಯ್ಕೆಯಾದರು. ವಿಶೇಷ ಎಂದರೆ ಮತ್ತೊಬ್ಬ ವೇಗದ ಬೌಲರ್ ವರುಣ್ ಅರೋನ್ ಬದಲಿಗೆ ವಿನಯ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ಜೀವನವನ್ನು ವಿನಯ್ ಆರಂಭಿಸಿದರು. ಈ ಪಂದ್ಯದಲ್ಲಿ ಕೇವಲ ಮೈಕೆಲ್ ಹಸ್ಸಿಯ ವಿಕೆಟ್ ಪಡೆಯಲು ಮಾತ್ರ ಸಫಲರಾದರು. 'ವೇಗಿಗಳ ಸ್ವರ್ಗ' ಪರ್ತ್‌ನಲ್ಲಿ ವೇಗದ ಬೌಲರ್ ಆಡುವುದು ತುಂಬಾ ಖುಷಿಯ ವಿಚಾರ. ಆದರೆ, ವಿನಯ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲಾಗಿದ್ದು ತುಸು ಬೇಸರದ ಸಂಗತಿ. ಅಲ್ಲದೆ, ಮತ್ತೆ ತೆರೆಮರೆಗೆ ಸರಿಯಬೇಕಾಯಿತು.
ಕೆಲ ವೇಳೆ ಎಲ್ಲ ಪ್ರತಿಭೆ ಇದ್ದೂ ಆಟಗಾರರ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಾರೆ. ಇದೇ ಪರಿಸ್ಥಿತಿ ವಿನಯಕುಮಾರ್ ಕೂಡಾ ಎದುರಿಸಬೇಕಾಯಿತು. ಆದರೆ, 2013ರ ಐಪಿಎಲ್ ಎಷ್ಟೇ ವಿವಾದಕ್ಕೀಡಾದರೂ ವಿನಯ್ ಪಾಲಿಗೆ ಅದೃಷ್ಟ ತಂದು ಕೊಟ್ಟಿದ್ದು ಮಾತ್ರ ಸುಳ್ಳಲ್ಲ. ಯಾಕೆಂದರೆ, ಈ ಟೂರ್ನಿಯಲ್ಲಿ ವಿನಯ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ವೇಗದ ದಾಳಿಯ ನೇತೃತ್ವ ವಹಿಸಿದ್ದ ವಿನಯ್, ನಿರಾಸೆ ಮಾಡಲಿಲ್ಲ. ಅತ್ಯುತ್ತಮ ಪ್ರದರ್ಶನ ನೀಡಿ, ಒಟ್ಟು 23 ವಿಕೆಟ್ ಪಡೆದಿದ್ದಾರೆ. ಭಾರತೀಯ ಬೌಲರ್‌ಗಳಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಹರ್ಭಜನ್ ಸಿಂಗ್ 24 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಹಾಗಾಗಿಯೇ ಮತ್ತೆ ವಿನಯ್ ಇದೀಗ, ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಚಾಂಪಿಯನ್ ಟ್ರೋಫಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.  ಭಾರತೀಯ ಕ್ರಿಕೆಟ್ ತಂಡದಲ್ಲಿ ಕನ್ನಡಿಗರಿಲ್ಲ ಎಂಬ ಕೊರಗನ್ನು ಅವರು ತುಂಬಿದ್ದಾರೆ. ಚಾಂಪಿಯನ್ ಟ್ರೋಫಿಯಲ್ಲಿ ವಿನಯ್‌ಗೆ ಅವಕಾಶ ಸಿಕ್ಕಿದ್ದು ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಷಯ.
ಆಲ್ ದಿ ಬೆಸ್ಟ್ ವಿನಯ್.

- ಶೋಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement