ಚಾಂದ್ ಶತಕ: ದಿಲ್ಲಿಗೆ ಪ್ರಶಸ್ತಿ
ವಿಶಾಖಪಟ್ಟಣ: ಉನ್ಮುಕ್ತ್ ಚಾಂದ್ (116) ಅವರ ಆಕರ್ಷಕ ಶತಕದ ನೆರವಿನೊಂದಿಗೆ ದಿಲ್ಲಿ ತಂಡ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಸ್ಸಾಂ ವಿರುದ್ಧ 75 ರನ್ಗಳ ಅಂತರದಿಂದ ವಿಜಯ ಸಾಧಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
19 ವರ್ಷದೊಳಗಿನ ವಿಶ್ವಕಪ್ ವಿಜೇತ ಭಾರತದ ತಂಡದ ನಾಯಕ ಚಾಂದ್, ಆಸ್ಸಾಂ ಬೌಲರ್ಗಳ ಬೆವರಿಳಿಸುವ ಮೂಲಕ ದಿಲ್ಲಿ ತಂಡದ ಜಯದ ರೂವಾರಿ ಎನಿಸಿದರು. 133 ಎಸೆತಗಳನ್ನೆದುರಿಸಿದ ಚಾಂದ್ ಅವರ 116 ರನ್ ಮೊತ್ತದಲ್ಲಿ 3 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದವು. ಇನ್ನೊಬ್ಬ ಆರಂಭಿಕ ಆಟಗಾರ ಪುನೀತ್ ಬಿಷ್ಟ್ (52) ಅವರೊಂದಿಗೆ ಚಾಂದ್ ಮೊದಲ ವಿಕೆಟ್ಗೆ 97 ರನ್ ದಾಖಲಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಪಂದ್ಯದಲ್ಲಿ ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದುಕೊಂಡ ದಿಲ್ಲಿ ತಂಡ, ನಿಗದಿತ ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 290 ರನ್ ಗಳಿಸಿತು.
ನಂತರ 291 ರನ್ಗಳ ಗುರಿ ಬೆನ್ನಟ್ಟಿದ ಆಸ್ಸಾಂ ತಂಡ 44.2 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 215 ರನ್ ಗಳಿಸುವ ಮೂಲಕ 75 ರನ್ಗಳ ಅಂತರದಿಂದ ಪಂದ್ಯವನ್ನು ಕೈಚೆಲ್ಲಿತು.
ಅಸ್ಸಾಂ ಪರ ಪ್ರೀತಮ್ ದಾಸ್ 3 ವಿಕೆಟ್, ಅರೂಪ್ ದಾಸ್ 2 ವಿಕೆಟ್ ಪಡೆದರೆ, ಸೈಯೀದ್ ಮೊಹ್ಮದ್, ಜಿ. ಶರ್ಮಾ ಹಾಗೂ ತರ್ಜಿಂದರ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.
ಆಸ್ಸಾಂ 14.1 ಓವರ್ಗಳಲ್ಲಿ 64 ರನ್ಗಳಿಗೆ ಅಗ್ರ ಮೂರು ವಿಕೆಟ್ ಕಳೆದುಕೊಂಡಿತ್ತು. ನಂತರ ಚೇತರಿಸಿಕೊಂಡಿತಾದರೂ. ಧೀರಜ್ ಜಾದವ್ (87) ವಿಕೆಟ್ ಬಿದ್ದ ನಂತರ ಬಂದ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಇದು ಆಸ್ಸಾಂ ಸೋಲಿಗೆ ಪ್ರಮುಖ ಕಾರಣವಾಯಿತು. ದಿಲ್ಲಿ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ನಾಯಕ ರಜತ್ ಭಾಟಿಯಾ 7 ಓವರ್ ಬೌಲಿಂಗ್ ಮಾಡಿ 36 ರನ್ ನೀಡುವ ಮೂಲಕ ಮೂರು ವಿಕೆಟ್ ಕಬಳಿಸಿದರು. ಪರ್ವಿಂದರ್ ಅವಾನಾ ಮತ್ತು ವರುಣ್ ಸೂದ್ ಅವರು ತಲಾ ಎರಡು ವಿಕೆಟ್ ಕಬಳಿಸಿದರೆ, ಸುಮಿತ್ ನರ್ವಾಲಾ ಒಂದು ವಿಕೆಟ್ ಪಡೆದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.