ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಗುವಾಮ್ ಮಣಿಸಿದ ಭಾರತ

Rashmi Kasaragodu
Updated On : 5 Mar 2013, 1:22 am

ಯಾಂಗೋನ್: ನಾಯಕ ಸುನಿಲ್ ಚೆಟ್ರಿ ಅವರು ಗಳಿಸಿದ ಎರಡು ಗೋಲುಗಳ ಸಹಾಯದಿಂದ ಭಾರತ ತಂಡ, ಸೋಮವಾರ ನಡೆದ ಎಎಫ್‌ಸಿ ಚಾಲೆಂಜ್ ಕಪ್ ಪಂದ್ಯಾವಳಿಯಲ್ಲಿ ಗುವಾಮ್ ವಿರುದ್ಧ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.  
ಪಂದ್ಯದ 49ನೇ ನಿಮಿಷ ಹಾಗೂ 91ನೇ ನಿಮಿಷದಲ್ಲಿ ಚೆಟ್ರಿ ಎರಡು ಗೋಲು ಬಾರಿಸಿ, ಭಾರತದ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದರು. ಭಾರತದ ಪರವಾಗಿ, ಕ್ಲಿಫೋರ್ಡ್ ಮಿರಾಂಡಾ (68ನೇ ನಿಮಿಷ) ಹಾಗೂ ಜುವೆಲ್ ರಾಜ (80ನೇ ನಿಮಿಷ) ಗೋಲು ದಾಖಲಿಸಿದರು.
ಮೊದಲಾರ್ಧದಲ್ಲಿ ಮಂಕು: ಪಂದ್ಯದ ಆರಂಭದಿಂದ, ಮೊದಲಾರ್ಧ ಮುಗಿಯುವವರೆಗೂ ಭಾರತ ತಂಡದ ಆಟಗಾರರಿಂದ ಯಾವುದೇ ಗೋಲು ದಾಖಲಾಗಿರಲಿಲ್ಲ. ಆದರೆ, ದ್ವಿತೀಯಾರ್ಧದಲ್ಲಿ ಮಿಂಚಿನ ಆಟವಾಡಿದ ಭಾರತೀಯರು ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು.
ದ್ವಿತೀಯಾರ್ಧ ಆರಂಭವಾದ 4 ನಿಮಿಷಗಳಲ್ಲಿ ಚೆಟ್ರಿ ಅವರು ತಮ್ಮ ತಂಡಕ್ಕೆ ಮೊದಲ ಗೋಲು ಗಳಿಸಿಕೊಟ್ಟರು. ಲೆನ್ನಿ ರೋಡ್ರಿಗ್ಯುಸ್ ಅವರಿಂದ ಚೆಂಡನ್ನು ಪಾಸ್ ಪಡೆದ ಚೆಟ್ರಿ, ಎದುರಾಳಿ ಗೋಲ್ ಕೀಪರ್ ಡಗ್ಲಾಸ್ ಹೆರ್ರಿಕ್ ಅವರ ಕಣ್ತಪ್ಪಿಸಿ ಗೋಲು ಹೊಡೆಯುವಲ್ಲಿ ಯಶಸ್ವಿಯಾದರು. ಈ ಮೊದಲ ಗೋಲು ದಾಖಲಾದ ನಂತರ, ಭಾರತದ ಖಾತೆಗೆ ಒಂದರ ಹಿಂದೊಂದರಂತೆ ಗೋಲು ಜಮೆಯಾಗುತ್ತಾ ಹೋದವು.
ಭಾರತಕ್ಕೆ ಎರಡನೇ ಗೋಲು ಲಭಿಸಿದ್ದು, ಪಂದ್ಯದ 68ನೇ ನಿಮಿಷಗದಲ್ಲಿ. ಈ ಬಾರಿ ಮಿರಾಂಡಾ ಅವರು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.
ಇದಾದ ನಂತರ, ಪಂದ್ಯದ 80ನೇ ನಿಮಿಷದಲ್ಲಿ ಜುವೆಲ್ ರಾಜ ಅವರು ಬದಲಿ ಆಟಗಾರ ಸಿ.ಕೆ. ವಿನೀತ್ ಅವರಿಂದ ಪಡೆದ ಚೆಂಡನ್ನು ಎದುರಾಳಿಗಳ ಗೋಲು ಪೆಟ್ಟಿಗೆಯೊಳಗೆ ನುಗ್ಗಿಸುವಲ್ಲಿ ಯಶಸ್ವಿಯಾದರು.
ಇದಾದ ನಂತರ, ಮತ್ತೆ ಮಿಂಚಿದ ನಾಯಕ ಚೆಟ್ರಿ, ಪಂದ್ಯದ 91ನೇ ನಿಮಿಷದಲ್ಲಿ ತಮ್ಮ ತಂಡಕ್ಕೆ ನಾಲ್ಕನೇ ಗೋಲು ತಂದುಕೊಟ್ಟರು.
ಪಂದ್ಯಾವಳಿಯ ತನ್ನ ಆರಂಭಿಕ ಪಂದ್ಯದಲ್ಲಿ, ತೈಪೇ ವಿರುದ್ಧ 2-0 ಅಂತರದ ಜಯ ಸಾಧಿಸಿದ್ದ ಭಾರತ, ಇದೀಗ ಗುವಾಮ್ ವಿರುದ್ಧ ಜಯ ಸಾಧಿಸಿ, ಒಟ್ಟು 6 ಅಂಕ ಗಳಿಸಿದೆ.


ಭುಟಿಯಾ ಮೊತ್ತದ ಸನಿಹದಲ್ಲಿ...
ಗುವಾಮ್ ವಿರುದ್ಧ ಸೋಮವಾರ ನಡೆದ ಎಎಫ್‌ಸಿ ಪಂದ್ಯದ 91ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಗಳಿಸಿದ ಗೋಲು ಅವರ ವೃತ್ತಿಜೀವನದ 40ನೇ ಗೋಲು ಆಗಿದೆ. ಮಾಜಿ ಫುಟ್ಬಾಲಿಗ ಭೈಚುಂಗ್ ಭುಟಿಯಾ ಅವರು ಒಟ್ಟು 42 ಗೋಲು ಗಳಿಸಿದ್ದು, ಇದೀಗ ಸುನಿಲ್, ಭುಟಿಯಾ ಅವರ ಮೊತ್ತಕ್ಕೆ ಸನಿಹದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement