ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ ಅತಿಥೇಯರ ಸವಾಲ್

Mainashree
Updated On : 5 Mar 2013, 10:30 am

ಯಾಂಗೋನ್: ಬರುವ ವರ್ಷ ನಡೆಯಲಿರುವ ಎಎಫ್‌ಸಿ ಚಾಲೆಂಜ್ ಕಪ್ ಪಂದ್ಯಾವಳಿಗೆ ಅರ್ಹತೆ ಪಡೆಯಲು ಎದುರು ನೋಡುತ್ತಿರುವ ಭಾರತ ಫುಟ್ಬಾಲ್ ತಂಡ, ಇಲ್ಲಿ ನಡೆಯುತ್ತಿರುವ ಅರ್ಹತಾ ಸುತ್ತಿನ ಪಂದ್ಯಾವಳಿಯ ತನ್ನ ಅಂತಿಮ ಪಂದ್ಯದಲ್ಲಿ ಆತಿಥೇಯ ಮ್ಯಾನ್ಮಾರ್ ವಿರುದ್ಧ ಜಯ ಕಾಣುವ ಕಾತರದಲ್ಲಿದೆ.
ಪಂದ್ಯಾವಳಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ, ಈ ಪಂದ್ಯದಲ್ಲಿ ಡ್ರಾ ಸಾಧಿಸಿದರೂ, 2014ರ ಎಎಫ್‌ಸಿ ಚಾಲೆಂಜ್ ಕಪ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ಹೀಗಾಗಿ ಪಂದ್ಯ ಭಾರತಕ್ಕೆ ಸವಾಲಾಗಿ ಪರಿಣಮಿಸಿದೆ.
ಭಾರತ ತನ್ನ ಮೊದಲ ಪಂದ್ಯದಲ್ಲಿ ತೈಪೇ ವಿರುದ್ಧ 2-1 ಅಂತರದಿಂದ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿತ್ತು. ನಂತರ ಸೋಮವಾರ ಗುವಾಮ್ ವಿರುದ್ಧ ನಡೆದ ಪಂದ್ಯದಲ್ಲಿ 4-0 ಅಂತರದಿಂದ ಜಯ ಸಾಧಿಸಿತ್ತು.
ಆರು ಅಂಕಗಳನ್ನು ಗಳಿಸಿರುವ ಭಾರತ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ, 4 ಅಂಕಗಳನ್ನು ಪಡೆದಿರುವ ಮ್ಯಾನ್ಮಾರ್ 2ನೇ ಸ್ಥಾನದಲ್ಲಿದೆ. ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ತಂಡ ಮಾಲ್ಡೀವ್ಸ್‌ನಲ್ಲಿ ನಡೆಯಲಿರುವ ಎಎಫ್‌ಸಿ ಚಾಲೆಂಜ್ ಕಪ್‌ಗೆ ಅರ್ಹತೆ ಪಡೆಯಲಿದೆ.
'ಪಂದ್ಯ ಡ್ರಾ ಆದರೂ ಸಾಕು ಎಂಬ ಮನಸ್ಥಿತಿಯಲ್ಲಿ ನೀವಿದ್ದೀರಿ. ಆದರೆ ಡ್ರಾಕ್ಕಾಗಿ ನಾವು ಪಂದ್ಯದಲ್ಲಿ ಭಾಗವಹಿಸುತ್ತಿಲ್ಲ' ಎಂದು ಭಾರತ ತಂಡದ ತರಬೇತುದಾರ ವಿಮ್ ಕೊವರ್‌ಮನ್ಸ್ ತಮ್ಮ ಆಟಗಾರರಿಗೆ ಕಿವಿ ಮಾತು ಹೇಳಿದ್ದಾರೆ.  ಗುವಾಮ್ ವಿರುದ್ಧದ ಪಂದ್ಯದಲ್ಲಿ ಎರಡು ಗೋಲು ದಾಖಲಿಸಿದ ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ಇನ್ನೆರಡು ಗೋಲು ದಾಖಲಿಸಿದರೆ, ಭೈಚುಂಗ್ ಭುಟಿಯಾ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಈಗ ಭುಟಿಯಾ ಅವರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಭಾರತದ ಆಟಗಾರ ಎನಿಸಿದ್ದಾರೆ.
ಮ್ಯಾನ್ಮಾರ್ ವಿರುದ್ಧದ ಪಂದ್ಯದಲ್ಲಿ ಅದರ ಅಭಿಮಾನಿಗಳ ಎದುರಿಗಅದನ್ನು ಸೋಲಿಸಲು ಭಾರತ ಸಮರ್ಥವಾದ ಹೋರಾಟ ನಡೆಸಲಿದೆ ಎಂದು ಚೆಟ್ರಿ ಹೇಳಿದ್ದಾರೆ.
'ಪಂದ್ಯದಲ್ಲಿ ಮ್ಯಾನ್ಮಾರ್ ತಂಡಕ್ಕೆ ಗ್ಯಾಲರಿಯಿಂದ ತವರಿನ ಅಭಿಮಾನಿಗಳ ಬೆಂಬಲ ದೊರಕಲಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ಗ್ಯಾಲರಿಯಿಂದ ಬೆಂಬಲ ಸಿಕ್ಕಾಗ ಮೈದಾನದಲ್ಲಿರುವ ತಂಡ ಅಪಾಯಕಾರಿಯಾದ ಆಟ ಮುಂದುವರಿಸುತ್ತದೆ. ಇದು ಪಂದ್ಯದಲ್ಲಿ ನಮಗೆ ದೊಡ್ಡ ಸವಾಲಾಗಲಿದೆ. ಆದರೆ, ಜಯ ಸಾಧಿಸಲು ನಾವು ಸಮರ್ಥ ಹೋರಾಟ ನಡೆಸಲಿದ್ದೇವೆ' ಎಂದಿದ್ದಾರೆ ಚೆಟ್ರಿ.
ಗುವಾಮ್ ವಿರುದ್ಧದ ಮೊದಲಾರ್ಧ ಪಂದ್ಯದಲ್ಲಿ ಭಾರತ ಸಮರ್ಥವಾದ ಹೋರಾಟ ನಡೆಸಿರಲಿಲ್ಲ. ಮ್ಯಾನ್ಮಾರ್ ವಿರುದ್ಧ ಜಯ ಸಾಧಿಸಬೇಕಾದರೆ, ಈ ತಪ್ಪು ಮರುಕಳಿಸದಂತೆ ಭಾರತ ತಂಡ ನೋಡಿಕೊಳ್ಳಬೇಕಾಗಿದೆ. ಗುವಾಮ್ ವಿರುದ್ಧದ ದ್ವಿತೀಯಾರ್ಧ ಪಂದ್ಯದಲ್ಲೇ ಭಾರತ 3 ಗೋಲುಗಳನ್ನು ದಾಖಲಿಸಿತ್ತು.
ಇದು ಅಂತಿಮ ಮತ್ತು ಮಹತ್ವದ ಪಂದ್ಯವಾಗಿರುವುದರಿಂದ ಭಾರತ ಇನ್ನಷ್ಟು ಜಾಗೃತಿಯ ಹೆಜ್ಜೆಯನ್ನಿಡಬೇಕಾದ ಅಗತ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement