ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಹೊಸ ಸವಾಲಿಗೆ ಸೈನಾ ಸಜ್ಜು

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ...

Mainashree
Updated On : 5 Mar 2013, 1:23 am

ಬರ್ಮಿಂಗ್‌ಹ್ಯಾಮ್: ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್, ಪಿ.ವಿ. ಸಿಂಧು, ಜ್ವಾಲಾ ಗುಟ್ಟಾ , ಅಶ್ವಿನ್ ಪೊನ್ನಪ್ಪ ಭಾಗವಹಿಸುತ್ತಿದ್ದಾರೆ. ಇದಲ್ಲದೇ, ಪರುಪಳ್ಳಿ ಕಶ್ಯಪ್, ಅಜಯ್ ಜಯರಾಮ್, ವಿ. ಡಿಜು ಅವರೂ ಪಂದ್ಯಾವಳಿಯಲ್ಲಿ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಲಿದ್ದಾರೆ. ಪ್ರಧಾನ ಸುತ್ತಿಗಾಗಿ ಅರ್ಹತಾ ಪಂದ್ಯಾವಳಿ ಮಂಗಳವಾರದಿಂದ ಆರಂಭವಾಗಲಿದೆ.  
ಪ್ರಧಾನ ಪಂದ್ಯಾವಳಿಯಲ್ಲಿ ಭಾರತೀಯರು: ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಈ ಪಂದ್ಯಾವಳಿಯಲ್ಲಿ 2007ರಿಂದ ಆಡುತ್ತಾ ಬಂದಿದ್ದಾರೆ. 2010ರಲ್ಲಿ ಪಂದ್ಯಾವಳಿಯ ಸೆಮಿಫೈನಲ್‌ವರೆಗೂ ತಮ್ಮ ಪಯಣವನ್ನು ಮುನ್ನಡೆಸಿದ್ದರು. ಅದು ಈವರೆಗೆ ಸೈನಾ ಅವರು, ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಮಾಡಿರುವ ಉತ್ತಮ ಸಾಧನೆ.
ಕಳೆದೆರಡು ವರ್ಷಗಳಿಂದ ಅವರು ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿ ಕೇವಲ ಕ್ವಾರ್ಟರ್ ಫೈನಲ್‌ವರೆಗೆ ಮಾತ್ರ ತಮ್ಮ ಪಯಣವನ್ನು ಸೀಮಿತಗೊಳಿಸಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ, ಅವರು ಕ್ವಾರ್ಟರ್ ಪಂದ್ಯಗಳಲ್ಲಿ ತಮಗಿಂತಲೂ ಕಡಿಮೆ ಶ್ರೇಯಾಂಕದ ಆಟಗಾರ್ತಿಯರ ಕೈಯ್ಯಲ್ಲಿ ಸೋಲು ಕಂಡಿರುವುದು ಅವರ ಪ್ರತಿಷ್ಠೆಗೆ ಕೊಂಚ ಧಕ್ಕೆ ತಂದಿದ್ದೂ ಉಂಟು. ಹಾಗಾಗಿಯೇ, ಈ ಬಾರಿಯ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ, ಪ್ರಶಸ್ತಿ ಗೆಲ್ಲುವ ತವಕದಲ್ಲಿ ವಿಶ್ವದ 2ನೇ ಶ್ರೇಯಾಂಕದಲ್ಲಿರುವ ಸೈನಾ ನೆಹ್ವಾಲ್ ಇದ್ದಾರೆ.
ಕಾಮನ್ವೆಲ್ತ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆಯ ಗರಿಯನ್ನೂ ಹೊಂದಿರುವ ಸೈನಾ ನೆಹ್ವಾಲ್‌ಗೆ, ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ತಮ್ಮ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್‌ನ ಸ್ಯಾಪ್ಸಿರೀ ಟೆರಾಟ್ಟಾನಚೈ ಅವರನ್ನು ಎದುರಿಸಲಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಸ್ಯಾಪ್ಸಿರಿ ಅವರನ್ನು ನಾಲ್ಕು ಬಾರಿ ಎದುರಿಸಿರುವ ಸೈನಾ, ಮೂರು ಬಾರಿ ಅವರ ವಿರುದ್ಧ ಜಯಗಳಿಸಿದ್ದಾರೆ. ಆದರೆ, ನಾಲ್ಕನೇ ಬಾರಿ ಇವರಿಬ್ಬರೂ ಕೊರಿಯಾ ಓಪನ್‌ನಲ್ಲಿ ಮುಖಾಮುಖಿಯಾಗಿದ್ದಾಗ, ಥಾಯ್ಲೆಂಡ್‌ನ ಹುಡುಗಿ, ಸೈನಾ ಅವರನ್ನು ಸೋಲಿಸಿದ್ದರು.
ಹಾಗಾಗಿ, ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿಯೂ ಸೈನಾ ಅವರಿಗೆ ಸ್ಯಾಪ್ಸಿರಿ ಸವಾಲಾಗಿ ನಿಂತರೆ ಅಚ್ಚರಿಪಡಬೇಕಿಲ್ಲ.  ಈ ಪಂದ್ಯದಲ್ಲಿ ಸೈನಾ ಜಯ ಸಾಧಿಸಿದರೂ, ಮುಂದಿನ ಪಂದ್ಯದಲ್ಲಿ ಸೈನಾ ಅವರು ಜಪಾನ್‌ನ ಮಿನಾತ್ಸು ಮಿಟಾನಿ ಅವರನ್ನು ಎದುರಿಸಲಿದ್ದಾರೆ. ಮಿನಾತ್ಸು ಸಹ ಭಾರತದ ಆಟಗಾರ್ತಿಗೆ ಸವಾಲೊಡ್ಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಫ್ರೆಂಚ್ ಓಪನ್ ಬ್ಯಾಂಡ್ಮಿಂಟನ್ ಪಂದ್ಯಾವಳಿಯಲ್ಲಿ ಸೈನ್ ಅಂತಿಮ ಸುತ್ತಿಗೆ ಕಾಲಿಟ್ಟಿದ್ದಾಗ, ಅವರಿಗೆ ಎದುರಾಳಿಯಾಗಿ ಆಡಿದ್ದು ಮಿನಾತ್ಸು ಅವರೇ. ಆ ಪಂದ್ಯದಲ್ಲಿ ಸೈನಾ ಅವರನ್ನು ಸೋಲಿಸಿ, ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಮಿನಾತ್ಸು, ಈ ಬಾರಿ ಯಾವ ರೀತಿ ಸವಾಲಾಗಿ ಪರಿಣಮಿಸುತ್ತಾರೋ ಕಾದು ನೋಡಬೇಕು. ಆದ್ದರಿಂದ ಮಿನಾತ್ಸು ಬಗ್ಗೆ ಸೈನಾ ಎಚ್ಚರಿಕೆಯಿಂದಿರಬೇಕು.
ಆರಂಭದ ಈ ಎರಡೂ ಪಂದ್ಯಗಳನ್ನು ಜಯ ಜಯಗಳಿಸಿದರೂ, ಅವರು ಎದುರಿಸಬೇಕಾಗಿರುವ ಸವಾಲು ಅಲ್ಲಿಗೇ ನಿಲ್ಲುವುದಿಲ್ಲ. ಮೂರನೇ ಸುತ್ತಿನ ಪಂದ್ಯ ಕ್ವಾರ್ಟರ್ ಫೈನಲ್ ಆಗಿದ್ದು ಅಲ್ಲಿ, ಸೈನಾಗೆ ಚೀನಾದ ಶಿಕ್ಸಿಯಾನ್ ವಾಂಗ್ ಅಥವಾ ಯಾಂಜಿಯಾವೋ ಜಿಯಾಂಗ್ ಅವರು ಎದುರಾಳಿಯಾಗಲಿದ್ದಾರೆ.
ಈ ಹಿಂದಿನ ಅಂಕಿ-ಅಂಶಗಳ ಪ್ರಕಾರ, ಸೈನಾ ಅವರು ಶಿಕ್ಸಿಯಾನ್ ಅವರನ್ನು ನಾಲ್ಕು ಬಾರಿ ಎದುರಿಸಿದ್ದಾರೆ. ಇವುಗಳಲ್ಲಿ ಮೂರು ಪಂದ್ಯಗಳಲ್ಲಿ ಸೈನಾ ಜಯ ಸಾಧಿಸಿದ್ದರೆ, ಒಂದು ಬಾರಿ ಶಿಕ್ಸಿಯಾನ್ ಜಯ ಸಾಧಿಸಿದ್ದಾರೆ. ಆದರೂ, ಇಬ್ಬರ ನಡುವಿನ ಆಟ ಪ್ರತಿಬಾರಿಯೂ ಮೂರು ಸೆಟ್‌ಗಳಿಗಿಂತ ಕಮ್ಮಿ ಆಗಿಲ್ಲ. ಇನ್ನು ಮತ್ತೊಬ್ಬ ಆಟಗಾರ್ತಿ ಯಾಂಜಿಯಾವೋ ಜಿಯಾಂಗ್ ಅವರ ವಿರುದ್ಧ ಇದುವರೆಗೆ ಐದು ಪಂದ್ಯಗಳನ್ನಾಡಿರುವ ಸೈನಾ, ಐದರಲ್ಲೂ ಸೋತಿದ್ದಾರೆ. ಶಿಕ್ಸಿಯಾನ್‌ಗಿಂತ ಸೈನಾ ಅವರೇ ಹೆಚ್ಚು ಬಾರಿ ಜಯ ಸಾಧಿಸಿರುವುದರಿಂದ ಕ್ವಾರ್ಟರ್ ಫೈನಲ್‌ನಲ್ಲಿ ಶಿಕ್ಸಿಯಾನ್ ಅವರೇ ಸೈನಾ ಎದುರಾಳಿಯಾದರೆ ಹೆಚ್ಚು ಅನುಕೂಲ.
ಸಿಂಧು ಅಭಿಯಾನ: ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಸಿಂಧು ಅವರಿಗೆ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್‌ನ ಒಂಗ್‌ಬಾಮ್‌ರುಂಗ್‌ಫಾನ್ ಬುಸಾನನ್ ಅವರು ಎದುರಾಳಿಯಾಗಲಿದ್ದಾರೆ. ಕಳೆದ ವರ್ಷ, ಇಂಡೋನೇಷ್ಯಾ ಓಪನ್ ಪಂದ್ಯಾವಳಿಯಲ್ಲಿ ಬುಸಾನನ್ ಅವರ ವಿರುದ್ಧ ಸಿಂಧು ಸೋಲು ಕಂಡಿದ್ದರು.
ಕಶ್ಯಪ್, ಅಜಯ್ ಕದನ: ವಿಶ್ವದ 11ನೇ ಶ್ರೇಯಾಂಕದಲ್ಲಿರುವ ಪರುಪಳ್ಳಿ ಕಶ್ಯಪ್ ಅವರು ಪುರುಷರ ಸಿಂಗಲ್ಸ್‌ನಲ್ಲಿ ತಮ್ಮ ಅಭಿಯಾನವನ್ನು ತೈಪೇನ ಜೆನ್ ಹಾವೊ ಹ್ಸು ಅವರ ವಿರುದ್ಧದ ಪಂದ್ಯದ ಮೂಲಕ ಆರಂಭಿಸಲಿದ್ದಾರೆ.
ಇನ್ನು, ಎರಡನೇ ಸುತ್ತಿನ ಪಂದ್ಯದಲ್ಲಿ ಅವರಿಗೆ ವಿಶ್ವದ 7ನೇ ಶ್ರೇಯಾಂಕದ ಆಟಗಾರ ಜಪಾನ್‌ನ ಕೆನಿಚಿ ಟ್ಯಾಗೋ ಅವರು ಎದುರಾಳಿಯಾಗಲಿದ್ದಾರೆ.
ಕಶ್ಯಪ್ ಅವರು ಎರಡನೇ ಸುತ್ತಿನ ಪಂದ್ಯದಲ್ಲೂ ಜಯ ಸಾಧಿಸಿದರೆ, ಅವರಿಗೆ ಮೂರನೇ ಸುತ್ತಿನ ಪಂದ್ಯದಲ್ಲಿ ಅವರು ಚೀನಾದ ಚೆನ್ ಲಾಂಗ್ ಅವರನ್ನು ಎದುರಿಸಬೇಕಾಗುತ್ತದೆ.
ಚೆನ್ ಅವರು ಕಶ್ಯಪ್ ಅವರನ್ನು ಈ  ಹಿಂದೆ ಮೂರು ಬಾರಿ ಸೋಲಿಸಿದ್ದರು. ಆದರೆ, ಕಳೆದ ವರ್ಷದ ಇಂಡೋನೇಷ್ಯಾ ಓಪನ್ ಪಂದ್ಯಾವಳಿಯಲ್ಲಿ ಈ ಇಬ್ಬರೂ ಮುಖಾಮುಖಿಯಾಗಿದ್ದಾಗ, ಕಶ್ಯಪ್ ಅವರೇ ಜಯಶಾಲಿಯಾಗಿದ್ದರು.
ಇನ್ನು, ಅಜಯ್ ಅವರು ತಮ್ಮ ಮೊದಲನೇ ಪಂದ್ಯದಲ್ಲಿ, ಚೀನಾದ ಜೆಂಗ್‌ಮಿಂಗ್ ವಾಂಗ್ ಅವರನ್ನು ಎದುರಿಸಲಿದ್ದಾರೆ. ಕಳೆದ ವರ್ಷದ ಹಾಂಗ್‌ಕಾಂಗ್ ಓಪನ್‌ನಲ್ಲಿ ಅಜಯ್ ಅವರು ವಾಂಗ್ ಅವರನ್ನು ಸೋಲಿಸಿದ್ದರು.
ಈ ಪಂದ್ಯದಲ್ಲಿ ಅವರು ಜಯಗಳಿಸಿದರೆ, ಮುಂದಿನ ಸುತ್ತಿನಲ್ಲಿ ಅವರು ವಿಶ್ವದ ನಂ. 1 ಆಟಗಾರ ಮಲೇಷ್ಯಾದ ಲೀ ಚಾಂಗ್ ವೈ ಅವರನ್ನು ಎದುರಿಸಲಿದ್ದಾರೆ.
ಜ್ವಾಲಾ, ಅಶ್ವಿನಿ ಪ್ರತಿಭೆಯೂ ಓರೆಗೆ
ಭಾರತದ ಮತ್ತೊಬ್ಬ ಟೆನಿಸ್ ತಾರೆ ಜ್ವಾಲಾ ಗುಟ್ಟಾ ಅವರು, ಈ ಬಾರಿಯ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಲಿದ್ದಾರೆ. ಸುಮಾರು ಏಳು ತಿಂಗಳುಗಳಿಂದ ವೃತ್ತಿಪರ ಬ್ಯಾಡ್ಮಿಂಟನ್‌ನಿಂದ ದೂರ ಉಳಿದಿದ್ದ ಇವರು, ಈ ಬಾರಿ ಮಿಶ್ರ ಡಬಲ್ಸ್ ವಿಭಾಗಲ್ಲಿ ತಮ್ಮ ಜೊತೆಯಾಟಗಾರ ವಿ. ಡಿಜು ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ.
ಈ ಜೋಡಿಯು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಜರ್ಮನ್  ಜೋಡಿಯಾದ ಪೀಟರ್ ಕೆಸ್ಬಾರ್ ಹಾಗೂ ಇಸಾಬೆಲ್ ಹೆರ್ಟಿಚ್ ಅವರನ್ನು ಎದುರಿಸಲಿದೆ.
ಇದಲ್ಲದೇ, ಮಹಿಳೆಯರ ಡಬಲ್ಸ್ ವಿಭಾಗದಲ್ಲೂ ಅವರು ಕಣಕ್ಕಿಳಿಯಲಿದ್ದು ಈ ವಿಭಾಗದಲ್ಲಿ ಜ್ವಾಲಾಗೆ ಪ್ರಜಾಂಕಾ ಸಾವಂತ್ ಜೊತೆ ನೀಡಲಿದ್ದಾರೆ. ತಮ್ಮ ಮೊದಲ ಪಂದ್ಯದಲ್ಲಿ ಈ ಜೋಡಿ, ಥಾಯ್ಲೆಂಡ್‌ನ ಜೋಡಿಯಾದ ಸೆರಿಥಾಮ್ಮರಾಕ್ ಅರ್ತಿಮಾ ಹಾಗೂ ಪೀರಾಯಾ ಮುಕಿಟಾಮೋರ್ನ್ ಅವರನ್ನು ಎದುರಿಸಲಿದೆ.
ಅಶ್ವಿನಿ ಕಣಕ್ಕೆ: ಇನ್ನು ಮಿಶ್ರ ಡಬಲ್ಸ್ ವಿಭಾಗದಲ್ಲಿ, ಅಶ್ವಿನಿ ಪೊನ್ನಪ್ಪ ಅವರು ತರುಣ್ ಕೋನಾ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ. ಈ ಜೋಡಿ, ತಮ್ಮ ಮೊದಲ ಪಂದ್ಯದಲ್ಲಿ ಇಂಡೋನೇಷ್ಯಾದ ಜೋಡಿಯಾದ ಫ್ರಾನ್ ಕುರ್ನಿಯಾವನ್ ಹಾಗೂ ಶೆಂಡಿ ಪುಶ್ಪಾ ಅವರನ್ನು ಎದುರಿಸಲಿದೆ.  ಇನ್ನು,ಅಶ್ವಿನಿ ಅವರು, ಪ್ರಾಧಾನ್ಯ ಗಾದ್ರೆ ಅವರೊಂದಿಗೆ  ಮಹಿಳಾ ಡಬಲ್ಸ್ ಆಡಲಿದ್ದು, ತಮ್ಮ ಮೊದಲ ಪಂದ್ಯದಲ್ಲಿ ವೇಲ್ಸ್‌ನ ಜೋಡಿಯಾದ ಸರಾ ಥಾಮಸ್ ಹಾಗೂ ಕ್ಯಾರಿಸ್ಸಾ ಟರ್ನರ್ ಜೋಡಿಯನ್ನು ಎದುರಿಸಲಿದ್ದಾರೆ.
ಇತರರು: ಅರ್ಹತಾ ಸುತ್ತಿನ ಪಂದ್ಯಗಳಲ್ಲಿ, ಇವರಲ್ಲದೇ, ಭಾರತದ ಇನ್ನಿತರ ಬ್ಯಾಡ್ಮಿಂಟನ್ ಆಟಗಾರರಾದ ಆನಂದ್ ಪವಾರ್, ಸೌರಭ್ ವರ್ಮಾ, ಸಾಯ್ ಪ್ರಣೀತ್ ಹಾಗೂ ಆರ್‌ಎಂವಿ ಗುರುಸಾಯಿದತ್ ಅವರು ಪುರುಷರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದರೆ, ಪುರುಷರ ಡಬಲ್ಸ್ ವಿಭಾಗದಲ್ಲಿ ತರುಣ್-ಅರುಣ್ ವಿಷ್ಣು, ಪ್ರಣವ್ ಜೆರ್ರಿ- ಅಕ್ಷಯ್ ದಿವಾಕರ್ ಆಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement