ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರೋಜರ್ ಹೂವು

Mainashree
Updated On : 4 Jun 2013, 6:56 am

ಒಬ್ಬ ಟೆನಿಸಿಗ ತನ್ನ ಜೀವಿತಾವಧಿಯಲ್ಲಿ ಇಷ್ಟೆಲ್ಲಾ ಸಾಧಿಸಲು ಸಾಧ್ಯನಾ? ಬಹುಶಃ ರೋಜರ್ ಫೆಡರರ್ ಅವರಿಂದ ಮಾತ್ರ ಸಾಧ್ಯ. ಡೋಪಿಂಗ್, ಮೋಸದಾಟ, ದುರಾಸೆ, ಸೌಹಾರ್ದರಹಿತ ನೀತಿಗಳಿಂದಾಗಿ ದಾರಿ ಕರಾಳವಾಗಿ ಗೋಚರಿಸುತ್ತಿರುವ ಕ್ರೀಡಾ ಬಾಂದಳದಲ್ಲಿ ಪ್ರಖರವಾಗಿ ಮಿನುಗುತ್ತಿರುವ ನಕ್ಷತ್ರ ರೋಜರ್.
ತೀವ್ರ ಪೈಪೋಟಿಯಿರುವ ಟೆನಿಸ್ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಮಿಂಚುತ್ತಿರುವ ಫೆಡ್, ಒಂದೇ ಒಂದು ಬಾರಿ ಗಾಯಾಳುವಾಗಿಲ್ಲ. ಒಂದು ಬಾರಿಯೂ ಅನಾರೋಗ್ಯ ಎಂದು ಕಣದಿಂದ ಹೊರಗೆ ಉಳಿದಿಲ್ಲ. ಯಾವುದೇ ವಿವಾದದಲ್ಲೂ ಸಿಲುಕೊಂಡಿಲ್ಲ. ಹಾದಿಯಲ್ಲಿ ಸಿಕ್ಕ ಯಾವ ಎದುರಾಳಿಯ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ಯಾಕೆಂದರೆ ನಡಾಲ್, ಜೊಕೊವಿಚ್, ಆ್ಯಂಡಿ ಮರ್ರೆ ಮೊದಲಾದ ಯಾವ ಪ್ರಬಲ ಟೆನಿಸಿಗರು ಫೆಡ್ ಎದುರು ಎಷ್ಟೇ ಬಾರಿ ಗೆದ್ದರೂ ಫೆಡ್ ಸಾಮರ್ಥ್ಯವಾಗಲೀ, ಕ್ಷಮತೆಯಾಗಲೀ ಒಂದಿಂಚೂ ಕುಂದಿಲ್ಲ. ಆತನ ದಾಖಲೆಗಳೇ ಇದನ್ನು ಸಾರಿ ಹೇಳುತ್ತಿವೆ. ಹೌದು ಈಗಾಗಲೇ 17 ಗ್ರಾನ್‌ಸ್ಲ್ಯಾಮ್‌ಗಳೊಂದಿಗೆ ಟೆನಿಸ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂಬ ಅಭಿದಾನ ಪಡೆದಿರುವ ಫೆಡ್‌ಗೆ ಇದೀಗ ನಡೆಯುತ್ತಿರುವ ಫ್ರೆಂಚ್ ಓಪನ್, ನಿರಂತರ 52ನೇ ಪ್ರಮುಖ ಪಂದ್ಯಾವಳಿ. 2000ದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನಿಂದ ಈವರೆಗೂ ಯಾವ ಪ್ರಮುಖ ಪಂದ್ಯಾವಳಿಯನ್ನೂ ಫೆಡರರ್ ತಪ್ಪಿಸಿಕೊಂಡಿಲ್ಲ.  ಹೀಗಾಗಿ ಟೆನಿಸ್ ರಂಗದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಯಾರು ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟ.
ನೆನಪಿಡಿ, ಫೆಡರರ್‌ಗೆ ಇನ್ನೂ 31 ವರ್ಷ. ಅಷ್ಟರಲ್ಲೇ ದಂತ ಕಥೆಯೆನ್ನಿಸಿಕೊಂಡಿರುವ ಸ್ವಿಜ್ಜರ್ಲೆಂಡ್‌ನ ಯುವಕನನ್ನು ಇತರ ಶ್ರೇಷ್ಠ ಟೆನಿಸ್ ಆಟಗಾರರೊಂದಿಗೆ ಹೋಲಿಸಿ ನೋಡಿದಾಗ ಗೋಚರಿಸುವ ಅಂಶ ಈತ ನಿಜಕ್ಕೂ ಉಕ್ಕಿನ ಮನುಷ್ಯ. ಸುಲಭದಲ್ಲಿ ಸೋಲಪ್ಪದ ದಣಿವರಿಯದ ಸರದಾರ.
1938ರಲ್ಲಿ ಡಾನ್ ಬಡ್ಜ್ ಅಥವಾ 1962 ಹಾಗೂ 1969ರಲ್ಲಿ ರಾಡ್ ಲೇವರ್ ಥರ ಒಂದೇ ವರ್ಷದಲ್ಲಿ ಫೆಡ್ ನಾಲ್ಕು ಗ್ರಾನ್ ಸ್ಲ್ಯಾಮ್‌ಗಳನ್ನು ಗೆಲ್ಲದಿರಬಹುದು. ಆದರೆ ಟೆನಿಸ್ ಬಗೆಗಿನ ಆತನ ಹಪಾಹಪಿ ಇನ್ನೂ 18ರ ತರುಣನಂತೆಯೇ ಇದೆ. ಟೆನಿಸ್ ಸ್ಪರ್ಧೆ ಯಾವತ್ತೂ ಫುಟ್ಬಾಲ್ ಅಥವಾ ಕ್ರಿಕೆಟ್ ಮಾದರಿಯ ಟೀಂ ಗೇಮ್ ಅಲ್ಲವಾದ್ದರಿಂದ ಪ್ರತಿದಿನವೂ ಕಾಯ, ಮನಸ್ಸುಗಳನ್ನು ಏಕರೀತಿಯಲ್ಲಿ ಇರಿಸಿಕೊಳ್ಳಬೇಕಾದುದು ಅತ್ಯವಶ್ಯ.
1974ರಿಂದ 1981ರವರೆಗೆ ಈ ರೋಲ್ಯಾಂಡ್ ಗ್ಯಾರೋಸ್‌ನ ಮಣ್ಣಿನ ಅಂಕಣದಲ್ಲಿ ಆರು ಪ್ರಶಸ್ತಿಗಳನ್ನು ಗೆದ್ದ ಸ್ವೀಡನ್‌ನ ಟೆನಿಸ್ ದಂತಕಥೆ ಬ್ರೇನ್ ಬೋರ್ಗ್ ಕೂಡ ಫೆಡರರ್ ಜೊತೆಗೆ ಹೋಲಿಕೆಗೆ ನಿಲುಕಲಾರರು. ಫೆಡರರ್ರೇ ಹೇಳುವಂತೆ ಅಂದಿನ ಪರಿಸ್ಥಿತಿಯೇ ಬೇರೆ. ಇಂದಿನ ಸ್ಪರ್ಧಾತ್ಮಕ ಜಗತ್ತೇ ಬೇರೆ. ಅದು ಹೌದು ಕೂಡ. ನಿಸ್ಸಂಶಯವಾಗಿ ಇದು ಬುದ್ಧಿ, ಚಾಕಚಕ್ಯತೆಗಳನ್ನೊಳಗೊಂಡ ಪವರ್ ಗೇಮ್. ಪ್ರತಿಯೊಂದು ಪಂದ್ಯಾವಳಿಯ, ಪ್ರತಿಯೊಂದು ಪಂದ್ಯದ ಪ್ರತಿಯೊಂದು ಸರ್ವ್ ಕೂಡ ತುಂಬಾ ಮಹತ್ವದ್ದಾಗಿರುತ್ತದೆ. ಹಾಗಿರುವಾಗ ದಶಕಗಳಿಂದ ಫೆಡರರ್ ಒಂದೇ ಲಯವನ್ನು ಸಾಧಿಸಿರುವುದು ಸಾಮಾನ್ಯ ಸಂಗತಿಯೇನಲ್ಲ. ಇದೀಗ ಫ್ರೆಂಚ್ ಓಪನ್, ಆ ಬಳಿಕ ವಿಂಬಲ್ಡನ್, ಆಗಸ್ಟ್‌ನಲ್ಲಿ ಯು.ಎಸ್. ಓಪನ್ ಆಡಿದರೆ ಫೆಡರರ್ ನಿರಂತರ 56 ಗ್ರಾನ್ ಸ್ಲ್ಯಾಮ್‌ಗಳನ್ನು ಆಡಿದ ಹಾಗಾಗುತ್ತದೆ. ಈ ಸಾಧನೆ ಮಾಡಿದರೆ, ದಕ್ಷಿಣ ಆಫ್ರಿಕದ ವೇಯ್ನ್ ಪಿರೇರಾ ಮಾಡಿದ ನಿರಂತರ 56 ಗ್ರಾನ್ ಸ್ಲ್ಯಾಮ್ ದಾಖಲೆಯ ಸಾಧನೆಯನ್ನು ಸರಿಗಟ್ಟಿದ ಹಾಗಾಗುತ್ತದೆ. ಮುಂದಿನ ವರ್ಷ ಜನವರಿಯಲ್ಲಿ ನಡೆಯುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೆಡರರ್ ಆಡಿದಲ್ಲಿ ಅತಿ ಹೆಚ್ಚು ನಿರಂತರ ಗ್ರಾನ್ ಸ್ಲ್ಯಾಮ್‌ಗಳನ್ನು ಆಡಿದ ಖ್ಯಾತಿ ಫೆಡರರ್ ಪಾಲಾಗುತ್ತದೆ.

ಇತರರೊಂದಿಗೆ ಹೋಲಿಸಿದರೆ...
ಬೇಸ್‌ಬಾಲ್ ಆಟಗಾರ ಕಾಲ್ ರಿಪ್ಕನ್ 16 ವರ್ಷಗಳ ಅವಧಿಯಲ್ಲಿ ನಿರಂತರ 2,632 ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದ್ದಾರೆ. ಅಮೆರಿಕದ ಫುಟ್ಬಾಲಿಗ ಬ್ರೆಟ್ ಪಾರ್ವ್. ಯಾವುದೇ ಗಾಯದ ಸಮಸ್ಯೆಗಳಿಲ್ಲದೆ ನಿರಂತರ 297 ಪಂದ್ಯಗಳನ್ನು ಆಡಿದ್ದರು. ಇಂಗ್ಲೆಂಡಿನ ರಾನ್ ಗಿಗ್ಸ್ ಮ್ಯಾಂಚೆಸ್ಟರ್ ಪರ ನಿರಂತರ 24 ಫುಟ್ಬಾಲ್ ಋತುಗಳಲ್ಲಿ ತಮ್ಮ ಸಾಮರ್ಥ್ಯ ಮೆರೆದಿದ್ದರು. ಫೆಡರರ್ ಕೋಚ್ ಅನಾಕೋನ್ ಪ್ರಕಾರ ಟೆನಿಸ್ ಅನ್ನು ಉಳಿದ ಕ್ರೀಡೆಗಳೊಂದಿಗೆ ಹೋಲಿಸಿ ನೋಡುವುದು ಬಹಳ ಕಷ್ಟ. ಪೆಢ್ ವೃತ್ತಿ ಬದುಕಿನಲ್ಲಿ ಈಗಾಗಲೇ 14 ವರ್ಷಗಳು ಕಳೆದುಹೋಗಿವೆ. ಅವರ ಈಗಿನ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡರೆ, ಇನ್ನೂ ನಾಲ್ಕು ವರ್ಷ ನಿಸ್ಸಂಶಯವಾಗಿ ಆಡಬಲ್ಲರು. ಜೈ ಹೋ....

- ಜಿಪಿಕೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement